ಹರಪನಹಳ್ಳಿ
ಬಿಜೆಪಿ ನಾಯಕರು ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ, ಶಾಸಕ ಡಾ.ಉಮೇಶ ಜಾದವ್ ಅವರ ದಾರಿ ತಪ್ಪಿಸಿದ್ದಾರೆ, ಒಟ್ಟಿನಲ್ಲಿ ಜಾದವ್ ಕಾಂಗ್ರೆಸ್ ಪಕ್ಷ ಬಿಡಬಾರದಾಗಿತ್ತು, ದುರಾಸೆಯಿಂದ ಹೋಗಿದ್ದಾರೆ, ಎಂದು ಮುಜರಾಯಿ ಹಾಗೂ ಮೂಲಸೌಕರ್ಯ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಆರೋಪಿಸಿದ್ದಾರೆ.
ಅವರು ಪಟ್ಟಣದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ಉಮೇಶ ಜಾದವ್ ಅವರ ರಾಜಿನಾಮೆ ಬೆಳವಣಿಗೆ ಅನಿರೀಕ್ಷಿತವಾಗಿದ್ದು, ಕಾಂಗ್ರೆಸ್ ಪಕ್ಷ ಅವರಿಗೆ 2 ಬಾರಿ ಟಿಕೆಟ್ ಕೊಟ್ಟು, ಶಾಸಕರಾಗಲು ಅವಕಾಶ ಕಲ್ಪಿಸಿತ್ತು, ಖರ್ಗೆ ಹಾಗೂ ಧರ್ಮಸಿಂಗ್ ಆಶೀರ್ವಾದ ಮಾಡಿದ್ದರು, ಆದರೆ ಜಾದವ್ ಈ ರೀತಿ ಮಾಡಬಾರದಾಗಿತ್ತು ಎಂದು ಅವರು ಹೇಳಿದರು.
ಜಾದವ್ ಅವರು ಲೋಕಸಭಾ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಸ್ಪರ್ದಿಸಿದರೆ ತೊಂದರೆ ಇಲ್ಲ, ಖರ್ಗೆ ಅವರ ವಿರುದ್ದ ಜಾದವ್ ಪ್ರಬಲ ಅಭ್ಯರ್ಥಿ ಯಾಗುವುದಿಲ್ಲ, ಎಂದ ಅವರು ಮಲ್ಲಿಕಾರ್ಜುನ ಖರ್ಗೆ ಅವರು ಕಪ್ಪು ಚುಕ್ಕೆ ಇಲ್ಲದ ಹಿರಿಯ ರಾಜಕಾರಣಿ, 371 ಜೆ ಸೌಲಭ್ಯ, ಇಎಸ್ ಐ ಆಸ್ಪತ್ರೆ, ರೈಲ್ವೆ ವಿಭಾಗ, ಏರ್ ಪೋರ್ಟ ಹೀಗೆ ಹತ್ತು ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ, ಆದ್ದರಿಂದ ಅವರ ವಿರುದ್ದ ಯಾರೇ ಸ್ಪರ್ದಿಸಿದರೂ ಜನ ಖರ್ಗೆಯವರ ಕೈ ಹಿಡಿಯುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.
ಜಾದವ್ ರಾಜಿನಾಮೆ ಕೊಟ್ಟಿರುವುದರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಗೆಲ್ಲುತ್ತಾರೆ, ಕಳೆದ 4-5 ತಿಂಗಳಲ್ಲಿ ಉಗ್ರಪ್ಪ ಅವರು ಕ್ಷೇತ್ರದಲ್ಲಿ ಸುತ್ತಾಡಿದ್ದಾರೆ, ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿದ್ದಾರೆ, ಜನರ ಜೊತೆ ಇದ್ದಾರೆ, ಇವರ ವಿರುದ್ದ ಶ್ರೀರಾಮುಲು ಸೇರಿದಂತೆ ಯಾರೇ ನಿಂತರೂ ಉಗ್ರಪ್ಪ ಗೆಲುವು ಖಂಡಿತ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.
ವಿಷ ಪ್ರಾಶನ ಘಟನೆಯ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಮಾರಮ್ಮ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರದ ಪ್ರಸಿದ್ದ ಮೈಲಾರಲಿಂಗೇಶ್ವರ ದೇವಸ್ಥಾನ ಅಭಿವೃದ್ದಿಗೆ ಸಿದ್ದರಾಮಯ್ಯನವರ ಅವಧಿಯಲ್ಲಿ ಮೈಲಾರ ಅಭಿವೃದ್ದಿ ಪ್ರಾಧಿಕಾರ ಸ್ಥಾಪಿಸಿದ್ದು, ಅದಕ್ಕೆ ಕೋರ್ಟ ನಿಂದ ತಡೆಯಾಜ್ಞೆ ತರಲಾಗಿದೆ, ಆ ತಡೆಯಾಜ್ಞೆ ಯನ್ನು ತೆರವುಗೊಳಿಸಿ ಅಭಿವೃದ್ದಿ ಪಡಿಸಲಾಗುವುದು ಎಂದು ಸಚಿವರು ಹೇಳಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
