ಕನ್ನಡಕ್ಕೆ ಅಸ್ಮಿತೆ ತಂದುಕೊಟ್ಟ ವಚನ ಸಾಹಿತ್ಯ

 ದಾವಣಗೆರೆ
 
       ಸಾಹಿತ್ಯಿಕವಾಗಿ ಕನ್ನಡ ಭಾಷೆಯು ಅಸ್ಮಿತೆ ಕಂಡುಕೊಂಡಿದ್ದೇ, ವಚನ ಮತ್ತು ಶರಣ ಸಾಹಿತ್ಯ ರಚನೆಯಿಂದ ಎಂದು ಜಾನಪದ ತಜ್ಞ, ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಅಭಿಪ್ರಾಯಪಟ್ಟರು.
     
       ಹಂಪಿ ಕನ್ನಡ ವಿಶ್ವವಿದ್ಯಾಲಯ, ಕೂಡಲಸಂಗಮದ ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೆಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಡಾ.ಫ.ಗು.ಹಳಕಟ್ಟಿ ದತ್ತಿನಿಧಿ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ್ದ ಆಯ್ದ ಉಪೇಕ್ಷಿತ ವಚನಕಾರರು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
       ಸಂಸ್ಕೃತ ಭಾಷೆಯಲ್ಲಿ ಹಾಗೂ ಯಾರಿಗೂ ಅರ್ಥವಾಗದಂತೆ ಬರೆಯುವವರು ಮಾತ್ರ ಕವಿಗಳು ಎಂಬ ಕಲ್ಪನೆ ಇತ್ತು. ಹೀಗಾಗಿ ರಾಜಾಶ್ರಯದಲ್ಲಿದ್ದ ಕವಿಗಳಿಗೆ ಕಾವ್ಯ ಬರೆದು, ಹೆಸರು ಮಾಡಬೇಕೆಂಬ ತುಡಿತವಿತ್ತು. ಇಂತಹ ಸಂದರ್ಭದಲ್ಲಿ ಬಸವಣ್ಣನವರು ಕನ್ನಡ ಭಾಷೆಯಲ್ಲಿ ಸರಳವಾಗಿ ಮಾತನಾಡಲಾರಂಭಿಸಿದರು. ಅದೇ ಮುಂದೆ ವಚನ ಸಾಹಿತ್ಯವಾಗಿ, ಕನ್ನಡಕ್ಕೆ ಒಂದು ಅಸ್ಮಿತೆಯನ್ನು ತಂದುಕೊಟ್ಟಿತು ಎಂದು ವಿಶ್ಲೇಷಿಸಿದರು.
       ಬಿಜ್ಜಳನ ಆಸ್ತಾನದಲ್ಲಿದ್ದ ಬಸವಣ್ಣ ಮೇಲ್ವರ್ಗದವರಾಗಿದ್ದರೂ ಸಹ ಸಾಮಾನ್ಯ ಜನರಿಗೆ ಸಾಹಿತ್ಯ ತಲುಪಬೇಕೆಂಬ ಕಾರಣಕ್ಕೆ ಸರಳ ಭಾಷೆಯಲ್ಲಿ ಮಾತನಾಡಲು, ಬರೆಯಲಾರಂಭಿಸಿದ. ಜನರ ನಾಡಿ ಮಿಡಿತ ಅರತಿದ್ದ ಬಸವಣ್ಣನವರ ಬರಹ ಮತ್ತು ಮಾತಿನಲ್ಲಿ ನೈತಿಕತೆ ಮತ್ತು ಆತ್ಮಸಾಕ್ಷಿ ಇರುತ್ತಿದ್ದವು ಎಂದು ಹೇಳಿ, ಅವರ ಕೆಲವು ವಚನಗಳನ್ನು ಉದಾಹರಿಸಿದರು. 
        ರಾಜರ ಆಸ್ತಾನಗಳಲ್ಲಿದ್ದ ಅಂದಿನ ಕವಿವರ್ಯರು ಬರೆಯುತ್ತಿದ್ದ ಭಾಷೆಯೂ ಬಹುತೇಕರಿಗೆ ಅರ್ಥವಾಗುತ್ತಿರಲಿಲ್ಲ. ಪಂಪ-ರನ್ನ ಸೇರಿದಂತೆ ಅಂದಿನ ಅನೇಕ ಕವಿಗಳಿಗೆ ವ್ಯಕ್ತಿ ಕಲ್ಯಾಣವೇ ಮುಖ್ಯವಾಗಿತ್ತು. ಆದರೆ, ಬಸವಾದಿ ಶಿವಶರಣರಿಗೆ ಸಾಮಾಜದ ಕಲ್ಯಾಣವೇ ಮುಖ್ಯ ಎಂದೆನಿಸಿತ್ತು ಎಂದು ಸ್ಮರಿಸಿದರು.
       ಪಂಪ, ರನ್ನರಂತಹ ಕವಿಗಳು ಬರೆದ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ದೊಡ್ಡ ವಿದ್ವತ್ತು ಬೇಕಾಗುತ್ತದೆ. ಹೀಗಾಗಿ ಜನಸಾಮಾನ್ಯರಿಗೆ ಅವರ ಕಾವ್ಯಗಳು ಇನ್ನೂ ತಲುಪದಂತಾಗಿದೆ. ಆದರೆ, ಸಮಾಜ ಸುಧಾರಣೆಯಾಗಬೇಕಾದರೆ, ಕಾವ್ಯ ಜನಸಾಮಾನ್ಯರಿಗೂ ತಲುಪುವಂತಾಗಬೇಕೆಂದು ಆಶಯ ವ್ಯಕ್ತಪಡಿಸಿದರು.
       ಬಸವಣ್ಣನವರ ಸಾಧನೆಗಳಲ್ಲಿ ಅನುಭವ ಮಂಟಪ ಹಾಗೂ ಮಹಾಮನೆ ಶ್ರೇಷ್ಠ ಸಾಧನೆಗಳಾಗಿವೆ. ಅಕ್ಷರ ಸಂಸ್ಕೃತಿಯಿಂದ ವಂಚನೆಗೊಳಗಾಗಿದ್ದ ಜನಸಾಮಾನ್ಯರಿಗೆ ಅನುಭವ ಮಂಟಪಕ್ಕೆ ಮುಕ್ತ ಪ್ರವೇಶ ನೀಡಿದ ಕಾರಣಕ್ಕೆ ತಳಸಮುದಾಯಗಳ ಹಲವು ವಚನಾಕಾರರು ಹೊರಹೊಮ್ಮಲು ಸಾಧ್ಯವಾಯಿತು. ಇಂದಿನ ಆಧುನಿಕ ಯುಗದಲ್ಲೇ ಸಹಪಂಕ್ತಿ ಭೋಜನ, ಒಳ, ಹೊರಗಿನ ಭೋಜನ ವ್ಯವಸ್ಥೆ ಇದೆ. ಆದರೆ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಮಹಾಮನೆಯನ್ನು ಸ್ಥಾಪಿಸುವ ಮೂಲಕ ಸಾಮೂಹಿಕ ಭೋಜನ ಆರಂಭಿಸಿದ್ದರು ಎಂದು ಸ್ಮರಿಸಿದರು.
         ವಚನಕಾರರು ಎಂದಾಕ್ಷಣ ನಮ್ಮ ಕಣ್ಣಮುಂದೆ ಅಪೇಕ್ಷಿತ ವಚನಕಾರರಾದ ಬಸವಣ್ಣ, ಚನ್ನಬಸವಣ್ಣ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ ಮತ್ತಿತರರು ಬರುತ್ತಾರೆ. ಆದರೆ, ಉಪೇಕ್ಷಿತ ವಚನಕಾರರಾದ ಅಮುಗಿದೇವ, ಗಣದಾಸಿ ವೀರಣ್ಣ, ಮೋಳಿಗೆ ಮಾರಯ್ಯ, ಲಿಂಗಮ್ಮ, ಹಡಪದ ಅಪ್ಪಣ್ಣನವರಂತವರು ಬರುವುದೇ ಇಲ್ಲ. ಆದರೆ, ಇಂದು ಉಪೇಕ್ಷಿತ ವನಕಾರರ ಕುರಿತು ವಿಚಾರ ಸಂಕಿರಣ ಆಯೋಜಿಸಿರುವುದು ಶ್ಲಾಘನೀಯವಾಗಿದ್ದು, ಇಲ್ಲಿ ಒಳ್ಳೆಯ ಚರ್ಚೆಗಳು ನಡೆಯಲಿದೆ ಎಂದು ಆಶಿಸಿದರು.
         1880ರಲ್ಲಿ ಜನಸಿ, 1964ರ ವರೆಗೆ ಸುಮಾರು 84 ವರ್ಷಗಳ ಕಾಲ ಬದುಕಿದ ಫ.ಗು.ಹಳಕಟ್ಟಿಯವರು ಉತ್ತರ ಕರ್ನಾಟಕದ ಭಾಗದಲ್ಲಿ ಸುದೀರ್ಘವಾಗಿ ವಚನ ಸಾಹಿತ್ಯ ಸಂಪಾದನೆ ಮಾಡಿ, ಪರಿಷ್ಕರಿಸಿ, ಪ್ರಕಟಿಸಿದ ವಚನ ಪಿತಾಮಹರಾಗಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಕನ್ನಡ ಕತ್ತಲೆಯಲ್ಲಿದ್ದ ಸಂದರ್ಭದಲ್ಲಿ ಡಪ್ಯೂಟಿ ಚನ್ನಬಸಪ್ಪನವರು ಕನ್ನಡಕ್ಕೆ ದೀಪ ತಂದರೆ, ಫ.ಗು.ಹಳಕಟ್ಟಿಯವರು ಆ ದೀಪ ಬೆಳಗುವಂತೆ ಮಾಡಿ, ಕನ್ನಡಕ್ಕೆ ಬೆಳಕಾದರು ಎಂದು ಸ್ಮರಿಸಿದರು.
        ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಅತಿಥಿ ಉಪನ್ಯಾಸಕ ಡಾ.ಪ್ರಭಾಕರ್ ಎಂ. ಅವರ ‘ಸೊಬಗಿನ ಸೋನೆ’ ಕೃತಿ ಕುರಿತು ಮಾತನಾಡಿದ ಪ್ರಾಧ್ಯಾಪಕ ಡಾ.ಕೆ.ನಾರಾಯಣಸ್ವಾಮಿ, ಈ ಸಂಶೋಧನ ಪ್ರಬಂಧದಲ್ಲಿ ಒಟ್ಟು 7 ಅಧ್ಯಯನಗಳಿವೆ. ವಿಜಯನಗರ ಸಾಮ್ರಾಜ್ಯದ ಕಂಪಣ್ಣನವರ 2ನೇ ಮಗ ದೇಪರಾಜರ ಸೋಬಗಿನ ಸೋನೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ. ಈ ಕೃತಿಯು ವರ್ಣ ಪ್ರಧಾನವಾದ ಕಾವ್ಯವಾಗಿದೆ ಎಂದರು.
       ಹಂಪಿ ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಶಂಕರ್ ಆರ್. ಶೀಲಿ, ಐ.ಕ್ಯೂ.ಎ.ಸಿ. ಸಂಚಾಲಕ ಪ್ರೊ.ವೀರೇಶ್, ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ಹೆಚ್.ಗಿರಿಸ್ವಾಮಿ, ಪತ್ರಾಂಕಿತ ವ್ಯವಸ್ಥಾಪಕ ಎಸ್.ಆರ್.ಭಜಂತ್ರಿ, ತೂ.ಕ.ಶಂಕ್ರಯ್ಯ ಮತ್ತಿತರರು ಉಪಸ್ಥಿತರಿದ್ದರು. 
        ಕೂಡಲ ಸಂಗಮದ ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಡಾ.ಎಸ್.ಆರ್.ಚನ್ನವೀರಪ್ಪ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿ ಚೇತನ್ ಮತ್ತು ಸಂಗಡಿಗರು ವಚನಗೀತೆ ಹಾಡಿದರು. ಡಾ.ಎಂ.ಮಂಜಣ್ಣ ಸ್ವಾಗತಿಸಿದರು. ಡಾ.ಪ್ರಕಾಶ ಹಲಗೇರಿ ನಿರೂಪಿಸಿದರು. ಚಂದ್ರಶೇಖರ್.ಕೆ. ವಂದಿಸಿದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link