ಚಿತ್ರದುರ್ಗ:
ಯೋಗದಿಂದ ರೋಗವನ್ನು ದೂರ ಮಾಡಿ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ಯೋಗ ಗುರು ಬಾಬಾ ರಾಮ್‍ದೇವ್‍ರವರ ಶಿಷ್ಯ ಹರಿದ್ವಾರದ ಕೈಲಾಸ್‍ಜಿ ಯೋಗದ ಮಹತ್ವ ತಿಳಿಸಿದರು.
ಪತಂಜಲಿ ಯೋಗ ಸಮಿತಿ ಹಾಗೂ ಕೋಟೆ ವಾಯುವಿಹಾರಿಗಳ ಸಂಘದಿಂದ ಕೋಟೆ ಆವರಣದಲ್ಲಿ ಹದಿನೈದು ದಿನಗಳ ಕಾಲ ನಡೆದ ಉಚಿತ ಯೋಗ ಪ್ರಾಣಾಯಾಮ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಮನಸ್ಸು ಮತ್ತು ದೇಹವನ್ನು ಶುದ್ದವಾಗಿಡುವ ಶಕ್ತಿ ಯೋಗಕ್ಕಿದೆ. ಹಾಗಾಗಿ ಪ್ರತಿಯೊಬ್ಬರು ದಿನಕ್ಕೆ ಕನಿಷ್ಟ ಅರ್ಧ ಗಂಟೆಯಾದರೂ ಯೋಗ ಮಾಡಿ ದೇಹದಲ್ಲಿರುವ ಕಾಯಿಲೆ, ನೋವನ್ನು ದೂರಮಾಡಿಕೊಳ್ಳಿ ಎಂದು ವಿನಂತಿಸಿದರು.
ಇತಿಹಾಸ ಸಂಶೋಧಕ ಪ್ರೊ.ಶ್ರೀಶೈಲ ಆರಾಧ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತ ಯೋಗದಲ್ಲಿ 84 ಆಸನಗಳಿವೆ. ಸ್ವಾಸ್ತಿಕ, ಸಿದ್ದ, ಪದ್ಮ, ತಪಸ್ಸಿನ ಆಸನಗಳು ಬಹಳ ಮುಖ್ಯವಾದುದು. ಸಾಮಾನ್ಯ ಜನರು ಯೋಗ ಮಾಡಲು ಇಚ್ಚಿಸುತ್ತಾರೆ. ರಾಜಕಾರಣಿಗಳಿಗೆ ಮೊದಲು ಯೋಗ ಕಲಿಸಬೇಕಾಗಿದೆ. ಮನಸ್ಸು ಮತ್ತು ದೇಹವನ್ನು ಏಕಾಗ್ರತೆಯಿಂದ ಇಡಬೇಕಾದರೆ ಎಲ್ಲರೂ ಯೋಗ ಮಾಡಬೇಕು ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಕೆಲವು ಯೋಗ ತಪಸ್ವ್ವಿಗಳು ಕಳ್ಳಿಹಾಲು, ಮೆಟಾಸಿಡ್ ಇಂತಹ ವಿಷಕಾರಕಗಳನ್ನು ಕುಡಿದು ಅರಗಿಸಿಕೊಳ್ಳುತ್ತಿದ್ದರು . ಏಕೆಂದರೆ ಅವರ ದೇಹ ವಜ್ರಕಾಯವಾಗಿತ್ತು. ಬ್ರಹ್ಮಾಂಡದಲ್ಲಿ ಜನಿಸಿದ ಎಲ್ಲರೂ ಒಂದಲ್ಲ ಒಂದು ದಿನ ಇಹಲೋಹ ಬಿಡಲೇಬೇಕು.
ಆದರೆ ಯೋಗದಿಂದ ಆಯಸ್ಸು ವೃದ್ದಿಯಾಗುತ್ತದೆ. ಯೋಗದಿಂದ ಮಾತ್ರ ರೋಗಮುಕ್ತ ಭಾರತ ಕಾಣಬಹುದು ಎಂದರು.
ಪತಂಜಲಿ ಯೋಗ ಸಮಿತಿಯ ಮಲ್ಲಿಕಾರ್ಜುನಪ್ಪ ಮಾತನಾಡಿ ಯೋಗದಿಂದ ತುಂಬ ಉಪಯೋಗವಿದೆ. ಊಟ ಬಿಟ್ಟರು ಯೋಗ ಬಿಡಬಾರದು. ಆರೋಗ್ಯ ಭಾಗ್ಯದ ಮುಂದೆ ಮನುಷ್ಯನಿಗೆ ಬೇರೆ ಯಾವ ಭಾಗ್ಯವೂ ಇಲ್ಲ. ಚಿತ್ರದುರ್ಗದಲ್ಲಿ 30 ಕಡೆ ಯೋಗ ಕೇಂದ್ರವನ್ನು ತೆರೆಯಲಾಗಿದೆ. ಅಲ್ಲಿ ಯೋಗ ಶಿಕ್ಷಕರುಗಳು ಯೋಗವನ್ನು ಹೇಳಿಕೊಡುತ್ತಾರೆ. ಚಿತ್ರದುರ್ಗದ ಜನತೆ ಯೋಗ ಅಭ್ಯಾಸ ಮಾಡಿ ಉತ್ತಮ ಆರೋಗ್ಯವನ್ನು ಕಂಡುಕೊಳ್ಳುವಂತೆ ಮನವಿ ಮಾಡಿದರು.
ಯೋಗ ರೋಗವನ್ನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಜೀವನ ಶೈಲಿ ಮತ್ತು ಆಹಾರ ಪದ್ದತಿ ಮೊದಲು ಬದಲಾವಣೆಯಾಗಬೇಕು. ಯೋಗಕ್ಕೆ ರೋಗ ನಿರೋಧಕ ಶಕ್ತಿಯಿದೆ. ಯೋಗದ ಜೊತೆ ಒಳ್ಳೊಳ್ಳೆ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯ ಶ್ರೀನಿವಾಸ್ ಮಾತನಾಡುತ್ತ ಜಂಜಾಟದ ಜೀವನದಲ್ಲಿ ಯೋಗದ ಕಡೆಗೆ ಯಾರು ಗಮನಕೊಡದಂತಾಗಿದ್ದಾರೆ. ಆರೋಗ್ಯ ಚೆನ್ನಾಗಿರಬೇಕಾದರೆ ತಪ್ಪದೆ ದಿನವೂ ಯೋಗ ಮಾಡಿ. ಯೋಗ ಮಾಡಲು ನಮ್ಮ ಕಾಲೇಜಿನಲ್ಲಿ ಸ್ಥಳ ನೀಡುತ್ತೇನೆ ಎಂದು ಭರವಸೆ ಕೊಟ್ಟರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ ಯೋಗಕ್ಕೆ ಆರು ಸಾವಿರ ವರ್ಷಗಳ ಇತಿಹಾಸವಿದೆ. ಯೋಗಕ್ಕೆ ಯಾವ ಜಾತಿ ಧರ್ಮದ ಹಂಗಿಲ್ಲ. ಜಗತ್ತಿನಲ್ಲಿರುವ ಪ್ರತಿಯೊಬ್ಬರು ಯೋಗವನ್ನು ಕಲಿಯಬಹುದು. ಪ್ರಾಣಾಯಾಮ ಮಾಡುವುದರಿಂದ ಹೃದಯಾಘಾತ ಕಡಿಮೆಯಾಗಲಿದೆ. 177 ರಾಷ್ಟ್ರಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ದಿನಕ್ಕೆ ಒಂದು ಗಂಟೆಯಾದರೂ ಯೋಗಕ್ಕೆ ಸಮಯ ಮೀಸಲಿಡಬೇಕಾಗಿದೆ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಮಾತನಾಡುತ್ತ ಹಿಂದಿನ ಕಾಲದಲ್ಲಿ ಋಷಿಮುನಿಗಳು ಯೋಗ ಮಾಡುತ್ತಿದ್ದರು. ನಮ್ಮ ಪೂರ್ವಿಕರು ದಿನವಿಡಿ ಮೈಮುರಿದು ಕೆಲಸ ಮಾಡುವ ಮೂಲಕ ಆರೋಗ್ಯವಂತರಾಗಿರುತ್ತಿದ್ದರು. ಧಾನ್ಯಗಳನ್ನು ಕುಟ್ಟಿ ಬೀಸಿ ಅಡುಗೆ ತಯಾರಿಸುತ್ತಿದ್ದರು. ವೈಜ್ಞಾನಿಕ ಯುಗದಲ್ಲಿ ಇಂದು ಎಲ್ಲರೂ ಯಂತ್ರಗಳನ್ನು ಬಳಸುತ್ತಿರುವುದರಿಂದ ದೇಹಕ್ಕೆ ಕೆಲಸವೇ ಇಲ್ಲದಂತಾಗಿದೆ. ಭೋಗದ ಜೀವನ ಬಿಡಿ ಯೋಗ ಮಾಡಿ ಆರೋಗ್ಯವಂತರಾಗಿರಿ ಎಂದು ತಿಳಿಸಿದರು.
ಕೋಟೆ ವಾಯುವಿಹಾರಿಗಳ ಸಂಘದ ಗೌರವಾಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ಚನ್ನಬಸಪ್ಪ ವೇದಿಕೆಯಲ್ಲಿದ್ದರು. ನಿರ್ದೇಶಕರಗಳಾದ ಕೂಬಾನಾಯ್ಕ, ನರಸಿಂಹಪ್ಪ, ರುದ್ರಣ್ಣ, ರತ್ನಮ್ಮ, ಲತ, ವನಜಾಕ್ಷಿ, ಕಮಲಮ್ಮ, ವೀಣ, ಭೋವಿ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ತಿಮ್ಮಣ್ಣ, ಪರಿಸರ ಪ್ರೇಮಿ ಏಕಾಂತಯ್ಯ, ಯೋಗ ಶಿಕ್ಷಕ ರವಿ ಅಂಬೇಕರ್ ಸೇರಿದಂತೆ ನೂರಾರು ಮಹಿಳಾ ಶಿಬಿರಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








