ಮಿನಿ ವಿಧಾನಸೌಧದ ಮುಂದೆ ದೊಂಬಿದಾಸರ ಪ್ರತಿಭಟನೆ…!!!

ಚಿಕ್ಕನಾಯಕನಹಳ್ಳಿ

        ಚನ್ನದಾಸರು, ದೊಂಬಿದಾಸರ ಇಬ್ಬರ ವೈವಾಹಿಕ ಸಂಬಂಧದಲ್ಲಿ ಕೊಡುವುದು, ತರುವುದು ನಡೆಯುತ್ತಿದೆ, ಈರ್ವರ ಆಚಾರ-ವಿಚಾರ ಒಂದೇ ಆಗಿದೆ, ಹಾಗಾಗಿ ಸರ್ಕಾರ ಚನ್ನದಾಸರಿಗೆ ನೀಡಿದಂತೆ, ದೊಂಬಿದಾಸರಿನ್ನೂ ಎಸ್.ಸಿ ಮೀಸಲಾತಿಗೆ ಸೇರಿಸಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ, ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜ್‍ಕುಮಾರ್ ಆಗ್ರಹಿಸಿದರು.

       ಪಟ್ಟಣದ ತಾಲ್ಲೂಕು ಕಛೇರಿಯ ಮುಂಭಾಗ ದೊಂಬಿದಾಸರ ಕ್ಷೇಮಾಭಿವೃದ್ದಿ ಸಂಘ ದೊಂಬಿದಾಸರ ಜನಾಂಗಕ್ಕೆ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

        ಚಿತ್ರದುರ್ಗ ಜಿಲ್ಲೆಯ ಮುಂಭಾಗದಲ್ಲಿರುವ ಸುಮಾರು ಮಂದಿ ಈಗಾಗಲೇ ಚನ್ನದಾಸರು ಎಂದು ಸೇರಿದ್ದಾರೆ, ಮೈಸೂರು, ತುಮಕೂರು ಜಿಲ್ಲೆಯ ಭಾಗಗಳಲ್ಲಿ ಮಾತ್ರ ದೊಂಬಿದಾಸರಿಗೆ ಯಾವ ಸೌಲಭ್ಯವೂ ದೊರಕಿಲ್ಲ, ದೊಂಬಿದಾಸರು-ಚನ್ನದಾಸರೂ ಇಬ್ಬರೂ ಒಂದೇ ವ್ಯಾಪಾರ ಮಾಡುತ್ತಾರೆ, ಒಂದೇ ರೀತಿಯ ಜೀವನ ನಡೆಸುತ್ತಾರೆ ಆದರೆ ಅವರಿಗೆ ಸಿಗುವಂತಹ ಸೌಲಭ್ಯ ದೊಂಬಿದಾಸರಿಗೆ ಸಿಗುತ್ತಿಲ್ಲ ಹಾಗಾಗಿ ಸರ್ಕಾರ ಕ್ಯಾಬಿನೆಟ್‍ನಲ್ಲಿ ನಿರ್ಧಾರ ಕೈಗೊಂಡು ದೊಂಬಿದಾಸರನ್ನೂ ಎಸ್.ಸಿ ಕೆಟಗರಿಗೆ ಸೇರಿಸಿ ಅವರಿಗೆ ಸಿಗುವಂತಹ ಸೌಲಭ್ಯವನ್ನು ಇವರಿಗೂ ದೊರಕುವಂತೆ ಮಾಡಿ ಎಂದರು.

          ದೊಂಬಿದಾಸರ ಈ ಸಮಸ್ಯೆ ಬಗ್ಗೆ ಮುಖಂಡರು ಹೇಳಿದಾಗ ಇದಕ್ಕೆ ಹೋರಾಟ ಅಗತ್ಯ ಎಂದು ತಿಳಿಸಿದೆನು ಹಾಗಾಗಿ ತಾತಯ್ಯನ ಜಾತ್ರೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುವಾಗ ದೊಂಬಿದಾಸರು ಜೊತೆಯಾಗಿ ಹೋರಾಟ ಆರಂಭಿಸಿದರು ಜೊತೆಗೆ ಶಿರಾ, ಮಧುಗಿರಿ ದೊಂಬಿದಾಸ ಮುಖಂಡರೊಂದಿಗೆ ಮಾತನಾಡಿದ್ದೇವೆ ಅವರೆಲ್ಲರೂ ಒಟ್ಟಾಗಿ ತುಮಕೂರಿನಲ್ಲೂ ಪ್ರತಿಭಟನೆ ನಡೆಸುವ ಆಲೋಚನೆ ಇದೆ, ನಂತರ ಸರ್ಕಾರದ ಮಟ್ಟದಲ್ಲಿ ಈ ವಿಷಯ ಪ್ರಸ್ತಾಪವಾಗಬೇಕಾಗಿದೆ, ಚಿಕ್ಕನಾಯಕನಹಳ್ಳಿಯಲ್ಲಿ ಆರಂಭವಾಗಿರುವ ಹೋರಾಟ ರಾಜ್ಯ ಮಟ್ಟದಲ್ಲಿ ಹೋರಾಟಕ್ಕೆ ಮಾರ್ಗಸೂಚಿಯಾಗಲಿದೆ ಎಂದ ಅವರು, ದೊಂಬಿದಾಸರನ್ನು ಸರ್ಕಾರ ಎಸ್.ಸಿ ಮೀಸಲಾತಿಗೆ ಸೇರಿಸಿದರೆ, ನಿವೇಶನ, ಮನೆ, ಉದ್ಯೋಗ ಎಲ್ಲಾ ಸ್ಥಿತಿ ಸೇರಿದಂತೆ ಆರ್ಥಿಕವಾಗಿ ಅನುಕೂಲವಾಗಲಿದೆ, ಎಂದ ಅವರು ಈ ಹೋರಾಟ ಇಲ್ಲಿಗೆ ನಿಲ್ಲಬಾರದು ಮುಂದಿನ ದಿನಗಳಲ್ಲಿ ಈ ಹೋರಾಟ ರಾಜ್ಯಮಟ್ಟದಲ್ಲಿ ಬೆಳೆಯಬೇಕು, ದೊಂಬಿದಾಸರು ಎಸ್.ಸಿ ಮೀಸಲಾತಿಗೆ ಸೇರುವುದು ಸಾಮಾಜಿಕ ನ್ಯಾಯದ ಪರವಾಗಿದೆ ಎಂದರು.

         ದೊಂಬಿದಾಸರ ಜನಾಂಗದ ತಾಲ್ಲೂಕು ಅಧ್ಯಕ್ಷ ರಂಗನಾಥ್ ಮಾತನಾಡಿ, ದೊಂಬಿದಾಸರು-ಚನ್ನದಾಸರೂ ಇಬ್ಬರೂ ಒಬ್ಬರೇ ಎಂದು ಸರ್ಕಾರಕ್ಕೆ ತಿಳಿಸುವುದಕ್ಕಾಗಿ ನೆಹರು ಸರ್ಕಲ್‍ನಿಂದ ತಾಲ್ಲೂಕು ಕಛೇರಿಯವರೆಗೆ ಮೆರವಣಿಗೆ ಹಮ್ಮಿಕೊಂಡಿದ್ದೆವು, ಸರ್ಕಾರ ದೊಂಬಿದಾಸರನ್ನು ಎಸ್.ಸಿ. ಮೀಸಲಾತಿಗೆ ಸೇರಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.

         ಮುಖಂಡ ಹನುಮಂತರಾಜು ಮಾತನಾಡಿ, ಬಹಳ ಹಿಂದುಳಿದಂತಿರುವ ಜನಾಂಗ ದೊಂಬಿದಾಸರು, ಚನ್ನದಾಸರು, ದೊಂಬಿದಾಸರು ನಾವೆಲ್ಲರೂ ನೆಂಟರು, ಅಣ್ಣತಮ್ಮಂದಿರು ಆಗಿದ್ದೆವೆ ಚನ್ನದಾಸರಿಗೆ ಸಿಗುವಂತಹ ಸೌಲಭ್ಯ ದೊಂಬಿದಾಸರಿಗೆ ಸಿಗದಂತಾಗಿದೆ, ಈರ್ವರೂ ಭಾವ, ಭಾಮೈದ, ಅಕ್ಕ-ತಂಗಿಯಾಗಿದ್ದಾರೆ, ಈ ತಾರತಮ್ಯವಾಗಲು ಸರ್ಕಾರವೇ ಕಾರಣ, ಸರ್ಕಾರವೇ ಜವಬ್ದಾರಿ ಹೊತ್ತು ನಮಗೆ ಸವಲತ್ತು ನೀಡುವಂತೆ ಮಾಡಬೇಕು ಎಂದರು.

          ಮುಖಂಡ ಶಾಂತರಾಜು ಮಾತನಾಡಿ, ಧಾರವಾಡ ವಿಶ್ವವಿದ್ಯಾನಿಲಯ ದೊಂಬಿದಾಸರ ಬಗ್ಗೆ ಅಧ್ಯಯನ ಮಾಡಿ ಸವಲತ್ತು ಸಿಗದಂತಹ ಸಮುದಾಯ ಎಂದು ಹೇಳಿದೆ, ರಾಜ್‍ಕುಮಾರ್‍ರವರು ಕಳೆದ 20ವರ್ಷಗಳಿಂದ ನಮ್ಮ ಸಮುದಾಯದ ಪರವಾಗಿ ನಿಂತು ನಮ್ಮ ಕಷ್ಠ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.ಪ್ರತಿಭಟನೆಯು ಪಟ್ಟಣದ ನೆಹರು ಸರ್ಕಲ್‍ನಿಂದ ತಾಲ್ಲೂಕು ಕಛೇರಿವರೆಗೆ ನಡೆಯಿತು. ಈ ಸಂದರ್ಭದಲ್ಲಿ ಸಿ.ಬಿ.ರೇಣುಕಸ್ವಾಮಿ, ರವಿ, ಗಂಗಾಧರ್, ನವೀನ್, ಕಮಲಮ್ಮ, ಸಂಜೀವಯ್ಯ, ಗಾಯಿತ್ರಿ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap