ದಾವಣಗೆರೆ
ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯಲ್ಲಿ ಕೇಂದ್ರ ಸರ್ಕಾರದ Central Public Sector Enterprises ಸಂಸ್ಥೆಯಾದ ಮಂಗಳೂರು ರೀಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ವತಿಯಿಂದ 60 kpld ಸಾಮಥ್ರ್ಯದ ಎಥನಾಲ್ ಉತ್ಪಾದನಾ ಘಟಕವನ್ನು ರೂ.966 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.
ಮಂಗಳೂರು ರೀಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಕಂಪನಿಯ ಸುಮಾರು 10 ಜನರ ತಂಡ ಸೋಮವಾರ ಸಂಸದ ಸಿದ್ದೇಶ್ವರರವರನ್ನು ಭೇಟಿ ಮಾಡಿ ಸಾಧಕ ಭಾದಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹರಿಹರದ ಹನಗವಾಡಿ ಕೈಗಾರಿಕಾ ಪ್ರದೇಶದ ಬಳಿ ಕೆ.ಐ.ಎ.ಡಿ.ಬಿ. ವತಿಯಿಂದ 47 ಎಕರೆ ಜಮೀನು ನೀಡಲಾಗಿದೆ. ಈ ಘಟಕ ನಿರ್ಮಾಣದಿಂದ ಸುಮಾರು 100 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಸೆಕೆಂಡ್ ಜನರೇಷನ್ (2ಜಿ) ಎಥನಾಲ್ ಉತ್ಪಾದನೆಗೆ ಹೆಚ್ಚು ಒತ್ತು ನೀಡಿದೆ. ರೈತರಿಂದ ಕೃಷಿ ತ್ಯಾಜ್ಯಗಳನ್ನು ಬಳಸಿಕೊಂಡು ಎಥನಾಲ್ ಉತ್ಪಾದನೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ, ನ್ಯಾಷನಲ್ ಬಯೋ ಫ್ಯೂಯಲ್ ಪಾಲಿಸಿಯನ್ವಯ 2017 ರಿಂದ ಶೇಕಡ 20 ರಷ್ಟು ಏಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ರೈತರು ಬೆಳೆಯುವ ಮೆಕ್ಕೆ ಜೋಳದ ಬೆಂಡು, ಭತ್ತದ ಹೊಟ್ಟು, ಭತ್ತದ ಹುಲ್ಲು, ಕಬ್ಬಿನ ಸಿಪ್ಪೆ ಬಳಸಿ ಎಥನಾಲ್ ಉತ್ಪಾದನೆ ಮಾಡಲಾಗುತ್ತದೆ. ಹೀಗೆ ಕೃಷಿ ತ್ಯಾಜ್ಯ ಬಳಸಿ ಎಥನಾಲ್ ಉತ್ಪಾದನೆ ಮಾಡುವುದರಿಂದ ಈ ಭಾಗದ ರೈತರಿಗೂ ಕೂಡ ಆದಾಯ ಹೆಚ್ಚಾಗಲಿದೆ ಎಂದರು.
ಮಾರ್ಚ್ ತಿಂಗಳಲ್ಲಿ ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಾರ್ವಜನಿಕ ಅಹವಾಲು ನಿಗದಿ ಪಡಿಸಲಾಗಿದು, ಈ ಪ್ರಕ್ರಿಯೆ ಮುಗಿದ ನಂತರ ಎಥನಾಲ್ ಘಟಕದ ಭೌತಿಕ ಪ್ರಕ್ರಿಯೆಗಳು ಪ್ರಾರಂಭವಾಗಲಿವೆ, ಮುಂಬರುವ ವರ್ಷದಲ್ಲಿ 2ಜಿ ಎಥನಾಲ್ ಘಟಕ ಕಾರ್ಯರಂಭ ಮಾಡಲಿದೆ ಎಂದರು.
ಎಂಆರ್‍ಪಿಎಲ್ ತಂಡದಲ್ಲಿ ಚಿಫ್ ಜನರಲ್ ಮ್ಯಾನೇಜರ್ (ಆಡಳಿತ) ಟಿ.ಎಂ. ಪೈ, ಚಿಫ್ ಜನರಲ್ ಮ್ಯಾನೇಜರ್ (ಯೋಜನೆ) ಕೆ.ಹೆಚ್.ಮಂಜುನಾಥ್, ಚಿಫ್ ಜನರಲ್ ಮ್ಯಾನೇಜರ್ (ಪರಿಸರ) ಎಮ್.ಎಸ್.ಸುದರ್ಶನ್, ಮುಖ್ಯ ಅಭಿಯಂತರ ಭರತ್ ಕುಮಾರ್, ಮುಖ್ಯ ವ್ಯವಸ್ಥಾಪಕ ವೆಂಕಟಕೃಷ್ಣ, ಯೋಜನಾ ವ್ಯವಸ್ಥಾಪಕ ಅರುಣ್, ಕೆ.ಐ.ಎ.ಡಿ.ಬಿ. ಅಭಿವೃದ್ದಿ ಅಧಿಕಾರಿ ಶ್ರೀಧರ್, ಭೂಸ್ವಾಧೀನ ಅಧಿಕಾರಿ ಮತ್ತಿತರರು ಹಾಜರಿದ್ದರು.