ದೇಶಕ್ಕಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕು

ಚಿತ್ರದುರ್ಗ:

      ನರೇಂದ್ರಮೋದಿ ದೇಶಕ್ಕೆ ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿರುವುದರಿಂದ ಬಿಜೆಪಿ.ಯಿಂದ ನಗರದಲ್ಲಿ ಶನಿವಾರ ಬೈಕ್ ರ್ಯಾಲಿ ನಡೆಸಲಾಯಿತು.

       ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಿಂದ ಹೊರಟ ಬೈಕ್ ರ್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ , ಭಾರತ ದೇಶದ ಒಗ್ಗಟ್ಟನ್ನು ಕಾಪಾಡಬೇಕಾಗಿರುವುದರಿಂದ ನರೇಂದ್ರಮೋದಿ ಮತ್ತೊಮ್ಮೆ ದೇಶಕ್ಕೆ ಪ್ರಧಾನಿಯಾಗಬೇಕಾಗಿದೆ. ದೇಶದ 4500 ವಿಧಾನಸಭಾ ಕ್ಷೇತ್ರಗಳಲ್ಲಿ ಬೈಕ್ ರ್ಯಾಲಿ ನಡೆಯುತ್ತಿದೆ. ಯಾವುದೆ ಸಣ್ಣಪುಟ್ಟ ಅಹಿತಕರ ಘಟನೆಗಳಿಗೂ ಆಸ್ಪದ ನೀಡದ ರೀತಿಯಲ್ಲಿ ಬಿಜೆಪಿ.ಕಾರ್ಯಕರ್ತರು ಹಾಗೂ ಮುಖಂಡರುಗಳು ಬೈಕ್ ರ್ಯಾಲಿಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

        ಪ್ರಧಾನಿ ನರೇಂದ್ರಮೋದಿರವರು ನಾಲ್ಕುವರೆ ವರ್ಷಗಳ ಕಾಲ ಯಾವುದೇ ಕಪ್ಪುಚುಕ್ಕೆಯಿಲ್ಲದೆ ಪಾರದರ್ಶಕವಾದ ಆಡಳಿತವನ್ನು ದೇಶಕ್ಕೆ ನೀಡಿದ್ದಾರೆ. ಪಾಕಿಸ್ತಾನದ ಉಗ್ರಗಾಮಿಗಳು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಮ್ಮ ದೇಶದ 40 ಯೋಧರನ್ನು ಹತ್ಯೆಗೈದಿರುವುದಕ್ಕೆ ಪ್ರತೀಕಾರವಾಗಿ ನಮ್ಮ ಯೋಧರು ಪಾಕಿಸ್ತಾನಕ್ಕೆ ನುಗ್ಗಿ ಉಗ್ರ ಸಂಘಟನೆಗಳ ತರಬೇತಿ ಶಿಬಿರವನ್ನು ನಾಶಪಡಿಸಿ ದಿಟ್ಟ ಉತ್ತರ ಕೊಟ್ಟಿದ್ದಾರೆ.

        ಇದಕ್ಕೆಲ್ಲಾ ಮೋದಿರವರು ಯೋಧರಿಗೆ ನೀಡಿದ ಬೆಂಬಲವೇ ಕಾರಣ ಎಂದು ಗುಣಗಾನ ಮಾಡಿದರು.ದೇಶದಲ್ಲಿರುವ ಪ್ರತಿಯೊಬ್ಬರು ಒಗ್ಗಟ್ಟಾಗಿ ದೇಶದ ಹಿತ ಕಾಪಾಡಬೇಕು ಎನ್ನುವ ಸಂದೇಶ ನೀಡುವುದಕ್ಕಾಗಿ ದೇಶಾದ್ಯಂತ ಬೈಕ್ ರ್ಯಾಲಿ ನಡೆಯುತ್ತಿದೆ. ಬಿಜೆಪಿ.ಗೆ ಮೊದಲು ದೇಶ ಮುಖ್ಯ. ನಂತರ ಪಕ್ಷ. ಎಲ್ಲರೂ ಶಿಸ್ತಿನಿಂದ ವರ್ತಿಸಬೇಕು ಎಂದು ಕಾರ್ಯಕರ್ತರು ಹಾಗೂ ಮುಖಂಡರುಗಳನ್ನು ಕೋರಿದರು.

        ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್.ನವೀನ್, ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ದೇಶದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಿ ಆದಾಯವನ್ನು ಹೆಚ್ಚಿಸಿದ್ದಾರೆ. ಕೃಷಿ, ಕೈಗಾರಿಕೆ, ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಮಹತ್ವದ ಸಾಧನೆ ಮಾಡಿದ್ದಾರೆ ಎಂದು ಹೇಳಿದರು
ಇಡೀ ದೇಶವೇ ಮೋದಿ ಅವರನ್ನು ಮೆಚ್ಚಿದೆ. ಅಭಿವೃದ್ದಿಯ ದೃಷ್ಟಿಯಿಂದ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಜನರೂ ಬಯಸುತ್ತಿದ್ದಾರೆ. ಈ ಬಾರಿಯ ಚುನಾವಣೆಯನ್ನು ನಾವು ಗಂಭೀರವಾಗಿ ಎದುರಿಸಬೇಕು. ಕಾರ್ಯಕರ್ತರು ಜನರ ವಿಶ್ವಾಸಗಳಿಸುವತ್ತ ಮುನ್ನಡೆಯಬೇಕು ಎಂದು ಹೇಳಿದರುಬಿಜೆಪಿ.ಭಾವುಟಗಳನ್ನು ಬೈಕ್‍ಗೆ ಕಟ್ಟಿಕೊಂಡಿದ್ದ ಕಾರ್ಯಕರ್ತರು ಹಾಗೂ ಮುಖಂಡರುಗಳು ಭಾರತ್ ಮಾತಾ ಕೀ ಜೈ ಎನ್ನುವ ಜೈಕಾರಗಳನ್ನು ಕೂಗುತ್ತ ರ್ಯಾಲಿಯಲ್ಲಿ ಸಾಗಿದರು.

       ನಗರದ ಹಳೇ ಮಾಧ್ಯಮಿಕ ಶಾಲೆ ಆವರಣದಿಂದ ಹೊರಟ ಬೈಕ್ ರ್ಯಾಲಿ, ಅಂಬೇಡ್ಕರ್ ಪ್ರತಿಮೆ, ಮದಕರಿನಾಯಕ ಪ್ರತಿಮೆ ಬಳಿಯಿಂದ ಹಾದು ಜೋಗಿಮಟ್ಟಿ ರಸ್ತೆ, ಕರುವಿನಕಟ್ಟೆ ವೃತ್ತ, ದೊಡ್ಡಪೇಟೆ, ಆನೆಬಾಗಿಲು, ಗಾಂಧಿವೃತ್ತ, ಜೆ.ಸಿ.ಆರ್.ಬಡಾವಣೆ, ಮುನ್ಸಿಪಲ್ ಕಾಲೋನಿ, ಕೆಳಗೋಟೆ ಮೂಲಕ ಹಾದು ಜಿಲ್ಲಾಧಿಕಾರಿ ಕಚೇರಿ ವೃತ್ತಕ್ಕೆ ಆಗಮಿಸಿ ನರೇಂದ್ರಮೋದಿರವನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಬೇಕೆಂದು ಜೈಘೋಷಗಳನ್ನು ಕೂಗಿತು.

       ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್, ಬಿಜೆಪಿ.ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್, ಲಿಂಗಸೂರು ಮಾಜಿ ಶಾಸಕ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಮಾನಪ್ಪ ವಜ್ಜಲ್, ಲಕ್ಷ್ಮಿನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ರತ್ನಮ್ಮ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ನರೇಂದ್ರ, ನಗರಾಧ್ಯಕ್ಷ ತಿಪ್ಪೇಸ್ವಾಮಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಶ್‍ಸಿದ್ದಾಪುರ, ಓ.ಬಿ.ಸಿ.ಮೋರ್ಚದ ಸಂಪತ್, ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಶ್ಯಾಮಲಶಿವಪ್ರಕಾಶ್, ರೇಖ, ಶೈಲಜಾರೆಡ್ಡಿ, ನಗರಸಭೆ ಸದಸ್ಯರುಗಳಾದ ಹರೀಶ್, ಶ್ರೀನಿವಾಸ್, ತಾರಕೇಶ್ವರಿ, ಶಶಿಧರ, ಸುರೇಶ್ ಸೇರಿದಂತೆ ಅಪಾರ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link