ಮಹಿಳೆಯರ ಬಗೆಗಿನ ದೃಷ್ಟಿಕೋನ ಬದಲಾಗಬೇಕು

ಚಿತ್ರದುರ್ಗ

       ಎಲ್ಲ ಮಹಿಳೆಯರಿಗೂ ಉತ್ತಮ ಶಿಕ್ಷಣ ಸೂಕ್ತ ಉದ್ಯೋಗಗಳು ಮುಕ್ತವಾಗಿ ಸಿಗುವಂತಹ ಸಾಮಾಜಿಕ ವ್ಯವಸ್ಥೆ ನಮಗೆ ಬೇಕಾಗಿದೆ. ಅಂತಹ ಸಮಾಜವನ್ನು ಕಟ್ಟಲು ಮೊದಲು ಮಹಿಳೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ ಎಂದು ಎಐಎಂಎಸ್‍ಎಸ್ ರಾಜ್ಯಾಧ್ಯಕ್ಷರಾದ ಕಾ|| ಬಿ.ಆರ್. ಅಪರ್ಣಾ ತಿಳಿಸಿದ್ದಾರೆ.

        ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ ಯು ಆಲ್ ಇಂಡಿಯಾಯ ಜೊತೆಗೂಡಿ ಇಂದು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದು ಮಹಿಳೆಯರು ದುಡಿಯುವ ಸ್ಥಳಗಳಲ್ಲಿ, ಮನೆಗಳಲ್ಲಿ ದೌರ್ಜನ್ಯ-ಕಿರುಕುಳಗಳಿಗೆ ಒಳಗಾಗುತ್ತಲೇ ಇದ್ದಾರೆ. ಮಾಧ್ಯಮಗಳು ಅಂತಹ ಪ್ರಕರಣಗಳನ್ನು ಪ್ರತಿನಿತ್ಯ ವರದಿ ಮಾಡುತ್ತಲೇ ಇವೆ. ಇನ್ನು ಮರ್ಯಾದೆಗಂಜಿ ಎಷ್ಟೋ ಪ್ರಕರಣಗಳು ವರದಿಯಾಗುತ್ತಿಲ್ಲ. ಈ ಸಂದರ್ಭದಲ್ಲಿ #ಮಿ-ಟೂ ಅಭಿಯಾನವು ನೊಂದ ಮಹಿಳೆಯರು ಧ್ವನಿಯೆತ್ತಲು ಧೈರ್ಯನೀಡಿತು ಎಂದರು.

        ಈ ಅಭಿಯಾನದಲ್ಲಿ ಮೊದಲು ಚಿತ್ರ ನಟಿಯರು, ಸಾಮಾಜಿಕ ಕಾರ್ಯಕರ್ತರು ನಂತರ ಪತ್ರಿಕಾ ಮಾಧ್ಯಮಗಳಲ್ಲಿ ದುಡಿಯುವವರು ಒಬ್ಬೊಬ್ಬರಾಗಿ ಧ್ವನಿಯೆತ್ತಿ ಇನ್ನುಳಿದ ಸಂತ್ರಸ್ತ ಮಹಿಳೆಯರಿಗೆ ದನಿಯಾದರು. ಇಂತಹ ಹೋರಾಟಗಳು ಒಂದು ಅಂತಿಮ ಗಮ್ಯವನ್ನು ತಲುಪಿ ಭಯಮುಕ್ತ ಸಮಾಜವನ್ನು ಸೃಷ್ಟಿಸುವಂತಾಗಬೇಕು. ಮಹಿಳೆಯರ ಹೋರಾಟವೆಂದರೆ ಅದು ಪುರುಷ ವಿರೋಧೀ ಹೋರಾಟವಲ್ಲ, ಸಮಾಜದಲ್ಲಿ ಆಳವಾಗಿ ಬೇರೂರಿವ ಪುರುಷಪ್ರಧಾನ ಆಲೋಚನೆಯ ವಿರುದ್ಧ ನಮ್ಮ ಹೋರಾಟ ಸಾಗಬೇಕು. ಸಮಾಜದಲ್ಲಿ ಮೂಲಭೂತ ಬದಲಾವಣೆಯನ್ನು ತರಬಲ್ಲ ಸಮಾಜವಾದಿ ಕ್ರಾಂತಿಯ ಹೊರತಾಗಿ ಮಹಿಳಾ ವಿಮೋಚನೆ ಸಾಧ್ಯವಿಲ್ಲ, ಅಂತೆಯೇ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯಿಲ್ಲದೇ ಕ್ರಾಂತಿ ನೆರವೇರುವುದೂ ಸಹ ಸಾಧ್ಯವಿಲ್ಲ. ಆದ್ದರಿಂದ ಸಮಾನತೆಯ ಬದುಕಿಗಾಗಿ ಸ್ತ್ರೀ-ಪುರುಷರಿಬ್ಬರೂ ಒಟ್ಟಾಗಿ ಹೋರಾಡಬೇಕಿದೆ. ಅಂತಹ ಹೋರಾಟಗಳನ್ನು ತಾವು ಬಲಪಡಿಸಬೇಕು ಎಂದು ಕರೆ ನೀಡಿದರು.

         ಎಐಎಂಎಸ್‍ಎಸ್ ಜಿಲ್ಲಾ ಸಂಚಾಲಕರಾದ ಕಾ|| ಸುಜಾತ ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭ ಅವಶ್ಯವಾಗಿ ಪ್ರತಿಯೊಬ್ಬ ಹೆಣ್ಣುಮಗಳು ತಾನೇನು ಮಾಡಬೇಕು? ಮಹಿಳಾ ದೌರ್ಜನ್ಯ, ಅಸಮಾನತೆ, ಶೊಷಣೆಗೆ ಕೊನೆ ಹಾಕುವುದು ಹೇಗೆ? ಎಂಬುದಾಗಿ ಕೂಲಂಕಷವಾಗಿ ಯೋಚಿಸಿ ಸಂಘಟನಾತ್ಮಕವಾಗಿ ಕಾರ್ಯೋನ್ಮುಖವಾಗಲು ಪಣ ತೊಡುವ ಹಾಗೂ ನಮ್ಮಲ್ಲಿರುವ ಇತಿಮಿತಿಗಳನ್ನು ಕೊಡವಿ ಎದ್ದು ನಿಲ್ಲುವ ದಿನ ವಿಶ್ವದಾದ್ಯಂತ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ, ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಒಗ್ಗೂಡುವ ಅಪೂರ್ವವಾದ ಸಂದರ್ಭ ಇದಾಗಿದೆ. ಎಂದರು.

          ಭಾಷಣಕಾರರಾಗಿ ಮಾತನಾಡಿದ ಆಲ್ ಇಂಡಿಯಾ ಯು.ಟಿ.ಯು.ಸಿ ಯ ರಾಜ್ಯ ಸಮಿತಿ ಸದಸ್ಯರಾದ ಕಾ|| ದೇವದಾಸ್ ಅವರು “ಜಾಗತೀಕರಣ-ಆರ್ಥಿಕ ಉದಾರೀಕರಣ ನೀತಿಯ ನಂತರ ವಿವಿಧ ಅಸಂಘಟಿತ ಕ್ಷೇತ್ರಗಳಲ್ಲಿ ಹಾಗೂ ಸರಕಾರದ ವಿವಿಧ ಯೋಜನೆಗಳಡಿ ಕೆಲಸ ನಿರ್ವಹಿಸುತ್ತಿರುವ ಲಕ್ಷಾಂತರ ಹೆಣ್ಣುಮಕ್ಕಳು ತಮ್ಮ ಕುಟುಂಬ ನಿರ್ವಹಣೆಗೇ ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಲೆ ಏರಿಕೆ, ಸಾಮಾಜಿಕ ಅಭದ್ರತೆ, ಅಪೌಷ್ಟಿಕತೆ ದುಡಿಯುವ ಹೆಣ್ಣುಮಕ್ಕಳನ್ನು ಕಂಗೆಡಿಸುತ್ತಿದೆ. ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಕನಿಷ್ಟ ಜೀವನಯೋಗ್ಯ ವೇತನ ನೀಡದೇ ಇರುವುದು ಅಣಕವಾಗಿದೆ.

          ಪ್ರಸಕ್ತ ಸಾಮಾಜಿಕ- ರಾಜಕೀಯ ವ್ಯವಸ್ಥೆಯಲ್ಲಿ ಉಳ್ಳವರ ಮತ್ತು ಇಲ್ಲದಿರುವವರ ನಡುವೆ ತೀವ್ರವಾದ ರೀತಿಯಲ್ಲಿ ಅಂತರ ಹೆಚ್ಚುತ್ತಿದೆ. ಆಳುವ ಸರಕಾರಗಳು ಜನಹಿತಾಸಕ್ತಿಯನ್ನು ಕಡೆಗಣಿಸಿ ಧನದಾಹಿಗಳ ಹಿತಾಸಕ್ತಿಯನ್ನು ಕಾಪಾಡುತ್ತದೆ. ಕೇವಲ ಬೆರಳೆಣಿಕೆಯ ಲಾಭಕೋರರಿಗೆ ಮಣೆ ಹಾಕುತ್ತಾ ಇಡೀ ಜನಸಮುದಾಯವನ್ನು ಶೋಷಿಸಿ, ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದರು.

          ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ದೇಶದಾದ್ಯಂತ ಮಹಿಳೆಯರ-ರೈತ-ಕಾರ್ಮಿಕರ ಒಟ್ಟಾರೆ ಶೋಷಿತ ಜನತೆಯ ಧ್ವನಿ ಗಟ್ಟಿಯಾಗಬೇಕಾಗಿದೆ. ಮಹಿಳಾ ವಿಮುಕ್ತಿ ಕೇವಲ ಮಹಿಳೆಯರ ಅವಶ್ಯಕತೆಯಲ್ಲ, ಇಡೀ ಸಮಾಜದ ಅವಶ್ಯಕತೆ. ಆದ್ದರಿಂದ ಈ ಹೋರಾಟದಲ್ಲಿ ಪುರುಷರು-ಮಹಿಳೆಯರಿಬ್ಬರೂ ತೊಡಗಿಕೊಳ್ಳಬೇಕು. ಹಾಗೆಯೇ ಈ ಮಹೋನ್ನತ ಗುರಿ ಕೇವಲ ಸಾಧಿಸಲಾಗದ ಆದರ್ಶವಲ್ಲ. ಪ್ರಜಾತಾಂತ್ರಿಕ ಮೌಲ್ಯಗಳ ಸಾಕಾರಕ್ಕಾಗಿ ಮುನ್ನಡೆಯುವ ಹಾದಿ. ಆದ್ದರಿಂದ ಬಂಡವಾಳಶಾಹಿ ವ್ಯವಸ್ಥೆಯಿಂದ ಹೆಚ್ಚುತ್ತಿರುವ ಸಾಮಾಜಿಕ ಸಮಸ್ಯೆಗಳನ್ನು ಕೊನೆಗಾಣಿಸಲು ಶೋಷಿತ ಜನತೆಯೊಡಗೂಡಿ ಸಮಾಜವಾದಿ ವ್ಯವಸ್ಥೆಗೆ ಸಂಘಟಿತರಾಗಿ ಜೊತೆಗೂಡುವ ಮಹತ್ಕಾರ್ಯ; ಆ ಜವಾಬ್ದಾರಿಯನ್ನು ಇಂದು ನಾವು ಕೈಗೊಳ್ಳಬೇಕಾಗಿದೆ. ಎಂದರು.

         ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲ್ ಇಂಡಿಯಾ ಯು.ಟಿ.ಯು.ಸಿ ಯ ಜಿಲ್ಲಾ ಸಂಚಾಲಕರಾದ ಕಾ|| ರವಿಕುಮಾರ್ ವಹಿಸಿಕೊಂಡು ಮಾತನಾಡುತ್ತಾ ಇಂದು ಶೇಕಡಾ 70 ರಷ್ಟು ಮಹಿಳೆಯರು ಕೌಟುಂಬಿಕ ದೌರ್ಜನ್ಯಗಳಿಗೆ ತುತ್ತಾಗುತ್ತಿದ್ದಾರೆ. ಪ್ರತಿ ವರ್ಷ 1,50,000ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಪ್ರತೀ ಎಂಟು ನಿಮಿಷಕ್ಕೊಮ್ಮೆ ಮಕ್ಕಳ ನಾಪತ್ತೆ ಪ್ರಕರಣ ದಾಖಲಾಗುತ್ತಿದೆ. ಆದ್ದರಿಂದ ಇಂದಿನ ಮಹಿಳಾ ದಿನವನ್ನು ನಾವು ಮಹಿಳೆಯರ ಘನತೆ, ಭದ್ರತೆಯನ್ನು ಎತ್ತಿಹಿಡಿಯಲು ಆಗ್ರಹಿಸುವ ದಿನವನ್ನಾಗಿ ಆಚಚರಿಸುತ್ತಿದ್ದೇವೆ” ಎಂದರು.ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀಮತಿ ಗಿರಿಜಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ತಾಲ್ಲೂಕುಗಳ ಆಶಾಗಳು ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link