ಕೊರಟಗೆರೆ
ಕೊರಟಗೆರೆ ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಿರುವ ಬೈಪಾಸ್ರಸ್ತೆಯಲ್ಲಿ ಅಪಘಾತ ತಡೆಗಟ್ಟಲು ಮುನ್ನೆಚ್ಚರಿಕೆಯ ನಾಮಫಲಕ, ರಸ್ತೆ ಉಬ್ಬುಗಳ ಬಗ್ಗೆ ಕೆಶಿಪ್ ಮತ್ತು ಪಿಡ್ಲ್ಯೂಡಿ ಇಲಾಖೆಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಕೊರಟಗೆರೆ ಆರಕ್ಷಕ ವೃತ್ತ ನಿರೀಕ್ಷಕ ನದಾಫ್ ಕೆಶಿಪ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಹೊರವಲಯದ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯ ಬೈಪಾಸ್ ರಸ್ತೆಯ ಸುರಕ್ಷತೆಯನ್ನು ಪೊಲೀಸ್ ಇಲಾಖೆ, ಪಿಡ್ಲ್ಯೂಡಿ ಮತ್ತು ಕೆಶಿಪ್ ಅಧಿಕಾರಿಗಳ ತಂಡ ಜಂಟಿಯಾಗಿ ಬೈಪಾಸ್ ರಸ್ತೆಯ ಪರಿಶೀಲನೆ ನಡೆಸಿತು. ಈ ವೇಳೆ ಮಾತನಾಡಿದ ಅವರು, ಬೈಪಾಸ್ರಸ್ತೆಯ ಕಾಮಗಾರಿ ವಿಳಂಬದಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾಮಗಾರಿ ಅಪೂರ್ಣ ಆಗಿರುವ ಹಿನ್ನೆಲೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕೆಶಿಪ್ ರಸ್ತೆಯ ಅಪಘಾತ ಸ್ಥಳಗಳನ್ನು ಮೂರು ಇಲಾಖೆಯ ಅಧಿಕಾರಿ ವರ್ಗ ಜಂಟಿಯಾಗಿ ಅಪಘಾತ ಸ್ಥಳಗಳನ್ನು ಗುರುತಿಸಿರುವ ವರದಿಯನ್ನು ರಾಜ್ಯದ ಡಿಸಿಎಂ ಡಾ.ಜಿ ಪರಮೇಶ್ವರ್ರವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಪೊಲೀಸ್ ಇಲಾಖೆ ನೀಡಲಿದೆ ಎಂದು ಹೇಳಿದರು.
ಕೊರಟಗೆರೆ ಪಿಎಸೈ ಮಂಜುನಾಥ ಮಾತನಾಡಿ, ಬೈಪಾಸ್ರಸ್ತೆಯಲ್ಲಿ ನಿರ್ಮಾಣ ಮಾಡುತ್ತಿರುವ ಹೈಮಾಸ್ಟ್ ದೀಪ, ರಸ್ತೆ ಉಬ್ಬುಗಳ ಕಾಮಗಾರಿ ವಿಳಂಬವಾಗಿದೆ. ಅಪಘಾತ ನಡೆಯುವ ಸ್ಥಳಗಳಲ್ಲಿ ಎಚ್ಚರಿಕೆಯ ನಾಮಫಲಕ ಮತ್ತು ರಸ್ತೆ ಲೈಟ್ಗಳ ವ್ಯವಸ್ಥೆ ಮಾಡಬೇಕು. ರಸ್ತೆ ಉಬ್ಬುಗಳ ಕಾಮಗಾರಿ ಪ್ರಾರಂಭವಾಗಿ ಹಲವು ದಿನಗಳಾದರೂ ಸಹ ಮುಕ್ತಾಯವಾಗಿಲ್ಲ. ರಸ್ತೆ ಸುರಕ್ಷಣೆ ಮತ್ತು ಅಪಘಾತ ತಡೆಯುವ ನಿಟ್ಟಿನಲ್ಲಿ ಕೆಶಿಪ್ ಅಧಿಕಾರಿಗಳ ತಂಡ ಪೊಲೀಸ್ ಇಲಾಖೆಯ ಸಲಹೆಯನ್ನು ಪಾಲಿಸಿ ಅಪಘಾತ ತಡೆಯಲು ಸಹಕಾರ ನೀಡಬೇಕು ಎಂದು ಹೇಳಿದರು.
ಬೈಪಾಸ್ ರಸ್ತೆಯಲ್ಲಿ ರಸ್ತೆ ಸುರಕ್ಷತೆ, ಮುನ್ನೆಚ್ಚರಿಕೆ ನೀಡುವ ನಾಮಫಲಕಗಳು ಸರಿಯಾದ ರೀತಿಯಲ್ಲಿ ಇಲ್ಲದಿರುವ ಕಾರಣ ಈಗಾಗಲೇ ಸಾಕಷ್ಟು ಅಪಘಾತಗಳು ನಡೆದಿವೆ. ಕೆಶಿಪ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯಿಂದ ಈಗಾಗಲೇ ಎರಡು ಬಾರಿ ಸೂಚನೆ ನೀಡಿದರೂ ಯಾವುದೇ ರೀತಿಯ ಉಪಯೋಗವಾಗಿಲ್ಲ. ಇನ್ನೊಂದು ವಾರದಲ್ಲಿ ಬೈಪಾಸ್ರಸ್ತೆಯನ್ನು ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಮೇಲಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.
ಕೊರಟಗೆರೆ ಪಟ್ಟಣದ ಬೈಪಾಸ್ ಮೂಲಕ ಹಾದು ಹೋಗುವ ಥರಟಿ ಗ್ರಾಮ, ಜಂಪೇನಹಳ್ಳಿ ಕ್ರಾಸ್, ಡಿಗ್ರಿ ಕಾಲೇಜು, ಊರ್ಡಿಗೆರೆ ವೃತ್ತ, ಬೋಡಬಂಡೇನಹಳ್ಳಿ, ಮಲ್ಲೇಶಪುರ ಕ್ರಾಸ್, ಹೊಳವನಹಳ್ಳಿ ರಸ್ತೆ, ಸಿದ್ದೇಶ್ವರ ಕಲ್ಯಾಣ ಮಂಟಪ ಮತ್ತು ತುಂಬಾಡಿ ಕ್ರಾಸಿನಿಂದ ಸಿದ್ದರಬೆಟ್ಟಕ್ಕೆ ಹೋಗುವ ಮಾರ್ಗದ ಬಳಿ ಕೆಶಿಪ್ ಇಲಾಖೆಯ ರಾಜಣ್ಣ, ಪಿಡ್ಲ್ಯೂಡಿ ರಾಘವೇಂದ್ರ ಮತ್ತು ಪೊಲೀಸ್ಇಲಾಖೆಯ ನದಾಫ್ ಮತ್ತು ಮಂಜುನಾಥ ಜಂಟಿಯಾಗಿ ಪರಿಶೀಲನೆ ನಡೆಸಿದರು.