ಪಾಸ್‍ಪೋರ್ಟ್ ವಿತರಣೆಯಲ್ಲಿ ತುಮಕೂರಿಗೆ 2ನೇ ಸ್ಥಾನ …!!

ತುಮಕೂರು

     ನಗರದ ಪಾಸ್‍ಪೋರ್ಟ್ ಸೇವಾ ಕೇಂದ್ರದಲ್ಲಿ 15100 ಪಾಸ್‍ಪೋರ್ಟ್ ವಿತರಣೆ ಮಾಡುವ ಮೂಲಕ ರಾಜ್ಯದಲ್ಲಿ ತುಮಕೂರು ಜಿಲ್ಲೆ 2ನೇ ಸ್ಥಾನ ಪಡೆದುಕೊಂಡಿದೆ ಎಂದು ಸಂಸದ ಎಸ್.ಪಿ ಮುದ್ದಹನುಮೇಗೌಡ ತಿಳಿಸಿದರು.

      ಪಾರ್ಸ್‍ಪೋರ್ಟ್ ಸೇವಾ ಕೇಂದ್ರದ ಮೊದಲನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಕಳೆದ ವರ್ಷ ನಗರದಲ್ಲಿ ತೆರೆದ ಪಾಸ್‍ಪೋರ್ಟ್ ಸೇವಾ ಕೇಂದ್ರದಿಂದ 15100 ಪಾಸ್‍ಪೋರ್ಟ್‍ಗಳನ್ನು ವಿತರಣೆ ಮಾಡಿದ್ದು, ಅತಿ ಹೆಚ್ಚಿನ ಪಾಸ್‍ಪೋರ್ಟ್ ವಿತರಣೆಯಲ್ಲಿ ತುಮಕೂರು ಎರಡನೇ ಸ್ಥಾನದಲ್ಲಿರುವುದು ಸಂತಸದ ವಿಷಯವಾಗಿದೆ.

     ಪಾಸ್‍ಪೋರ್ಟ್‍ಗಾಗಿ ಪ್ರತಿದಿನ 100ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗುತ್ತಿವೆ. ಜಿಲ್ಲೆಯ ಎಲ್ಲಾ ತಾಲ್ಲೂಕು ಸೇರಿದಂತೆ ರಾಜ್ಯ ಹಾಗೂ ನೆರೆಯ ರಾಜ್ಯ ಅನಂತಪುರ ಜಿಲ್ಲೆಗಳಿಂದಲೂ ಅರ್ಜಿಗಳು ಸ್ವೀಕೃತವಾಗುತ್ತಿದೆ. ನಗರ/ಗ್ರಾಮೀಣ ಪ್ರದೇಶಗಳಿಂದ ಯುವ ಜನರು ಹೆಚ್ಚಾಗಿ ಪಾಸ್‍ಪೋರ್ಟ್‍ಗಳಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

        ಪಾಸ್‍ಪೋರ್ಟ್‍ಗಾಗಿ ಸೇವಾ ಕೇಂದ್ರದ ಹೊರಗಡೆ ಕಾಯುವ ಸಾರ್ವಜನಿಕರಿಗಾಗಿ ನೆರಳಿನ ವ್ಯವಸ್ಥೆ, ಆಸನದ ವ್ಯವಸ್ಥೆ ಮತ್ತಿತರ ಸವಲತ್ತುಗಳನ್ನು ಆಧುನಿಕ ರೀತಿಯಲ್ಲಿ ಒದಗಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಲೋಕಸಭಾ ಸದಸ್ಯರ ಅನುದಾನದಡಿ ಸೇವಾ ಕೇಂದ್ರದ ಆವರಣದಲ್ಲಿ ಕಿರು ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದ್ದು, ಇಂದು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಒಂದೂವರೆ ತಿಂಗಳ ಮಗುವಿನಿಂದ ಹಿಡಿದು ಎಲ್ಲಾ ವಯೋಮಾನದವರು ಪಾಸ್‍ಪೋರ್ಟ್‍ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನಗರದಲ್ಲಿ ಈ ಸೇವಾ ಕೇಂದ್ರ ತೆರೆದಿರುವುದರಿಂದ ಬೆಂಗಳೂರಿನಲ್ಲಿ ಒತ್ತಡ ಕಡಿಮೆಯಾಗಿದೆ. ಸೇವಾ ಕೇಂದ್ರದ ಸಿಬ್ಬಂದಿಗಳು ಅಹರ್ನಿಶೆ ಕೆಲಸ ಮಾಡಿರುವುದರಿಂದ ಸಾರ್ವಜನಿಕರಿಗೆ ಸಕಾಲದಲ್ಲಿ ಪಾಸ್‍ಪೋರ್ಟ್ ಸೌಲಭ್ಯ ದೊರೆಯುತ್ತಿದೆ ಎಂದು ಶ್ಲಾಘಿಸಿದರು.

        ಈ ಸಂದರ್ಭದಲ್ಲಿ ಕುಣಿಗಲ್‍ನ ಕುಮಾರಿ ರಿಕೃತಿಗೆ ಸಾಂಕೇತಿಕವಾಗಿ ಪಾಸ್‍ಪೋರ್ಟ್ ವಿತರಣೆ ಮಾಡಲಾಯಿತು. ವೆರಿಫೈಯಿಂಗ್ ಆಫೀಸರ್‍ಗಳಾದ ಶಿವಣ್ಣ, ರಾಜಶೇಖರಯ್ಯ, ದೀಪಕ್ ದೀಕ್ಷಿತ್, ಮಾಜಿ ಶಾಸಕ ರಫೀಕ್ ಅಹಮ್ಮದ್, ರಾಮಕೃಷ್ಣಯ್ಯ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link