ದಾವಣಗೆರೆ:
ಬಿಜೆಪಿ ದಾವಣಗೆರೆ ಉತ್ತರ ಯುವ ಮೋರ್ಚಾದ ವತಿಯಿಂದ ನಾಳೆ (ಮಾ.2ರಂದು) ಬೆಳಿಗ್ಗೆ 10.30ಕ್ಕೆ ನಗರದಲ್ಲಿ ಕಮಲ ಸಂದೇಶ ಬೈಕ್ ರ್ಯಾಲಿ ಏರ್ಪಡಿಸಲಾಗಿದೆ ಎಂದು ಯುವ ಮೋರ್ಚಾ ಅಧ್ಯಕ್ಷ ವೀರೇಶ್ ಪೈಲ್ವಾನ್ ತಿಳಿಸಿದರು.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಟುವಳ್ಳಿ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಬೈಕ್ ರ್ಯಾಲಿಗೆ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ಎ.ರವೀಂದ್ರನಾಥ್ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ವಹಿಸುವರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಉತ್ತರ ಬಿಜೆಪಿ ಅಧ್ಯಕ್ಷ ಮುಕುಂದಪ್ಪ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಸಿ.ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎನ್.ರಾಜಶೇಖರ್, ಕಡ್ಲೆಬಾಳು ಧನಂಜಯ್, ಹೆಚ್.ಎನ್.ಶಿವಕುಮಾರ್, ದಾವಣಗೆರೆ ಉತ್ತರ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್ ಪಾಟೀಲ್, ಸಿದ್ದಲಿಂಗಪ್ಪ, ಸವಿತಾ ರವಿಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆಂದು ಮಾಹಿತಿ ನಿಡಿದರು.
ನಿಟುವಳ್ಳಿ ದುರ್ಗಾಂಬಿಕ ದೇವಸ್ಥಾನದಿಂದ ಪ್ರಾರಂಭವಾಗಲಿರುವ ಬೈಕ್ ರ್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೈಸ್ಕೂಲ್ ಮೈದಾನ ತಲುಪಿ ಮುಕ್ತಾಯವಾಗಲಿದೆ. ಯುವ ಮತದಾರರನ್ನು ಪಕ್ಷಕ್ಕೆ ಸೆಳೆಯುವ ಉದ್ದೇಶದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ಮಾ.2ರಂದು ದೇಶಾದ್ಯಂತ ಏಕಕಾಲದಲ್ಲಿ ಎಲ್ಲಾ ಮಂಡಲಗಳಲ್ಲಿ ಕಮಲ ಸಂದೇಶ ಬೈಕ್ ಜಾಥಾ ನಡೆಸಲಾಗುವುದು. ಅಂದಿನ ರ್ಯಾಲಿಯಲ್ಲಿ ಸುಮಾರು 300 ಬೈಕ್‍ಗಳು ಭಾಗವಹಿಸಲಿವೆ. ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲೂ ಬೈಕ್ ರ್ಯಾಲಿ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಇಂದು ವಿಶೇಷ ಪೂಜೆ:
ವೀರಯೋಧ ಅಭಿನಂದನ್ ಬಿಡುಗಡೆಗೆ ಪ್ರಾರ್ಥಿಸಿ ಮಾ.1ರಂದು ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಶಾಸಕ ಎಸ್.ಎ.ರವೀಂದ್ರನಾಥ್, ಮುಖಂಡರಾದ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಮುಕುಂದಪ್ಪ ಮತ್ತಿತರರು ಭಾಗವಹಿಸಲಿದ್ದಾರೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಉತ್ತರ ಅಧ್ಯಕ್ಷ ಮುಕುಂದಪ್ಪ, ಮಂಜುನಾಥ್, ಸಂತೋಷ್, ನಾಗರಾಜ್, ಅತೀತ್ ಅಂಬರಕರ್ ಮತ್ತಿತರರು ಹಾಜರಿದ್ದರು.