ದೊಡ್ಡೇರಿ
ಮಧುಗಿರಿ ತಾಲ್ಲೂಕು, ದೊಡ್ಡೇರಿ ಗ್ರಾಮ ಪಂಚಾಯಿತಿ ಕೇಂದ್ರವಾದ ದೊಡ್ಡೇರಿಯು ಗ್ರಾಪಂನ ನಿರ್ಲಕ್ಷ್ಯದಿಂದಾಗಿ ಅನೈರ್ಮಲ್ಯದ ತಾಣವಾಗಿ ಪರಿಣಮಿಸಿದೆ. ಗ್ರಾಮದ ಚರಂಡಿಗಳೆಲ್ಲ ಕೊಚ್ಚೆಯಿಂದ ತುಂಬಿ ತುಳುಕಾಡುತ್ತಿವೆ. ಗಬ್ಬೆದ್ದು ದುರ್ವಾಸನೆ ಬರುತ್ತಿರುವ ಈ ಸ್ಥಳಕ್ಕೆ ಗ್ರಾಪಂನ ಅಧ್ಯಕ್ಷರಾಗಲಿ, ಸದಸ್ಯರಾಗಲಿ ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಲಿ (ಪಿಡಿಓ) ಭೇಟಿ ನೀಡದೆ, ಸ್ವಚ್ಚತೆಗೆ ಆದ್ಯತೆ ನೀಡದೆ, ಅನುದಾನಕ್ಕೆ ಮಾತ್ರ ಹೋರಾಟ ಮಾಡುತ್ತಿದ್ದಾರೆ ಎಂಬುದಾಗಿ ನಾಗರಿಕರು ಹಾದಿ, ಬೀದಿಯಲ್ಲಿ ವ್ಯಂಗ್ಯವಾಡುತ್ತಿದ್ದಾರೆ.
ನಾಮಕಾವಸ್ಥೆಯ ಈ ಗ್ರಾಮ ಪಂಚಾಯಿತಿ ಸದಸ್ಯರುಗಳು, ಅಧ್ಯಕ್ಷರು ಹಳ್ಳಿಗಳಿಗೆ ಭೇಟಿ ನೀಡದೆ, ನಿರ್ಲಕ್ಷ್ಯ ವಹಿಸಿರುವುದು ಗ್ರಾಮಗಳಲ್ಲಿ ವಿವಿಧ ಸಮಸ್ಯೆಗಳು ಉಲ್ಬಣಿಸಲು ಕಾರಣವಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ (ಪಿಡಿಓ) ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂಬಂತಾಗಿದ್ದಾರೆ. ಇವರ ಕಾರ್ಯವೈಖರಿಯನ್ನು ಗಮನಿಸಿದರೆ ಇವರಿಂದ ಗ್ರಾಮದ ಅಭಿವೃದ್ದಿ ಸಾಧ್ಯವೆ ಇಲ್ಲವೆನಿಸುತ್ತದೆ ಎಂದು ಗ್ರಾಮದ ನಂದೀಶ್ ಹಾಗೂ ಇತರರು ಆಕ್ರೋಶ ವ್ಯಕ್ತ ಪಡಿಸುತ್ತಾರೆ.
ಈ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ನೆಪ ಮಾತ್ರಕ್ಕೆ ಇದ್ದಾರೆ. ಕಾರ್ಯಾಲಯಕ್ಕೆ ಹಾಜರಾಗಿ ಸಾರ್ವಜನಿಕರ ಕೆಲಸಗಳಲ್ಲಿ ತೊಡಗದೆ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿ ಎಲ್ಲಿಗೆ ಹೋಗುತ್ತಾರೊ ಗೊತ್ತಿಲ್ಲವೆಂಬ ಮಾತು ಗ್ರಾಪಂನ ಡಿ ಗ್ರೂಪ್ ನೌಕರರಿಂದಲೆ ತಿಳಿದು ಬರುತ್ತಿದೆ.
ಗ್ರಾಮದ ಜನತೆಗೆ ನೀರಿನ ಸೌಕರ್ಯ ಕಲ್ಪಿಸುವ ಸಲುವಾಗಿ ಗ್ರಾಮದಲ್ಲಿ ಎರಡು ಮೈನ್ ಟ್ಯಾಂಕನ್ನು ನಿರ್ಮಿಸಿ ನೀರು ಸರಬರಾಜು ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಗ್ರಾಮಕ್ಕೆ 80 ವಾಲ್ವ್‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಎಲ್ಲಾ ವಾಲ್ವ್‍ಗಳು ಕೆಲಸ ನಿರ್ವಹಿಸುತ್ತಿವೆ. ಮುಖ್ಯ ಪೈಪ್‍ಲೈನ್ ದೊಡ್ಡೇರಿ ಗ್ರಾಮದ ಸೇತುವೆ ಬಳಿ ಒಡೆದು ಹೋಗಿ ವೃಥಾ ನೀರು ಪೋಲಾಗುತ್ತಿದ್ದು, ಆ ನೀರಿನಲ್ಲಿ ಹಂದಿ, ನಾಯಿಗಳು ಹೊರಳಾಡುತ್ತಿವೆ. ಕೆಲವರು ಇಲ್ಲಿಯೆ ಮಲ ವಿಸರ್ಜನೆ ಮಾಡಿ ಶೌಚಕ್ಕೆ ಇದೇ ನೀರು ಬಳಸುತ್ತಿದ್ದಾರೆ. ಇದರಿಂದಾಗಿಯೆ ಮತ್ತಷ್ಟು ಅನೈರ್ಮಲ್ಯ ಉಂಟಾಗುತ್ತಿದೆ. ಗ್ರಾಮದಲ್ಲಿ ಸುಮಾರು ನಲವತ್ತು, ಐವತ್ತು ಜನ ಜ್ವರ, ತಲೆನೋವು ಎಂದು ಆಸ್ಪತ್ರೆಗೆ ಅಲೆಯುತ್ತಿದ್ದಾರೆ.
ಗ್ರಾಮಗಳಲ್ಲಿ ಒಂದು ಬಾರಿಯಾದರೂ ಸಹ ಚರಂಡಿ ಸ್ವಚ್ಚತೆ ಮಾಡಿರುವುದಿಲ್ಲ. ಕೆಲವು ಗಲ್ಲಿಗಳಲ್ಲಿ ಮೂಗು ಮುಚ್ಚಿಕೊಂಡು ಸಂಚಾರಿಸಬೇಕಾಗಿದೆ. ತುರ್ತಾಗಿ ಸ್ವಚ್ಚತೆ ಕೈಗೊಳ್ಳಿ ಎಂದು ಬಸವರಾಜು (ಕುಂಟಪ್ಪ), ಬಲ್ಲೆದಯ್ಯ ಸೇರಿದಂತೆ ಇನ್ನು ಹಲವು ಸಾರ್ವಜನಿಕರು ಲಿಖಿತವಾಗಿ ಗ್ರಾಪಂಗೆ ಅರ್ಜಿ ನೀಡಿದ್ದಾರೆ. ಆದರೂ ಸಹ ಎಚ್ಚೆತ್ತುಕೊಳ್ಳದೆ, ಜಡ್ಡುಗಟ್ಟಿರುವ ಈ ಗ್ರಾಮ ಪಂಚಾಯಿತಿಯನ್ನು ಬಡಿದೆಬ್ಬಿಸುವ ಮೇಲಧಿಕಾರಿಗಳು ಮುಂದಾದರೂ ಇಲ್ಲಿಗೆ ಬರುವರೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.