ದಾವಣಗೆರೆ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಸರ್ಕಾರಿ ನೌಕರರ ಮುಂಬಡ್ತಿ ಮೀಸಲಾತಿ ವಿಧೇಯಕ ಶೀಘ್ರದಲ್ಲಿಯೇ ಅನುಷ್ಠಾನಗೊಳ್ಳಲಿದ್ದು, ಹಿಂಬಡ್ತಿ ಪಡೆದಿದ್ದ ಅಧಿಕಾರಿಗಳು ಇನ್ನೂ 15 ದಿನಗಳಲ್ಲಿ ಮತ್ತೆ ಮುಂಬಡ್ತಿ ಪಡೆಯಲಿದ್ದಾರೆಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಯ ನೀಡಿದ್ದಾರೆ.
ನಗರದ ಶಿವಯೋಗಿ ಮಂದಿರದಲ್ಲಿ ಜಿಲ್ಲಾ ಛಲವಾದಿ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದಾನ ಮತ್ತು ಜನಜಾಗೃತಿ ಸಮಾವೇಶವನ್ನು ಭೋದಿ ವೃಕ್ಷಕ್ಕೆ ನೀರೆರೆಯುವ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು.
ಏಳು ಜನ ಆತ್ಮಹತ್ಯೆ:
35 ಜನ ಮುಖ್ಯ ಅಭಿಯಂತರರಲ್ಲಿ 30 ಜನರು ದಲಿತರೇ ಇದ್ದರೆ, ಅವರಿಗೇಕೆ ಮುಂಬಡ್ತಿ ನೀಡಬೇಕೆಂಬ ಕಾರಣಕ್ಕೆ ಕೆಲವರ ಹುನ್ನಾರದಿಂದ ಎಸ್ಸಿ, ಎಸ್ಟಿ ಸಮುದಾಯದ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರಾಗಿ, ನಿರ್ದೇಶಕರು ಸಹಾಯಕ ನಿರ್ದೇಶಕರಾಗಿ ಹಿಂಬಡ್ತಿ ಪಡೆದರು.
ಇದರಿಂದ ಮನನೋಂದು 7 ಜನ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಹಿಂದಿನ ಸಿದ್ದರಾಮಯ್ಯನವರ ಸರ್ಕಾರ ಬಡ್ತಿ ವಾಪಾಸು ನೀಡಬೇಕೆಂಬ ಕಾರಣಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಸರ್ಕಾರಿ ನೌಕರರ ಮುಂಬಡ್ತಿ ಮೀಸಲಾತಿ ವಿಧೇಯಕವನ್ನು ಸಿದ್ಧಪಡಿಸಿದ್ದು, ಈ ವಿಧಯೇಕವು ಮೈತ್ರಿ ಸರ್ಕಾರದಲ್ಲಿ ಅನುಷ್ಠಾನ ಆಗಬೇಕಷ್ಟೆ ಎಂದರು.
ನಾನು, ಪ್ರಿಯಾಂಕ ಖರ್ಗೆ ಸೇರಿದಂತೆ ಹಲವು ಸಚಿವರು ಶಾಸಕರು ಮುಖ್ಯಮಂತ್ರಿಗಳಿಗೆ, ಬೇರೆಯವರಿಗೆ ಬಡ್ತಿ ನೀಡಿವಂತೆ ನೀಡಿ, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ನಮ್ಮ ಹಕ್ಕು ಕಿತ್ಕೋಬೇಡಿ ಎಂಬುದಾಗಿ ಮನವರಿಕೆ ಮಾಡಿಕೊಟ್ಟು ಯಶಸ್ವಿಯಾಗಿದ್ದು, ಇನ್ನೂ 15 ದಿನಗಳಲ್ಲಿ ಹಿಂಬಡ್ತಿ ಪಡೆದ ಎಲ್ಲಾ ಪರಿಶಿಷ್ಟ ನೌಕರರು ಮುಂಬಡ್ತಿ ಪಡೆಯಲಿದ್ದಾರೆಂದು ಹೇಳಿದರು.
ನಮಗೇ ಅಂಬೇಡ್ಕರೇ ದೇವರು:
ನಮಗೆ ಎಲ್ಲಾ ದೇವರಿಗಿಂತ ಹೆಚ್ಚು, ನಮ್ಮ ದೇವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಾಗಿದ್ದು, ಅವರೇ ನಮ್ಮ ಸರ್ವಸ್ವ ಆಗಿದ್ದಾರೆ. ಮನುಷ್ಯ ಕುಲವನ್ನು ವರ್ಗೀಕರಣ ಮಾಡಿ, ವರ್ಣಾಶ್ರಮ ಧರ್ಮ ಪ್ರತಿಪಾದನೆ ಮಾಡಿರುವುದು ಭಾರತದ ಮಹಾ ಅಪರಾಧವಾಗಿದ್ದು, ಕಾಲ ಕ್ರಮೇಣ ಬುದ್ಧ-ಬಸವ-ಗಾಂಧಿ ಎಲ್ಲರೂ ಸಮಾನತೆಯನ್ನು ಪ್ರತಿಪಾದಿಸಿದರು. ನಂತರ ಸಮಾನ್ಯ ಮನೆತನದಲ್ಲಿ 14ನೇ ಮಗನಾಗಿ ಹುಟ್ಟಿದ ಅಂಬೇಡ್ಕರ್ ಶೋಷಿತರ ದನಿಯಾಗಿ ನಿಲ್ಲುವ ಮೂಲಖ ಸ್ವಾತಂತ್ರ್ಯ ಹೋರಾಟ ಮತ್ತು ಶೋಷಿತರ ಹೋರಾಟವನ್ನು ಜತೆ, ಜತೆಗೆ ಕೊಂಡ್ಡೊಯ್ದರು ಎಂದು ಸ್ಮರಿಸಿದರು.
ಹಿತಾಸಕ್ತಿಗೆ ವಿರುದ್ಧ:
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾನತೆ ತರಲು ಮುಂದಾಗಿದ್ದು, ಈ ದೇಶದ ದೊಡ್ಡ ಬದಲಾವಣೆಯಾಗಿದೆ. ಆದರೆ, ಇಂದು ಸಂವಿಧಾನ ಬದಲಾಗಬೇಕು ಎನ್ನುವವರೆಲ್ಲೂ ಈ ದೇಶದ ಹಿತಾಸಕ್ತಿಗೆ ವಿರುದ್ಧವಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟ ಮುಂದುವರೆಸಿ:
ಈ ದೇಶ ಬದಲಾಗಬೇಕಾದರೆ, ವರ್ಣಾಶ್ರಮ ಪದ್ಧತಿಯ ವರ್ಗೀಕೃತ ವ್ಯವಸ್ಥೆ ಹೋಗಬೇಕು. ಇದಕ್ಕಾಗಿ ಎಲ್ಲರೂ ಗಟ್ಟಿ ಧ್ವನಿ ಎತ್ತಬೇಕು. ನಮ್ಮ ಶೋಷಿತ ಸಮುದಾಯಗಳಿಗೆ ಮನೆ ಬಾಡಿಗೆ ಕೊಡದಿರುವುದು, ಬಡ್ತಿ ನೀಡದಿರುವುದು, ನೀರು ಕೊಡದಿರುವುದು, ದೇವಾಲಯಗಳ ಪ್ರವೇಶ ನಿರಾಕರಿಸಿರುವುದು ಇವೆಲ್ಲವೂ ನಾವು ಇನ್ನೂ ಅತ್ಯಂತ ತಳ ಮಟ್ಟದಲ್ಲಿದ್ದೇವೆ ಎಂಬುದರ ಕುರುಹುಗಳಾಗಿವೆ. ಇವೆಲ್ಲಾ ಹೋಗಬೇಕಾರೆ, ಬಾಬಾ ಸಾಹೇಬ್ ಅಂಬೇಡ್ಕರ್ ನಡೆಸಿಕೊಂಡು ಬಂದ ಹೋರಾಟವನ್ನು ಮುಂದು ವರೆಸಬೇಕು. ಅಕಸ್ಮಾತ್ ಈ ಹೋರಾಟವನ್ನು ಮರೆತರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲ್ಲ ಎಂದರು.
ಶಪಥ ಮಾಡಿ:
ನಮ್ಮ ಸಮುದಾಯದ ತಂದೆ-ತಾಯಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಉನ್ನತ ಅಧಿಕಾರಿಗಳನ್ನಾಗಿ ಮಾಡುತ್ತೇವೆಂಬುದಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಲ್ಲಿ ಶಪಥ ಮಾಡಬೇಕು. ಅಲ್ಲದೆ, ಉನ್ನತ ಅಧಿಕಾರಿಗಳಾದವರು ಸಮಾಜದ ಒಂದು ಮಗುವನ್ನಾದರೂ ಓದಿಸುತ್ತೇನೆಂದು ಶಪಥ ಮಾಡಬೇಕೆಂದು ಕರೆ ನೀಡಿದರು.ಛಲವಾದಿ ಮಹಾಸಭಾ ನೀಡಿದ ವಿವಿಧ ಬೇಡಿಕೆಗಳ ಪೈಕಿ ಕೆಲ ಬೇಡಿಕೆ ಈಡೇರಿಸಲು ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಸ್ವಾಭಿಮಾನಿ ಸಮಾಜ:
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಛಲವಾದಿ ಸಮಾಜಬಾಂಧವರು ತಮ್ಮ ಕುಲಕಸುಬು ಮಾಡಿಕೊಂಡು ಗೌರವಯುತವಾಗಿ ಬದುಕುತ್ತಿರುವ ಸ್ವಾಭಿಮಾನಿ ಸಮುದಾಯವಾಗಿದೆ. ಚಿತ್ರದುರ್ಗದ ಹೆಚ್.ಹನುಮಂತಪ್ಪನವರು ನನ್ನ ರಾಜಕೀಯ ಗುರುಗಳಾಗಿದ್ದಾರೆ. ಅಲ್ಲದೆ, ಹರಿಹರದಲ್ಲಿ ಜನಸಿದ ಬಸವಲಿಂಗಪ್ಪನವರು ಸಾಕಷ್ಟು ಬಾರಿ ಮಂತ್ರಿಯಾಗಿ ಇತಿಹಾಸ ಬರೆದ ವ್ಯಕ್ತಿಯಾಗಿದ್ದಾರೆ ಎಂದರು.
ಸಿಎಂ ಸ್ಥಾನ ದಕ್ಕಲಿಲ್ಲ:
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ನಾನು ಬಲ್ಲಂತೆ ಛಲವಾದಿ ಸಮುದಾಯದ ಕೆ.ಹೆಚ್.ರಂಗನಾಥ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಆದರೆ, ಈ ವರೆಗೂ ನಿಮ್ಮ ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ದಕ್ಕದಿರುವುದು ದೌರ್ಭಾಗ್ಯವಾಗಿದೆ. ಮಲ ಹೋರುವ ಪದ್ಧತಿಯನ್ನು ನಿಷೇಧ ಮಾಡಿದ ಬಸವಲಿಂಗಪ್ಪನವರಿಗೂ ಸಹ ಮುಖ್ಯಮಂತ್ರಿ ಸ್ಥಾನ ತಪ್ಪಿಸಲಾಯಿತು ಎಂದು ಹೇಳಿದರು.
ಸಿಎಂ ಆಗ್ತಾರೆ:
ಹರಿಹರ ಶಾಸಕ ಎಸ್.ರಾಮಪ್ಪ ಮಾತನಾಡಿ, ಜಿ.ಪರಮೇಶ್ವರ್ ಇಂದಲ್ಲಾ, ನಾಳೆ ಮುಖ್ಯಮಂತ್ರಿ ಆಗೇ ಆಗುತ್ತಾರೆ. ನಾನು ಎಂದಿಗೂ ನಿಮ್ಮ ಸಮುದಾಯದ ಜೊತೆಗಿರುತ್ತೇನೆ. ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಿಸುವ ಮಾತನಾಡಿದರೂ ಅವರ ಪಕ್ಷದ ಮೋದಿ, ಅಮಿತ್‍ಷಾ ಕಡಿವಾಣ ಹಾಕಿಲ್ಲ. ಇವೆಲ್ಲವನ್ನೂ ಅರ್ಥ ಮಾಡಿಕೊಂಡು ಮತದಾರರು ಮತ ಚಲಾಯಿಸಬೇಕೆಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿದರು.
ಹಾವೇರಿ ಶಾಸಕ ನೆಹರು ಚ. ಓಲೇಕಾರ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಎಸ್ಸಿ ವಿಭಾಗದ ಅಧ್ಯಕ್ಷ ಜಕ್ಕಪ್ಪ, ಛಲವಾದಿ ಮಹಾಸಭಾದ ಮುಖಂಡರಾದ ಉಮೇಶ್, ಎಸ್. ಎಸ್.ಶೇಖರಪ್ಪ, ಶಿವಮೊಗ್ಗ ಎಎಸ್‍ಪಿ ಎನ್. ರುದ್ರಮುನಿ, ಸಿಪಿಐ ಎಸ್.ಕೆ.ಶಂಕರ್, ಮಧು ಛಲವಾದಿ, ಸಂಜಯ್ ಎಸ್. ದೊಡ್ಮನಿ, ಜಯಪ್ರಕಾಶ್, ಸಿ. ಜಯಪ್ಪ, ನವೀನ್ ಕುಮಾರ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು. ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಕಾಂತ್ರಿಗೀತೆ ಹಾಡಿದರು. ಸರಿಗಮಪ ಖ್ಯಾತಿಯ ಗಂಗಮ್ಮ ಕೆಲ ಗೀತೆಗಳನ್ನು ಪ್ರಸ್ತುತಪಡಿಸಿದರು. ಓಂಕಾರಪ್ಪ ಸ್ವಾಗತಿಸಿದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್. ವೆಂಕಟೇಶ್ ಪ್ರಸ್ತಾವಿಕವಾಗಿ ಮಾತನಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
