ಪಕ್ಷ ವಿರೋಧಿ ಚಟುವಟಿಕೆಗೆ ನಿರ್ದಾಕ್ಷಿಣ್ಯ ಕ್ರಮ

ದಾವಣಗೆರೆ

        ಜಿಲ್ಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ ಎಚ್ಚರಿಸಿದರು.ನಗರದ ಪಿಜೆ ಬಡಾವಣೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಶನಿವಾರ ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದಿಂದ ಚೇತನ ಹೋಟೆಲ್‍ನಲ್ಲೊಂದು ಸಭೆ ಕರೆದಿದ್ದ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಸೇರಿದಂತೆ ಇತರೆ ಆಕಾಂಕ್ಷಿಗಳು ಅಭಿಪ್ರಾವನ್ನು ಹಂಚಿಕೊಂಡಿದ್ದರು.

         ಆದರೆ, ಇದಕ್ಕೆ ಪ್ರತಿಯಾಗಿ ಸಮಾನ ಮನಸ್ಕರು ಎಂಬುದಾಗಿ ಹೇಳಿಕೊಂಡು, ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಮಾರ್ಚ್ 3ರಂದು ಸಭೆ ಕರೆದು, ವಕೀಲ ಅನೀಸ್ ಪಾಷಾ ಅವರನ್ನು ಕಣಕ್ಕಿಳಿಸುವಂತೆ ಒತ್ತಾಯಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಆ ಸಭೆಯ ನಡಾವಳಿಯ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿ ಸಂಗ್ರಹಿಸಿದ್ದು, ಅವುಗಳನ್ನು ಪಕ್ಷದ ವರಿಷ್ಠರಿಗೆ ಗಮನಕ್ಕೆ ತಂದು ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಂಡು, ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದರು.

         ಇನ್ನೊಂದು ಎರಡು ದಿನಗಳಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆವಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಗೆ ಟಿಕೇಟ್ ನೀಡಲಿ. ಇಲ್ಲವೇ, ಮೈತ್ರಿ ಪಕ್ಷದ ಅಭ್ಯರ್ಥಿಗೆ ಪಕ್ಷ ಬೆಂಬಲ ಸೂಚಿಸಿದರೂ ನಮ್ಮ ವರಿಷ್ಠರ ನಡೆಗೆ ಬದ್ಧರಾಗಿದ್ದುಕೊಂಡು, ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಶ್ರಮಿಸೋಣ ಎಂದು ಸಲಹೆ ನೀಡಿದರು.

        ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಅಸ್ಗರ್ ಮಾತನಾಡಿ, ನಮ್ಮ ವರಿಷ್ಠ ದೇವೇಗೌಡರು ಮೊನ್ನೆ ರಾಹುಲ್‍ಗಾಂಧಿಯವರಿಗೆ ನೀಡಿರುವ ಪಟ್ಟಿಯಲ್ಲಿ ದಾವಣಗೆರೆಯ ಹೆಸರೇ ಇಲ್ಲ. ಆದರೂ, ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಬೇಡಿಕೆಯನ್ನು ಇಟ್ಟಿದ್ದೇವೆ. ಆದರೆ, ಮುಂದೆ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ ಕೆಲಸ ಮಾಡೋಣ ಎಂದರು.

          ಚೇತನ ಹೋಟೆಲ್‍ಲ್ಲಿ ನಡೆದ ಸಭೆಯಲ್ಲಿ ಹೆಚ್.ಎಸ್.ಶಿವಶಂಕರ್ ಒಮ್ಮತದ ಅಭ್ಯರ್ಥಿ ಎಂಬ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ. ಇದಕ್ಕೆ ಪ್ರತಿಯಾಗಿ ಸಮಾನ ಮನಸ್ಕರ ಹೆಸರಿನಲ್ಲಿ ಮತ್ತೊಂದು ಸಭೆ ನಡೆಸಿ, ಭಿನ್ನಮತೀಯ ಚಟುವಟಿಕೆ ನಡೆಸಿದ್ದಾರೆ. ಪಕ್ಷಕ್ಕಾಗಿ ತ್ಯಾಗ ಮಾಡಿದವರಿಗೆ ಅನ್ಯಾಯವಾಗಿದ್ದರೆ, ಇಂತಹ ಸಭೆ ನಡೆಸಿ, ನ್ಯಾಯಕೊಡಿಸುವುದರಲ್ಲಿ ಅರ್ಥವಿದೆ. ಆದರೆ, ವಕೀಲ ಅನೀಸ್ ಪಾಷಾರವರು ವಾಸ್ತವದಲ್ಲಿ ಜೆಡಿಎಸ್ ಕಾರ್ಯಕರ್ತರೇ ಅಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸೇರಿದಂತೆ ಇತರೆ ಪಕ್ಷಗಳನ್ನು ತೀರಸ್ಕರಿಸಬೇಕೆಂದು ರಾಜ್ಯಾದ್ಯಂತ ನಡೆದ ಜೆಸಿಬಿ ಆಂದೋಲನವನ್ನು ದಾವಣಗೆರೆಯಲ್ಲಿ ಆಯೋಜಿಸಿದ್ದರೆಂದು ಆರೋಪಿಸಿದರು.

        ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಅನೀಸ್ ಪಾಷಾರವರು ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸಿದ್ದಾರೆ? ಎಂದು ಪ್ರಶ್ನಿಸಿದ ಅವರು, ಸಮಾನ ಮನಸ್ಕರ ಹೆಸರಿನಲ್ಲಿ ನಡೆದ ಸಭೆಯನ್ನು ಅಧ್ಯಕ್ಷರು ಗಂಭೀರವಾಗಿ ಪರಿಗಣಿಸಿ, ಆ ಸಭೆಯಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮಕೈಗೊಳ್ಳಲು ಸಮಿತಿ ರಚಿಸಬೇಕು. ಇಲ್ಲದಿದ್ದರೆ, ನಾನೇ ನಮ್ಮ ನಾಯಕರ ಗಮನಕ್ಕೆ ತರುತ್ತೇನೆ ಎಂದರು.

        ಜೆಡಿಎಸ್ ಮುಖಂಡ ಭದ್ರಣ್ಣ ಮಾತನಾಡಿ, ದಾವಣಗೆರೆಯಲ್ಲಿ ದಳ ನಿಷ್ಕ್ರಿಯವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಅಂತಹ ಸಂದರ್ಭದಲ್ಲಿ ಅನೀಸ್ ಪಾಷಾ ಮತ್ತಿತರರು ಸಭೆ ನಡೆಸಿ, ಅಭ್ಯರ್ಥಿ ಎಂಬುದಾಗಿ ಘೋಷಿಸಿಕೊಂಡರೇ, ಇಲ್ಲಿ ಪಕ್ಷದ ಜಿಲ್ಲಾ ಘಟಕ, ಜಿಲ್ಲಾಧ್ಯಕ್ಷರು ಏಕೆ ಇರಬೇಕು? ಎಂದು ಪ್ರಶ್ನಿಸಿದರು.

        ಜಿಲ್ಲೆಯಲ್ಲಿ ಪಕ್ಷಕ್ಕಾಗಿ ದುಡಿದವರು ಹಲವರಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಕಳೆಯುತ್ತಾ ಬಂದರೂ ಒಂದು ನಾಮಿನಿ ಸಹ ಮಾಡಿಸಿಲ್ಲ. ಈಗಲಾದರೂ ಅಧ್ಯಕ್ಷರು ನಾಮನಿರ್ದೇಶಿತರ ಪಟ್ಟಿಯನ್ನು ಕಳುಹಿಸಿಕೊಟ್ಟು, ಪಕ್ಷಕ್ಕಾಗಿ ದುಡಿದವರಿಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದರು.

        ರಾಜ್ಯ ಜೆಡಿಎಸ್ ವಕ್ತಾರ ಜಸ್ಟಿನ್ ಜಯಕುಮಾರ್ ಮಾತನಾಡಿ, ಪಕ್ಷದ ಜಿಲ್ಲಾಧ್ಯಕ್ಷರು ಸೇರಿದಂತೆ ಎಲ್ಲಾ ಪದಾಧಿಕಾರಿಗಳ ಗಮಕ್ಕೆ ತಂದು ನಾವು ಸಮಾನ ಮನಸ್ಕರ ಸಭೆ ನಡೆಸಿದ್ದೇವೆ. ಆದರೂ ಈ ಸಭೆಯನ್ನು ಭಿನ್ನಮತೀಯರ ಸಭೆ ಎಂಬುದಾಗಿ ಹೇಗೆ ಕರೆಯುತ್ತೀರಿ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೇಟ್ ಕೇಳುವುದೇ ಅಪರಾಧವೇ? ಎಂದು ಪ್ರಶ್ನಿಸಿದರು.ಸಭೆಯಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಗಣೇಶ್ ಟಿ. ದಾಸಕರಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾತಿ ಶಂಕರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಕುಮಾರ್, ಮುಖಂಡರಾದ ಜೆ.ಅಮಾನುಲ್ಲಾ ಖಾನ್, ದಾದಾಪೀರ್, ಕೆ.ಎ.ಪಾಪಣ್ಣ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link