ಚಿತ್ರದುರ್ಗ :
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯಲು ಮುಖ್ಯವಾಗಿ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯಾದ್ಯಂತ ರಂಗೋಲಿ, ಚಿತ್ರಕಲೆ, ಕ್ರೀಡಾಕೂಟ, ಸೈಕಲ್ ಜಾಥಾ ಹಾಗೂ ಹರಟೆಯಂತಹ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಹೇಳಿದರು.
ಮತದಾರರ ಜಾಗೃತಿಗೆ ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಪೂರ್ವ ಸಿದ್ಧತೆ ಕುರಿತು ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ. ಈ ಹಬ್ಬವನ್ನು ಎಲ್ಲ ಮತದಾರರು ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಸಂಭ್ರಮದ ವಾತಾವರಣ ಇರಲು ಸಾಧ್ಯ. ಮತದಾನ ಮಾಡದ ಮತದಾರ, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕತೆಯನ್ನು ಕಳೆದು ಕೊಂಡಂತಾಗುತ್ತದೆ .
ಹೀಗಾಗಿ ಚುನಾವಣೆಯ ಮಹತ್ವವನ್ನು ಮತದಾರರಿಗೆ ಅರಿವು ಮೂಡಿಸುವ ಕಾರ್ಯವನ್ನು ಚುನಾವಣಾ ಆಯೋಗ ಸ್ವೀಪ್ ಸಮಿತಿಯ ಮೂಲಕ ಕೈಗೊಳ್ಳುತ್ತಿದೆ. 18 ವರ್ಷ ವಯಸ್ಸು ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇನ್ನೂ ಕಾಲಾವಕಾಶವಿದೆ ಎಂದರು.
ಡಾಕ್ಟರ್ ನೀಡುವ ಚೀಟಿಯಲ್ಲೂ ಜಾಗೃತಿ :
ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಡಾಕ್ಟರ್ಗಳು, ರೋಗಿಗಳಿಗೆ ನೀಡುವ ಔಷಧದ ಚೀಟಿಯಲ್ಲಿಯೂ, ಮತದಾನದ ಜಾಗೃತಿ ಸಂದೇಶ ನೀಡಲಿದ್ದಾರೆ. ಆರೋಗ್ಯ ಇಲಾಖೆಯ ಎಲ್ಲ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡುವ ಔಷಧದ ಚೀಟಿಯಲ್ಲಿ, ಮತದಾನ ದಿನಾಂಕ ಹಾಗೂ ಜಾಗೃತಿ ಸಂದೇಶದ ಮೊಹರು ಹಾಕಲು, ಅಗತ್ಯ ಕ್ರಮ ಕೈಗೊಳ್ಳಬೇಕು.
ಖಾಸಗಿ ಆಸ್ಪತ್ರೆಗಳ ಡಾಕ್ಟರ್ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಮೂಲಕವೂ ಜಾಗೃತಿ ಸಂದೇಶ ಬಿತ್ತರವಾಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು ಅಂಚೆ ಇಲಾಖೆಯಿಂದ ನಿತ್ಯ ಸಾವಿರಾರು ಪತ್ರಗಳು, ಜಿಲ್ಲೆಯಲ್ಲಿ ವಿಲೇವಾರಿಯಾಗಲಿದ್ದು, ಎಲ್ಲ ಲಕೋಟೆಯ ಮೇಲೂ, ಜಾಗೃತಿ ಸಂದೇಶದ ಮೊಹರು ಹಾಕಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಟಿಕೆಟ್ಗಳ ಮೇಲೆ ಸಂದೇಶ ಅಳವಡಿಕೆಗೆ ಅವಕಾಶವಿದ್ದು, ಕೂಡಲೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.
ವೈವಿಧ್ಯಮಯ ಕಾರ್ಯಕ್ರಮ :
ಜಿಲ್ಲೆಯಲ್ಲಿ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯಲು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಅವರನ್ನು ಮತದಾನಕ್ಕೆ ಪ್ರೇರೇಪಿಸುವುದು ಸ್ವೀಪ್ ಕಾರ್ಯಕ್ರಮದ ಉದ್ದೇಶವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಮಕ್ಕಳಿಂದ ಅವರ ಪೋಷಕರು, ಪಾಲಕರಿಗೆ ಜಾಗೃತಿ ಮೂಡಿಸಲು ಪತ್ರ ಚಳುವಳಿ ಆಯೋಜಿಸಿದೆ.
ಅಲ್ಲದೆ ಜಿಲ್ಲೆಯಾದ್ಯಂತ ಜಾಗೃತಿ ಸಂದೇಶದೊಂದಿಗೆ ವಿದ್ಯಾರ್ಥಿಗಳ ಸೈಕಲ್ ರ್ಯಾಲಿ, ಶಿಕ್ಷಕರಿಂದ ಬೈಕ್ ರ್ಯಾಲಿ, ಗ್ರಾಮಗಳಲ್ಲಿ ಪ್ರಭಾತ ಪೇರಿ. ಮತದಾನ ಜಾಗೃತಿ ಬಿಂಬಿಸುವ ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಆಯೋಜಿಸಲಿದೆ. ನಗರಸಭೆ ವತಿಯಿಂದ ಕಸ ವಿಲೇವಾರಿ ವಾಹನಗಳ ಮೂಲಕ ಮತದಾನ ಜಾಗೃತಿ ಗೀತೆಗಳ ಪ್ರಸಾರ ಮಾಡಲಾಗುವುದು ಎಂದರು ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ, ನಗರಸಭೆ ಪೌರಾಯುಕ್ತ ಚಂದ್ರಪ್ಪ, ಸಮಾಜ ಕಲ್ಯಾಣಾಧಿಕಾರಿ ನಾಗರಾಜ್, ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ವೈಶಾಲಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
