ಮಂಡ್ಯ :
ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಹೆಚ್. ಗುರು ಸ್ವಗ್ರಾಮ ಕೆ.ಎಂ.ದೊಡ್ಡಿ ಗ್ರಾಮದಲ್ಲಿ ಪಾಕ್ ಪರ ಘೋಷಣೆ ಕೂಗಿದವನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ಹುತಾತ್ಮರಾದ ಗುರು ಅವರಿಗೆ ನಾಡಿಗೆ ನಾಡೇ ಕಂಬನಿ ಮಿಡಿದು ಗೌರವ ಸಲ್ಲಿಸಿದ್ದು, ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಆದರೆ, ಗುರು ಅವರ ಅಂತ್ಯಸಂಸ್ಕಾರ ನಡೆದ ಕೆಎಂ ದೊಡ್ಡಿಯಲ್ಲಿ ಯುವಕನೊಬ್ಬ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದಾನೆ.
ಕೆ.ಎಂ.ದೊಡ್ಡಿಯ ಮಿಲ್ ವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಸಾದಿಕ್ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಆಗ ಆತನನ್ನು ಸುತ್ತುವರಿದು ಸ್ಥಳೀಯ ಯುವಕರು ನಾವು ಗುರುವನ್ನ ಕಳೆದುಕೊಂಡು ಪಾಕಿಸ್ತಾನದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದರೆ, ಇವ ಇಲ್ಲೇ ಇದ್ದಾನೆ ಏ ಯಾವ ಊರು ನಿಂದು, ನಿನ್ ಐಡಿ ಕಾರ್ಡ್ ತೋರಿಸು ಯಾಕ್ ಹಾಗೆ ಕೂಗುತ್ತೀಯಾ ಎಂದೆಲ್ಲಾ ವಿಚಾರಿಸಿದ್ದಾರೆ.
ಈತ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರಿಂದ ಆಕ್ರೋಶಗೊಂಡ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ನಂತರ ಆತನ ಬಾಯಿಯಿಂದಲೇ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿಸಿದ್ದಾರೆ.
ಕೊನೆಗೆ ಸ್ಥಳೀಯ ಯುವಕರು ಪ್ರಶ್ನೆ ಮಾಡುತ್ತಿದ್ದಂತೆ ಭಾರತ್ ಮಾತಾಕಿ ಜೈ ಎಂದು ಒಮ್ಮೆ ಹೇಳಿ ಮತ್ತೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾನೆ. ಇದರಿಂದ ಕೋಪಗೊಂಡ ಜನರು ಆತನಿಗೆ ಧರ್ಮದೇಟು ನೀಡಿ, ಕೆಲಸಕ್ಕೆ ಕರೆದುಕೊಂಡು ಬಂದಿದ್ದ ಮೇಸ್ತ್ರಿಗೆ ಹೀಗೆಲ್ಲಾ ಮಾಡದಂತೆ ನೋಡಿಕೊಳ್ಳಬೇಕೆಂದು ತಿಳಿಸಿ, ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ