ದಾವಣಗೆರೆ:
ಕೇಂದ್ರ ಸರ್ಕಾರ ನೂತನವಾಗಿ ಆರಂಭಿಸಿರುವ ಕಿಸಾನ್ ಸಮ್ಮಾನ್ ನಿಧಿಗೆ ಯೋಜನೆಗೆ ಜಿಲ್ಲೆಯಿಂದ 56 ಸಾವಿರ ಅರ್ಹ ಫಲಾನುಭವಿಗಳ ಪಟ್ಟಿ ಕಳುಹಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜಿ.ಪಂ. ಪ್ರಭಾರ ಅಧ್ಯಕ್ಷೆ ಜೆ.ಸವಿತಾ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನಿಂದ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ. ಜಮೆ ಮಾಡುವ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಿಸಿದ್ದು, ಈ ಯೋಜನೆಗೆ ಜಿಲ್ಲೆಯ 56 ಸಾವಿರ ಅರ್ಹ ರೈತ ಫಲಾನುಭವಿಗಳ ಪಟ್ಟಿ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆಯಡಿ ಕೇಂದ್ರ ಸರ್ಕಾರವು ಮೂರು ಹಂತದಲ್ಲಿ ಎರಡೆರಡೂ ಸಾವಿರ ರೂ. ರೈತರ ಖಾತೆಗೆ ನೇರವಾಗಿ ಜಮೆ ಮಾಡಲಿದ್ದು, ಈಗಾಗಲೇ ನಿನ್ನೆ ಮೊದಲ ಹಂತದ ತಲಾ 2 ಸಾವಿರ ರೂ. ಹಣವನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಡಿ ರೈತರಿಂದ ರೈತ ಸಂಪರ್ಕ ಕೇಂದ್ರ ಹಾಗೂ ಅಟಲ್‍ಜೀ ಜನಸ್ನೇಹಿ ಕೇಂದ್ರಗಳಲ್ಲಿ ದಾಖಲೆ ಸಂಗ್ರಹಿಸುತ್ತಿದ್ದು, ಈ ಕೇಂದ್ರಗಳಲ್ಲಿ ದಾಖಲೆ ಸಲ್ಲಿಸಲು ರೈತರು ಮುಗಿಬಿದ್ದಿದ್ದಾರೆ.
ಆದ್ದರಿಂದ ಬೇರೆ ಕಚೇರಿಗಳಲ್ಲೂ ಈ ದಾಖಲೆ ಸಂಗ್ರಹಿಸಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.ಈ ವೇಳೆ ಮಾತನಾಡಿದ ಸಿಇಒ ಹೆಚ್.ಬಸವರಾಜೇಂದ್ರ, ಮೊದಲನೇ ಕಂತಿನಲ್ಲಿ ಎಷ್ಟು ಜನ ಜಿಲ್ಲೆಯ ಫಲಾನುಭವಿಗಳು ಆಯ್ಕೆಯಾಗಿದ್ದಾರೆ. ಎಷ್ಟು ಹಣ ಬಂದಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆಯೇ? ದಾಖಲೆಗಳನ್ನು ಸಂಗ್ರಹಿಸಿ, ಅಪಡೇಟ್ ಮಾಡಲು ಇನ್ನೇಷ್ಟು ದಿನಬೇಕೆಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ನಿನ್ನೆತಾನೆ ಮೊದಲ ಹಂತದ ಹಣ ಬಿಡುಗಡೆ ಮಾಡಿದ್ದು, ಜಿಲ್ಲೆಯ ಎಷ್ಟು ಜನ ಫಲಾನುಭವಿಗಳು ಆಯ್ಕೆಯಾಗಿದ್ದಾರೆ ಹಾಗೂ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ದಾಖಲೆ ಸಂಗ್ರಹಿಸಲು ಇನ್ನೂ ಕೆಲ ದಿನಗಳು ಬೇಕಾಗಿದ್ದು, ದಾಖಲೆ ಸಂಗ್ರಹಿಸಿದ ತಕ್ಷಣವೇ ನಾವು ಅಪಡೇಟ್ ಮಾಡಿದ ನಂತರದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಹೋಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದ್ದಾರೆಂದು ಹೇಳಿದರು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್.ಮಹೇಶ್ ಮಾತನಾಡಿ, ಗ್ರಾಮ ಪಂಚಾಯತ್‍ಗಳಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ದಾಖಲೆ ಸ್ವೀಕರಿಸಲು ನಿರ್ದೇಶನ ನೀಡಬಹುದು ಎಂದು ಸಲಹೆ ನೀಡಿದರು.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜೆ.ಸವಿತಾ ಮಾತನಾಡಿ, ಜಗಳೂರು ತಾಲೂಕಿನ ಹಲವೆಡೆಗಳಲ್ಲಿ ಹಳ್ಳಗಳಲ್ಲಿ ಕೃಷಿ ಹೊಂಡ ನಿರ್ಮಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಹಳ್ಳಗಳಲ್ಲಿ ಕೃಷಿ ಹೊಂಡ:
ಇದಕ್ಕೆ ಉತ್ತರಿಸಿದ ಶರಣಪ್ಪ ಮುದಗಲ್, ಬರೀ ಜಗಳೂರು ತಾಲೂಕು ಮಾತ್ರವಲ್ಲ ನಮ್ಮ ಗಮನಕ್ಕೆ ತರದೇ, ಕಾರ್ಯಾದೇಶ ಪಡೆಯದೆಯೇ ಸುಮಾರು 167 ಕಡೆಗಳಲ್ಲಿ ಹಳ್ಳಗಳಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡುತ್ತಿದ್ದಾರೆಂಬ ಮಾಹಿತಿ ಇದ್ದು, ಈಗಾಗಲೇ 100 ಕಡೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಇನ್ನೂ 67 ಪ್ರಕರಣಗಳನ್ನು ಪರಿಶೀಲನೆ ನಡೆಸುವುದು ಬಾಕಿ ಇದ್ದು, ಪರಿಶೀಲನೆ ನಡೆಸಿದ ಮೇಲೆ ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
5.59 ಕೋಟಿಗೆ ಪ್ರಸ್ತಾವನೆ:
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಮಾತನಾಡಿ, ಜಿಲ್ಲೆಯಲ್ಲಿ ಅಡಿಕೆ, ತೆಂಗು, ಈರುಳ್ಳಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳು ಜಿಲ್ಲೆಯ ಹಾನಿಗೊಳಗಾಗಿದ್ದು, 559 ಲಕ್ಷ ರೂ. ಬೆಳೆಹಾನಿ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಔಷಧಿಗೆ ಹೊರಗಡೆ ಚೀಟಿ:
ಜಿ.ಪಂ. ಅಧ್ಯಕ್ಷೆ ಜೆ.ಸವಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್.ಮಹೇಶ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳಿಗೆ ಔಷಧ ಚೀಟಿ ಬರೆದು ಕೊಡುವುದನ್ನು ಬಿಟ್ಟು, ಖಾಸಗಿ ಔಷಧಿ ಅಂಗಡಿಗಳಿಗೆ ಔಷಧಿ ಚೀಟಿ ಬರೆದುಕೊಡಲಾಗುತ್ತಿದೆ. ಅಲ್ಲದೆ, ಹೊರಗಡೆಗೆ ಸ್ಕ್ಯಾನಿಂಗ್, ಎಕ್ಸರೇ, ರಕ್ತ, ಮೂತ್ರ ಪರೀಕ್ಷೆಗೆ ಹೊರಗಡೆ ಕಳುಹಿಸಿಕೊಡುತ್ತಿರುವುದು ಸರಿಯಲ್ಲ. ಸರ್ಕಾರಗಳಿಂದ ಬರುವ ಸೌಲಭ್ಯವನ್ನು ಜನರಿಗೆ ತಲುಪಿಸದಿದ್ದರೇ, ಸರ್ಕಾರ ಯೋಜನೆಗಳನ್ನು ಜಾರಿಗೆ ತಂದರೂ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
