ಶವಸಂಸ್ಕಾರ ವಿವಾದ : ಮಠದ ಪ್ರಮುಖರೊಂದಿಗೆ ಚರ್ಚಿಸಿ ಇತ್ಯರ್ಥಪಡಿಸಲಾಗುವುದು

ಹುಳಿಯಾರು

             ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾದ ಕಾರಣಕ್ಕಾಗಿ ಲಿಂಗಪ್ಪನಪಾಳ್ಯದಲ್ಲಿ ತನ್ನ ಪತ್ನಿ ಹಾಗೂ ಮಕ್ಕಳಿಗೆ ಊರಿನಲ್ಲಿ ಯಾರಾದರೂ ಮೃತಪಟ್ಟ ಸಂದರ್ಭದಲ್ಲಿ ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹುಳಿಯಾರಿನ ಮಠದವರ ನಿರ್ದೇಶನದ ಮೇರೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಹುಳಿಯಾರು ಹೋಬಳಿಯ ಲಿಂಗಪ್ಪನಪಾಳ್ಯದ ಎಲ್.ಆರ್.ಮೋಹನ್ ಎಸಿಬಿ ಪೊಲೀಸರಿಗೆ ಹುಳಿಯಾರಿನ ಸಾರ್ವಜನಿಕ ಸಭೆಯಲ್ಲಿ ದೂರು ಸಲ್ಲಿಸಿದ್ದರು. ಹಿನ್ನೆಲೆಯಲ್ಲಿ ತಹಸೀಲ್ದಾರ್ ತೇಜಸ್ವಿನಿಯವರು ಇಂದು ಲಿಂಗಪ್ಪನಪಾಳ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ದೂರುದಾರ ಮೋಹನ್ ಅವರನ್ನು ಕರೆಸಿ ವಿಚಾರಣೆ ನಡೆಸಿದರು.

         ಗ್ರಾಮಸ್ಥರ ಸಮ್ಮುಖದಲ್ಲಿ ಮಾತನಾಡಿದ ಮೋಹನ್, ನಾನು ವಿವಾಹವಾಗಿ ಇಪ್ಪತ್ತು ವರ್ಷವಾಗಿದ್ದು ಗ್ರಾಮಸ್ಥರಿಂದ ನನಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಇತರೆ ಜಾತಿಗೆ ಸೇರಿದ ನನ್ನ ಪತ್ನಿ ಹಾಗೂ ಮಕ್ಕಳಿಗೆ ಇತ್ತೀಚೆಗಷ್ಟೆ ಮೃತಪಟ್ಟ ನಮ್ಮ ದೊಡ್ಡಮ್ಮನವರ ಅಂತ್ಯ ಸಂಸ್ಕಾರದ ಸಮಯದಲ್ಲೂ ಅಡ್ಡಿಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮೃತರ ಅಂತಿಮ ದರ್ಶನಕ್ಕೂ ಅವಕಾಶ ಕೊಟ್ಟಿಲ್ಲ ಎಂದು ದೂರಿದರು.

       ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಇದು ನೋವಿನ ಸಂಗತಿಯಾಗಿದ್ದು, ವಿವಾಹ ಎನ್ನುವುದು ಅವರ ವೈಯುಕ್ತಿಕ ವಿಚಾರವಾಗಿದೆ. ಇದರಲ್ಲಿ ಗ್ರಾಮಸ್ಥರು ಮೂಗು ತೂರಿಸುವುದು ಕಾನೂನು ಪ್ರಕಾರ ತಪ್ಪು. ಈ ಸಭೆಯ ನಂತರ ಹುಳಿಯಾರಿನ ಮಠದ ಮುಖ್ಯಸ್ಥರ ಬಳಿ ಈ ವಿಚಾರ ಚರ್ಚಿಸಿ ಈ ಸಮಸ್ಯೆಗೆ ತೆರೆ ಎಳೆಯುವುದಾಗಿ ಭರವಸೆ ನೀಡಿದರು.

 

Recent Articles

spot_img

Related Stories

Share via
Copy link