ತುಮಕೂರು
ನಗರದ ಶ್ರೀದೇವಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಮೊದಲ ಪದವಿ ಪ್ರದಾನ ಸಮಾರಂಭ ಸಡಗರದಿಂದ ನೆರವೇರಿತು. ಕಾಲೇಜಿನ ಆವರಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ವೈದ್ಯಕೀಯ ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳು, ಅವರ ಪೋಷಕರು ಸಂಭ್ರಮದಿಂದ ಬೀಗಿದರು, ಸಾರ್ಥಕತೆಯ, ಸಾಧನೆಯ ಸಂತಸ ವ್ಯಕ್ತಪಡಿಸಿದರು.
ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಅಡಿಯಲ್ಲಿ ಪದವಿ ಹೊಂದಿದ ಶ್ರೀದೇವಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿ ನಂತರ ಪದವಿ ಪ್ರಮಾಣಪತ್ರ ಪಡೆದುಕೊಂಡರು.ಕಾಲೇಜಿನ ಡಾ. ಎಬಿನೇಶ್ ವೈದ್ಯಕೀಯ ವಿಭಾಗದಿಂದ ಮೂರನೇ ರ್ಯಾಂಕ್, ಮಕ್ಕಳ ವಿಭಾಗದಿಂದ ಡಾ. ವಿ ಕಾರ್ತಿಕ್ 7ನೇ ರ್ಯಾಂಕ್, ಇಎನ್‍ಟಿ ವಿಭಾಗದಿಂದ ಡಾ. ವಿ ಆರ್ ಅಪೂರ್ವ 2ನೇ ರ್ಯಾಂಕ್, ಡಾ. ವಿ ಬಿ ಪೂಜಾ 9ನೇ ರ್ಯಾಂಕ್, ಡಾ. ಮೈತ್ರೇಯಿ 10ನೇ ರ್ಯಾಂಕ್, ಪೆಥಾಲಜಿ ವಿಭಾಗದಲ್ಲಿ ಡಾ. ಸುಶ್ಮಿತಾ 8ನೇ ರ್ಯಾಂಕ್, ಡಾ. ದರ್ಶನ್ 10ನೇ ರ್ಯಾಂಕ್ ಪಡೆದಿದ್ದು, ಸಮಾರಂಭದಲ್ಲಿ ಗಣ್ಯರು ಅವರನ್ನು ಸನ್ಮಾನಿಸಿ ಗೌರವಿಸಿದರು.
ಚೆನ್ನೈನ ಡಾ. ರೇಲಾ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಡಾ. ಮೊಹಮದ್ ರೇಲಾ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಶುಭ ಕೋರಿದರು.ನಂತರ ಮಾತನಾಡಿದ ಡಾ.ಮೊಹಮದ್ ರೇಲಾ, ವೈದ್ಯರು ತಮ್ಮ ವೃತ್ತಿಯನ್ನು ಸೇವೆಗಾಗಿಯೇ ಮುಡುಪಿಡಬೇಕು, ತಮ್ಮ ವೃತ್ತಿ ಇರುವುದೇ ಸೇವೆಗಾಗಿ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ನಿಮ್ಮಿಂದ ಆರೋಗ್ಯ ಸೇವೆ ಬಯಸಿ ಬರುವ ರೋಗಿಗಳು ಯಾವುದೇ ಜಾತಿ, ಧರ್ಮ, ಬಡವ, ಶ್ರೀಮಂತ, ಗಂಡು, ಹೆಣ್ಣು ಹೀಗೆ ಯಾವುದೇ ಭೇದ ಮಾಡದೆ ಎಲ್ಲರೂ ಒಂದೇ ಎಂಬ ಭಾವನೆ ಹೊಂದಿ ಸೇವೆ ಒದಗಿಸಬೇಕು ಎಂದು ಹೇಳಿದರು.
ಸಿದ್ಧಗಂಗಾಮಠದ ಡಾ. ಶಿವಕುಮಾರಸ್ವಾಮೀಜಿಗಳಿಗೆ ಚಿಕಿತ್ಸೆ ನೀಡುವ ಪುಣ್ಯ ತಮಗೆ ದೊರಕಿತ್ತು, ಶ್ರೀಗಳು ಕಾಯಕವೇ ಕೈಲಾಸ ಎಂದು ತಮ್ಮ ಕಾಯಕ, ಸೇವೆ ನಡೆಸಿದ್ದರು. ನೀವೂ ಅದೇ ರೀತಿ ಕಾಯಕವನ್ನು ಸೇವೆಯಾಗಿ ಆತ್ಮಸಾಕ್ಷಿಗೆ ಒಪ್ಪುವಂತೆ ಮಾಡಬೇಕು. ಈಗ ಪದವಿ ಪತ್ರ ಪಡೆದ ಮೇಲೆ ಅಧ್ಯಯನವೇ ಮುಗಿಯಿತು ಎಂದು ತಿಳಿಯಬಾರದು. ಪ್ರತಿ ದಿನ ಜ್ಞಾನ ಪಡೆಯುತ್ತಲೇ ಇರಬೇಕು. ನನ್ನ 25 ವರ್ಷದ ವೈದ್ಯಕೀಯ ವೃತ್ತಿಯಲ್ಲಿ ಅಧ್ಯಯನ ಮುಗಿದಿಲ್ಲ, ನಿತ್ಯವೂ ಕಲಿಯುತ್ತಿದ್ದೇನೆ. ಕಲಿಕೆ, ಜ್ಞಾನ ಸಂಪಾದನೆಯ ಪ್ರಯತ್ನ ನಿಲ್ಲಬಾರದು ಎಂದು ಡಾ. ರೇಲಾ ಹೇಳಿದರು.
ಹಿರಿಯ ಕವಿ ಹೇಳಿದಂತೆ ವಾರದಿಂದ ಹಸಿವಿದ್ದ ಬೆಕ್ಕಿಗೆ ಸಮುದ್ರದಷ್ಟು ಹಾಲು ಕುಡಿಯಬೇಕು ಅನ್ನಿಸುವ ಹಾಗೆ ಜ್ಞಾನ ಸಂಪಾದನೆಯ ದಾಹ ಹೆಚ್ಚಬೇಕು. ಅದೇ ಕವಿ ಹೇಳಿದಂತೆ, ಶ್ರೀರಾಮನ ಮನಸು ಅತಿ ಪರಿಶುದ್ಧವಾದದ್ದು, ಹಾಗಾಗಿ ಅವನು ಉತ್ತಮ ಸ್ಥಾನ ಪಡೆದ, ವೈದ್ಯರ ಮನಸು ಕೂಡ ಪರಿಶುದ್ಧವಾಗಿರಬೆಕು, ಮಾತೃ ಹೃದಯಿಗಳಾಗಿರಬೇಕು. ಆಗ ಅವರು ಸಮಾಜದಲ್ಲಿ ಗೌರವದ ಸ್ಥಾನ ಪಡೆಯುತ್ತಾರೆ ಎಂದು ಹೇಳಿದರು.
ಬಡ ಕುಟುಂಬದಲ್ಲಿ ಹುಟ್ಟ್ಟಿದ ನನಗೆ ವೈದ್ಯ ಪದವಿ ಪಡೆದ ಆರಂಭದಲ್ಲಿ ದೊಡ್ಡ ಅವಕಾಶಗಳು ದೊರೆತವು. ಯಕೃತ್ತು ಶಸ್ತ್ರ ಚಿಕಿತ್ಸೆಯಲ್ಲಿ ಪರಿಣಿತಿ ಸಾಧಿಸಿದೆ. ಒಂದು ಯಕೃತ್ತನ್ನು ಎಂಟು ಭಾಗ ಮಾಡಿ ಅದರಲ್ಲಿ ಒಂದನ್ನು ಶಸ್ತ್ರ ಚಿಕಿತ್ಸೆ ಮಾಡುವ ಸಾಮಥ್ರ್ಯ ಸಿದ್ಧಿಸಿತು. ಐದು ದಿನದ ಮಗುವಿಗೆ ಯಶಸ್ವಿಯಾಗಿ ಯಕೃತ್ತಿನ ಶಸ್ತ್ರ ಚಿಕಿತ್ಸೆ ಮಾಡಿದ ಜಗತ್ತಿನ ಮೊದಲ ವೈದ್ಯ ಎಂಬ ಹೆಗ್ಗಳಿಕೆ ಸಿಕ್ಕಿತು. ನಿರಂತರ ಜ್ಞಾನ ಬೆಳೆಸಿಕೊಂಡಾಗ ಎಲ್ಲವೂ ಸಾಧ್ಯವಾಗುತ್ತದೆ ಎಂಬುದನ್ನು ತಿಳಿಯಬೇಕು ಎಂದು ಡಾ. ಮೊಹಮದ್ ರೇಲಾ ಹೇಳಿದರು.
ರಾಜ್ಯಸಭಾ ಸದಸ್ಯ, ನಾಗಪುರದ ಮಹಾತ್ಮೆ ಐ ಬ್ಯಾಂಕ್ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಡಾ.ವಿಕಾಸ್ ಮಹಾತ್ಮೆ ಮಾತನಾಡಿ, ಸರಿತಪ್ಪುಗಳ ಅರಿವು ಕೂಡ ವ್ಯಕ್ತಿಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಯಾವುದನ್ನು, ಎಷ್ಟನ್ನು ಬದುಕಿಗೆ ಸ್ವೀಕರಿಸಬೇಕು ಎಂಬುದರ ತಿಳಿವಳಿಕೆ ಬೆಳೆಸಿಕೊಳ್ಳುವುದು ಕೂಡ ಜಾಣತನ ಎಂದರು.
ಸಂತೋಷ ಪಡಲು ನಾನಾ ಅವಕಾಶಗಳಿವೆ, ಆದರೆ ಆ ಸಂತೋಷ ಮುಂದೆ ದು:ಖವಾಗಬಾರದು ಎಂಬ ಎಚ್ಚರಿಕೆಯೂ ಇರಬೇಕು. ಯಾವುದನ್ನೂ ನಿಖರವಾಗಿ ಪರೀಕ್ಷಿಸಿ ತಿಳಿಯುವ ಪ್ರಯತ್ನ ಮಾಡಬೇಕು. ಸಾಕ್ಷಿ, ಆಧಾರಗಳಿಲ್ಲದವುಗಳನ್ನು ಒಪ್ಪಬೇಕೊ, ಬೇಡವೊ ಎಂಬುದನ್ನು ನಿರ್ಣಯಿಸುವ ಮನ:ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ಎಂ ಆರ್ ಹುಲಿನಾಯ್ಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ಆಸ್ಪತ್ರೆಯ ನಿರ್ದೇಶಕ ಡಾ. ರಮಣ್ ಎಂ. ಹುಲಿನಾಯ್ಕರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಶ್ರೀದೇವಿ ಆಸ್ಪತ್ರೆಯ ಡೀನ್ ಡಾ. ಸಿ ಎಂ ಗುರುಮೂರ್ತಿ, ನಿರ್ದೇಶಕ ಎಂ ಎಸ್ ಪಾಟೀಲ್, ಪ್ರಾಂಶುಪಾಲರಾದ ಡಾ. ಡಿ ಕೆ ಮಹಾಬಲರಾಜು, ಶಾಂತಾದುರ್ಗಾದೇವಿ ಹುಲಿನಾಯ್ಕರ್ ಮೊದಲಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
