ನವದೆಹಲಿ :
ಉಗ್ರರನ್ನು ಪೋಷಿಸುತ್ತಾ, ತೋರ್ಗಾಣಿಕೆಗೆ ಶಾಂತಿಮಂತ್ರ ಪಠಿಸುವ ಪಾಕಿಸ್ತಾನದ ನಿಜವಾದ ಮುಖವನ್ನು ಅಲ್ಲಿನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ತೆರೆದಿಟ್ಟಿದ್ದಾರೆ. ನನ್ನ ಅಧಿಕಾರದ ಅವಧಿಯಲ್ಲಿ ಗುಪ್ತಚರ ಇಲಾಖೆ ಭಾರತದ ಮೇಲೆ ದಾಳಿ ನಡೆಸಲು ಜೈಷ್-ಎ-ಮೊಹ್ಮದ್ ಉಗ್ರ ಸಂಘಟನೆಯ ಸಹಾಯ ಪಡೆದುಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ. ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಪಾಕಿಸ್ತಾನದ ಪತ್ರಕರ್ತನೋರ್ವ ದೂರವಾಣಿ ಕರೆ ಮೂಲಕ ನಡೆಸಿದ ಸಂದರ್ಶನದನದ ವೇಳೆ ಮುಷರಫ್ ಈ ಹೇಳಿಕೆ ನೀಡಿದ್ದಾರೆ. “ಜೆಇಎಮ್ ಒಂದು ಉಗ್ರ ಸಂಘಟನೆ. ನನ್ನ ಆಡಳಿತದ ಅವಧಿಯಲ್ಲಿ ದೇಶದ ಗುಪ್ತಚರ ಇಲಾಖೆ ಭಾರತದ ಮೇಲೆ ದಾಳಿಗಳನ್ನು ನಡೆಸಲು ಈ ಸಂಘಟನೆಯ ಸಹಾಯ ಪಡೆದುಕೊಳ್ಳುತ್ತಿತ್ತು. ಈಗ ಜೆಇಎಮ್ ವಿರುದ್ಧ ತೆಗೆದುಕೊಂಡ ಕ್ರಮಗಳು ನಿಜಕ್ಕೂ ಸ್ವಾಗತಾರ್ಹ,” ಎಂದಿದ್ದಾರೆ ಮುಷರಫ್.
1999-2008ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಮುಷರಫ್ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಉಗ್ರ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿತ್ತಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, “ಅಂದಿನ ಪರಿಸ್ಥಿತಿ ಬೆರೆಯೇ ಇತ್ತು. ಭಾರತ-ಪಾಕಿಸ್ತಾನ ಒಬ್ಬರ ಮೇಲೋಬ್ಬರು ರಹಸ್ಯವಾಗಿ ದಾಳಿ ನಡೆಸುತ್ತಿದ್ದರು. ದೇಶದ ಗುಪ್ತಚರ ಇಲಾಖೆ ಇದರಲ್ಲಿ ಪಾಲ್ಗೊಳ್ಳುತ್ತಿತ್ತು,” ಎಂದಿದ್ದಾರೆ.
ಪುಲ್ವಾಮಾದಲ್ಲಿ ಭಾರತೀಯ ಸೈನಿಕರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು. ದಾಳಿ ವೇಳೆ 40 ಸೈನಿಕರು ಹುತಾತ್ಮರಾಗಿದ್ದರು. ಈ ದಾಳಿಯ ಹೊಣೆಯನ್ನು ಜೆಇಎಮ್ ಹೊತ್ತಿದೆ. ಆದರೆ, ಈ ಆರೋಪವನ್ನು ಪಾಕ್ ತಳ್ಳಿ ಹಾಕಿದೆ.