ಚಿತ್ರದುರ್ಗ:
sನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಬುಧವಾರ ನಡೆಯಲಿರುವ ಸಾಮಾಜಿಕ ನ್ಯಾಯಕ್ಕಾಗಿ ಸಮಾವೇಶ, ಸಿದ್ದರಾಮ ಜಯಂತಿ, ದಿವಂಗತ ಮಂಜರಿ ಹನುಮಂತಪ್ಪನವರ ಸ್ಮರಣೋತ್ಸವ ಭೋವಿ ಸಮುದಾಯಕ್ಕ್ಕೆ ದಿಕ್ಸೂಚಿಯಾಗಲಿದೆ ಎಂದು ಇಮ್ಮಡಿ ಸಿದ್ದರಾಮೇಶ್ವರಸ್ವಾಮಿ ತಿಳಿಸಿದರು.
ಸಾಮಾಜಿಕ ನ್ಯಾಯಕ್ಕಾಗಿ ಭೋವಿ ಸಮಾವೇಶದ ಸಿದ್ದತೆಯನ್ನು ಮಂಗಳವಾರ ವೀಕ್ಷಿಸಿದ ಸ್ವಾಮೀಜಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಸಾಮಾಜಿಕ ನ್ಯಾಯ ಮರೀಚಿಕೆಯಾಗಿರುವ ಇಂದಿನ ಕಾಲದಲ್ಲಿ ಹಣ ಬಲ, ತೋಳ್ಬಲ, ಅಧಿಕಾರ ಬಲ ಇರುವವರಿಗೆ ಮಾತ್ರ ಎಲ್ಲಾ ರೀತಿಯ ನ್ಯಾಯ ಸಿಗುತ್ತಿದೆ. ಧ್ವನಿ ಇಲ್ಲದವರಿಗೆ ಶಕ್ತಿ ಇಲ್ಲದವರಿಗೆ ಶಕ್ತಿ ತುಂಬುವುದು ಈ ಸಮಾವೇಶದ ಉದ್ದೇಶವಾಗಿದೆ. ಯಾವುದೇ ಸಮಾಜ ಅಭಿವೃದ್ದಿಯಾಗಬೇಕಾದರೆ ರಾಜಕೀಯ ಶಕ್ತಿ ಮುಖ್ಯವಾಗಿ ಬೇಕು.
ಭೋವಿ ಸಮಾಜ ಮುಖ್ಯವಾಹಿನಿಗೆ ಬರಬೇಕಾದರೆ ಐ.ಎ.ಎಸ್., ಕೆ.ಎ.ಎಸ್. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಂಖ್ಯೆ ಭೋವಿ ಸಮಾಜದಲ್ಲಿ ಹೆಚ್ಚಾಗಬೇಕು. ಅದಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ, ಕೋಲಾರ, ವಿಜಯಪುರ ಕ್ಷೇತ್ರದಿಂದ ಭೋವಿ ಸಮಾಜಕ್ಕೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಎಲ್ಲಾ ಪಕ್ಷದವರ ಮೇಲೆ ಒತ್ತಡ ಹಾಕಲಾಗುವುದು ಎಂದು ಹೇಳಿದರು.
ನಮ್ಮ ಸಮಾವೇಶಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸುತ್ತಿದ್ದಾರೆ. ನಮ್ಮನ್ನು ಯಾರು ಒಪ್ಪಿಕೊಳ್ಳುತ್ತಾರೋ. ಯಾರು ಅಪ್ಪಿಕೊಳ್ಳುತ್ತಾರೋ ಅಂತಹವರ ಬಗ್ಗೆ ಚಿಂತಿಸುತ್ತೇವೆ. ಟಿಕೇಟ್ ಹಂಚಿಕೆಯಲ್ಲಿ ವ್ಯತ್ಯಾಸವಾಗಿ ನಮ್ಮ ಸಮುದಾಯಕ್ಕೆ ಆದ್ಯತೆ ನೀಡದಿದ್ದರೆ ಲೋಕಸಭಾ ಚುನಾವಣೆಯಲ್ಲಿ ನೋಟ ಮತದಾನ ಮಾಡುವ ಮೂಲಕ ಪ್ರಮುಖ ಪಕ್ಷಗಳಿಗೆ ಗಂಟೆ ಬಾರಿಸುವ ಮೂಲಕ ಕಿವಿ ಅರಳಿಸುತ್ತೇವೆ ಎಂದು ಎಚ್ಚರಿಸಿದರು.
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತನಾಡಿ ನಮ್ಮ ಸಮಾಜದಲ್ಲಿ ಮೂವರು ಶಾಸಕರು ಒಬ್ಬ ಮಂತ್ರಿಯಿದ್ದಾರೆ. ಹಿಂದೆ ನಮಗೆ ಗುರು ಗುರಿ ಇರಲಿಲ್ಲ. ಈಗ ಎಲ್ಲವೂ ಇದೆ. ಸ್ವಾಮೀಜಿಗಳ ನೇತೃತ್ವದಲ್ಲಿ ಸಮಾಜವನ್ನು ಸಂಘಟಿಸುವುದಕ್ಕಾಗಿ ಸಾಮಾಜಿಕ ನ್ಯಾಯಕ್ಕಾಗಿ ಸಮಾವೇಶ ನಡೆಸುತ್ತಿದ್ದೇವೆ. ಭೋವಿ ಸಮಾಜಕ್ಕೆ ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ತೆಗೆಯಲು ಬೇರೆ ಸಮಾಜದವರು ಕುತಂತ್ರ ನಡೆಸುತ್ತಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೋಲಾರ ಚಿತ್ರದುರ್ಗ ಕ್ಷೇತ್ರವನ್ನು ಭೋವಿ ಸಮಾಜಕ್ಕೆ ನೀಡಿದರೆ ಎಲ್ಲರೂ ಒಗ್ಗಟ್ಟಾಗಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು
ಮಾಜಿ ಸಂಸದ ಜನಾರ್ಧನಸ್ವಾಮಿ ಮಾತನಾಡುತ್ತ ಸಾಮಾಜಿಕ ನ್ಯಾಯಕ್ಕಾಗಿ ಭೋವಿ ಸಮುದಾಯದ ಸಮಾವೇಶವನ್ನು ನಡೆಸುತ್ತಿದ್ದೇವೆ. 543 ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗೆ 85 ಸ್ಥಾನಗಳಿವೆ. ಒಬ್ಬರು ಭೋವಿ ಜನಾಂಗದವರಿಲ್ಲ ಎಂದು ವಿಷಾಧಿಸಿದರು.
ಭೋವಿ ಸಮಾಜ ಕಷ್ಟದಲ್ಲಿದೆ. ಮೀಸಲಾತಿಯಿಂದ ದೂರವಿಡುವ ಕುತಂತ್ರ ನಡೆಯುತ್ತಿದೆ. ತಲ ತಲಾಂತರದಿಂದ ಕೂಲಿ ಮಾಡಿ ಬದುಕುತ್ತಿರುವ ಭೋವಿ ಸಮುದಾಯ ಅಲೆಮಾರಿ ಜನಾಂಗವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಆದ್ಯತೆ ನೀಡಬೇಕು. ಚಿತ್ರದುರ್ಗ ಹಿಂದುಳಿದ ಕ್ಷೇತವಾಗಿರುವುದರಿಂದ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಿದೆ. ಭೋವಿ ಸಮಾಜ ಬೇರೆ ಸಮಾಜದೊಂದಿಗೆ ಸಾಮರಸ್ಯದಿಂದ ಬಾಳುತ್ತಿದೆ. ಬಿ.ಎಸ್.ಯಡಿಯೂರಪ್ಪನವರು ನಮ್ಮ ಸಮುದಾಯದೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ನಮಗೆ ಅತ್ಯಂತ ಸಂತಸವನ್ನುಂಟು ಮಾಡಿದೆ. ಜಿಲ್ಲೆಯಲ್ಲಿ ಎರಡು ಲಕ್ಷ ಭೋವಿ ಸಮುದಾಯದವರಿದ್ದೇವೆ. ಯಾವ ಪಕ್ಷಗಳು ನಮ್ಮನ್ನು ಕಡೆಗಣಿಸಬಾರದು ಎಂದು ಎಚ್ಚರಿಸಿದರು.
ಭೋವಿ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ನಿವೃತ್ತ ಡಿ.ವೈ.ಎಸ್ಪಿ. ಆಂಜನೇಯ, ನಗರಸಭೆ ಮಾಜಿ ಸದಸ್ಯ ಈ.ಮಂಜುನಾಥ್, ಲಿಂಗಸೂರು ಮಾಜಿ ಶಾಸಕ ಮಾನಪ್ಪ ವಜ್ಜಲ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.