ತಾ.ಪಂ. ಸದಸ್ಯರಿಂದ ಧರಣಿ

ಕುಣಿಗಲ್

         ಸರ್ಕಾರದ ಕೆಲಸ ಮಾಡದೆ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ರಂಗನಾಥ್‍ರವರ ಹಿಂಬಾಲಕರಂತೆ ಅಧಿಕಾರಿಗಳು ಕೆಲಸ ಮಾಡುತ್ತಾ, ಇತರೆ ಪಕ್ಷದ ಜನಪ್ರತಿನಿಧಿಗಳನ್ನ ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಧರಣಿ ನಡೆಸಿದ ಪರಿಣಾಮ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಸಭೆ ಗೊಂದಲದ ಗೂಡಾಯಿತು.

        ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅಧ್ಯಕ್ಷ ಹರೀಶ್‍ನಾಯ್ಕ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ದಿನೇಶ್ ಮಾತನಾಡಿ, ತಾಲ್ಲೂಕಿನಲ್ಲಿ ನಡೆಯುತ್ತಿರುವ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಗ್ರಾ.ಪಂ, ತಾ.ಪಂ, ಜಿ.ಪಂ. ಸದಸ್ಯರುಗಳನ್ನ ಅಧಿಕಾರಿಗಳು ಆಹ್ವಾನಿಸದೆ ಜನಪ್ರತಿನಿಧಿಗಳನ್ನ ನಿರ್ಲಕ್ಷಿಸಿ ಅಗೌರವ ಉಂಟು ಮಾಡುತ್ತಿದ್ದಾರೆ. ತಹಸೀಲ್ದಾರ್ ಸಭೆಗೆ ಬಂದು ಮಾಹಿತಿ ನೀಡಬೇಕೆಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ತಾ.ಪಂ.ಅಧ್ಯಕ್ಷ ಹರೀಶ್‍ನಾಯ್ಕ ಅಧ್ಯಕ್ಷ ಸ್ಥಾನದ ಖುರ್ಚಿಯಿಂದ ಕೆಳಗಿಳಿದು ಜೆಡಿಎಸ್ ಮತ್ತು ಬಿಜೆಪಿ ಸದಸ್ಯರೊಂದಿಗೆ ಧರಣಿ ಕುಳಿತರು.

        ಸಂಸದ ಡಿ.ಕೆ.ಸುರೇಶ್, ಶಾಸಕ ರಂಗನಾಥ್ ತಾಲ್ಲೂಕಿನ ವಿವಿಧೆಡೆ ಮಾಡುತ್ತಿರುವ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳನ್ನ ದೂರ ಇಟ್ಟು ಅಧಿಕಾರಿಗಳು ಕೈಗೊಂಬೆಯಾಗಿದ್ದಾರೆ. ಇತರೆ ಪಕ್ಷದ ಜನಪ್ರತಿನಿಧಿಗಳನ್ನ ದೂರ ಇಡುತ್ತಿದ್ದಾರೆ ಎಂದು ಪ್ರತಿಭಟನಾ ಧರಣಿ ನಿರತ ಸದಸ್ಯರು ಆರೋಪಿಸಿದಾಗ, ಕಾಂಗ್ರೆಸ್ಸಿನ ಸದಸ್ಯರಾದ ಕೆಂಪೇಗೌಡ, ಗಂಗರಂಗಯ್ಯ, ಏಕವಚನದಲ್ಲಿ ಪರಸ್ಪರ ನಿಂದನೆ ಮಾಡತೊಡಗಿದರು.

         ಒಂದು ಹಂತದಲ್ಲಿ ಅಧ್ಯಕ್ಷ ಹರೀಶ್‍ನಾಯ್ಕ ಸದಸ್ಯರಿಗೆ ನಿಮಗೆ ನಾಚಿಕೆ ಆಗುವುದಿಲ್ಲವೆ ಎಂದು ತರಾಟೆಗೆ ತೆಗೆದುಕೊಂಡರು. ಅಧ್ಯಕ್ಷರಿಗೆ ಕಾಂಗ್ರೆಸ್ ಸದಸ್ಯರು, ಅಧ್ಯಕ್ಷರಾದ ತಾವು ಧರಣಿ ಮಾಡುತ್ತಿರುವುದು ನಿಮಗೆ ನಾಚಿಕೆ ಆಗುವುದಿಲ್ಲವೆ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿ ಸಭೆಯಲ್ಲಿ ಗೊಂದಲ ಏಕವಚನದಲ್ಲಿ ಪರಸ್ಪರ ಸದಸ್ಯರು ನಿಂದಿಸಿಕೊಳ್ಳಲು ಆರಂಭಿಸಿದರು.

         ಸಭೆಗೆ ಆಗಮಿಸಿದ ತಹಸೀಲ್ದಾರ್ ವಿಶ್ವನಾಥ್, ಸರ್ಕಾರಿ ಅಧಿಕೃತ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳನ್ನ ಕರೆಯುವುದು ನಿಯಮದಲ್ಲಿ ಸ್ಪಷ್ಟನೆಯಾಗಿದೆ. ನಿಯಮ ಉಲ್ಲಂಘನೆ ಮಾಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ನೀಡಿದ ಭರವಸೆ ಹಿನ್ನೆಲೆಯಲ್ಲಿ ಸದಸ್ಯರು ತಮ್ಮ ಧರಣಿಯನ್ನ ಹಿಂಪಡೆದರು.

         ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ, ಸಾವಿರಾರು ಕೋಟಿಗಳು ಲೂಟಿ ಮಾಡುತ್ತಿದ್ದಾರೆ, ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಾ ಎಂದು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ನವೀನ್‍ರವರನ್ನ ಅಧ್ಯಕ್ಷರು ಪ್ರಶ್ನಿಸಿದರು. ಈ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ವಿವರಿಸಿದರು. ಇಓ ಶಿವರಾಜಯ್ಯ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಕೆಂಪರಾಜಶ್ರೀ,ಸದಸ್ಯರಾದ ತ್ರಿಪುರಸುಂದರಿ, ಕೃಷ್ಣಪ್ಪ, ಕುಮಾರ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link