ತುಮಕೂರು
ಕ್ರಿಯಾಶೀಲ, ಚಲನಶೀಲ ಜೀವನಶೈಲಿ ರೂಢಿಸಿಕೊಂಡರೆ ರೋಗಗಳು ಬಾರದಂತೆ ನಿಯಂತ್ರಿಸಬಹುದು, ಜೊತೆಗೆ ಶಿಸ್ತು, ಉತ್ತಮ ಹವ್ಯಾಸ, ಪ್ರವೃತ್ತಿಗಳನ್ನೂ ಬೆಳೆಸಿಕೊಂಡರೆ ಆರೋಗ್ಯಕರ ಜೀವನ ನಡೆಸಲು ಅವಕಾಶವಿದೆ ಎಂದು ಪ್ರಜಾಪ್ರಗತಿ ಸಂಪಾದಕರಾದ ಎಸ್ ನಾಗಣ್ಣನವರು ಅಭಿಪ್ರಾಯಪಟ್ಟರು.
ರೀಡ್ ಬುಕ್ ಫೌಂಡೇಶನ್, ರೋಟರಿ ತುಮಕೂರು, ರೋಟರಿ ತುಮಕೂರು ಪೂರ್ವ, ಇನ್ನರ್‍ವ್ಹೀಲ್ ಹಾಗೂ ಭಾರತೀಯ ವೈದ್ಯಕೀಯ ಸಂಸ್ಥೆ ತುಮಕೂರು ಘಟಕದ ಆಶ್ರಯದಲ್ಲಿ ನಗರದ ಐಎಂಎ ಸಭಾಂಗಣದಲ್ಲಿ ಭಾನುವಾರ ನಡೆದ ಡಾ. ಕೆ ರಾಜಶೇಖರ್ ರಚಿಸಿರುವ ‘ಮಧುಮೇಹ ದರ್ಶನ’ ಪುಸ್ತಕ ಬಿಡುಗಡೆ ಹಾಗೂ ಮಧುಮೇಹ ತಪಾಸಣಾ ಶಿಬಿರ ಉದ್ಘಾಟಿಸಿದ ಅವರು, ಮಧುಮೇಹವನ್ನು ಸ್ನೇಹಿತನಂತೆ ನೋಡಿಕೊಂಡು ಅದು ಹೇಳಿದಂತೆ ಕೇಳಿಕೊಂಡು ನಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಮಧುಮೇಹಿಗಳು ಮೊದಲು ಮಧುಮೇಹದ ಬಗ್ಗೆ ತಾವೇ ಅಧ್ಯಯನ ಮಾಡಿ, ತಿಳುವಳಿಕೆ ಹೊಂದಬೇಕು, ವೈದ್ಯರು ನೀಡುವ ಸಲಹೆ, ಔಷಧಿ ಉಪಯೋಗಿಸುತ್ತಾ, ಪೂರಕ ಚಟುವಟಿಕೆ ಅನುಸರಿಸಿ ನಿಯಂತ್ರಣ ಮಾಡಿಕೊಳ್ಳಬೇಕು. ಕಾಯಿಲೆಯ ತೀವ್ರತೆಯನ್ನು ಅರಿತು ಔಷಧಿ, ವ್ಯಾಯಾಮ ಮಾಡುತ್ತಾ ಸೂಕ್ತ ನಿಯಂತ್ರಣಾ ಕ್ರಮ ಅನುಸರಿಸಬೇಕು ಎಂದರು.
ಮಧುಮೇಹ ವಂಶವಾಹಿನಿಂದ, ಇಲ್ಲವೆ ನಮ್ಮ ಜೀವನಶೈಲಿಯ ಬದಲಾವಣೆಯಿಂದಲೂ ಬರಬಹುದು. ಸದಾ ಚಟುವಟಿಕೆಯಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ, ಇಂತಹ ರೋಗ ತಡೆಯಲು ಸಾಧ್ಯವಿದೆ. ನಿವೃತ್ತಿ ನಂತರ ಕೆಲವರು ತಮ್ಮ ಜೀವನವೇ ಮುಗಿದುಹೋಯಿತು ಎನ್ನುವಂತೆ, ನಿರ್ಲಿಪ್ತರಾಗಿಬಿಡುತ್ತಾರೆ. ಕಾಲಹರಣ ಮಾಡುತ್ತಾ ಕರ್ತವ್ಯ ತಪ್ಪಿಸಿಕೊಳ್ಳುತ್ತಾರೆ. ಶಿಸ್ತು ಉಳಿಸಿಕೊಂಡು, ಬದುಕಿನಲ್ಲಿ ಕ್ರಿಯಾಶೀಲತೆ ಕಾಪಾಡಿಕೊಳ್ಳಬೇಕು ಎಂದು ಮಕ್ಕಳಿಗೆ ಹೇಳವ ನೈತಿಕತೆ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.
ಜನರ ಮಧ್ಯೆ ಬೆರೆತು, ಕರ್ತವ್ಯ ಪ್ರಜ್ಷೆ ಬೆಳೆಸಿಕೊಂಡು ಕ್ರಿಯಾಶಿಲತೆ ಉಳಿಸಿಕೊಂಡರೆ ಹೆಚ್ಚು ಕಾಲ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ತಮ್ಮಲ್ಲಿನ ಪ್ರವೃತ್ತಿಗಳು ಹೆಚ್ಚು ಶಕ್ತಿ ಕೊಡುತ್ತವೆ. ಕರ್ತವ್ಯ, ಉತ್ತಮ ಜೀವನಶೈಲಿ ಕಾಯಿಲೆರಹಿತವಾಗಿ ಬಾಳಲು ಹೆಚ್ಚು ನೆರವಾಗುತ್ತವೆ ಎಂದು ನಾಗಣ್ಣನವರು ಹೇಳಿದರು.
ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ ಸೋಮಶೇಖರ್ ಅವರು ಮಧುಮೇಹ ದರ್ಶನ ಪುಸ್ತಕ ಬಿಡುಗಡೆ ಮಾಡಿ, ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಎಲ್ಲವನ್ನೂ ಬಯಸಲು ಹೋಗಿ ಒತ್ತಡಕ್ಕೆ ಸಿಲುಕಿ ಮಾನಸಿಕ, ದೈಹಿಕ ಆರೋಗ್ಯ ಕಳೆದುಕೊಳ್ಳತ್ತೇವೆ. ದುಗುಡ, ದುರಾಸೆ ಬಿಟ್ಟು, ಸರಳ ಬದುಕು, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ, ಜೊತೆಗೆ ಯೋಗ, ವ್ಯಾಯಾಮಗಳ ಅಭ್ಯಾಸ ಬೆಳೆಸಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಮಧುಮೇಹ ಎಲ್ಲಾ ಕಾಯಿಲೆಗಳ ಮೂಲವಾಗುತ್ತದೆ. ಮೂತ್ರಪಿಂಡ, ಕಣ್ಣು, ಹೃದಯ, ಮೆದುಳು, ಎಲ್ಲಾ ಅಂಗಾಂಗಗಳಿಗೂ ಈ ಕಾಯಿಲೆ ಬಾಧಿಸುತ್ತದೆ. ಬದುಕಿನ ತಲ್ಲಣಗಳನ್ನು ನಿಯಂತ್ರಿಸಿ, ಕೌಟುಂಬಿಕ ಸಾಮರಸ್ಯ ಉಳಿಸಿಕೊಳ್ಳಬೇಕು. ನಮ್ಮ ಈಗಿನ ಜೀವನ ಶೈಲಿಯೇ ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ವರ್ಷಕ್ಕೊಮ್ಮೆ ತಪ್ಪದೆ ಆರೋಗ್ಯ ಪರೀಕ್ಷಿಸಿಕೊಳ್ಳಬೇಕು, ವೈದ್ಯರ ಸಲಹೆ ಪಡೆದು ಅದನ್ನು ಅನುಸರಿಸುವುದರಿಂದ ಮಧುಮೇಹ ನಿಯಂತ್ರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಗತ್ತಿನಲ್ಲಿ ಸುಮಾರು 35 ಕೋಟಿಯಷ್ಟು ಮಧುಮೇಹಿಗಳಿದ್ದಾರೆ. ಅದರಲ್ಲಿ ಭಾರತೀಯರು ಎರಡನೇ ಸ್ಥಾನದಲ್ಲಿದ್ದಾರೆ. ಪ್ರಖರವಾಗಿ ಎಲ್ಲರನ್ನೂ ಬಾಧಿಸುವ ಮಧುಮೇಹ ಎಲ್ಲ ಕಾಯಿಲೆಗಳಿಗೂ ವಿಷ ಬೀಜ ಬಿತ್ತುತ್ತದೆ ಎಂದರು.ಸಂಘಸಂಸ್ಥೆಗಳು ಸ್ಲಂಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ, ಅವರಿಗೆ ಸಕ್ಕರೆ ಕಾಯಿಲೆ ಬಗ್ಗೆ ತಿಳುವಳಿಕೆ ನೀಡಿ, ಅಗತ್ಯ ಸಲಹೆ, ಔಷಧೋಪಚಾರ ಒದಗಿಸಬೇಕು ಎಂದು ಡಾ. ಸೋಮಶೇಖರ್ ಸಲಹೆ ಮಾಡಿದರು.
ಹಿರಿಯ ಮಧುಮೇಹಿ ತಜ್ಞರಾದ ಡಾ. ಕೆ ರಾಜಶೇಖರ್ ಅವರು, ಮಧುಮೇಹ ಕಾಯಿಲೆ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು. ತಿಳುವಳಿಕೆ ಇದ್ದರೆ ವೈದ್ಯರ ಸಲಹೆ, ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯ ಎಂದರು.ತಮ್ಮಮಧುಮೇಹ ದರ್ಶನ ಪುಸ್ತಕ ಕಾಯಿಲೆ ಬಗ್ಗೆ ಅಗತ್ಯ ಮಾಹಿತಿ ನೀಡುತ್ತದೆ, ಪ್ರತಿ ಕುಟುಂಬದಲ್ಲೂ ಈ ಪುಸ್ತಕ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.
ರೀಡ್ ಬುಕ್ ಫೌಂಡೇಶನ್ ಅಧ್ಯಕ್ಷ ಡಾ. ಎಸ್ ಎಲ್ ಕಾಡದೇವರ ಮಠ್ ಮಾತನಾಡಿ, ತಮ್ಮ ಸಂಸ್ಥೆಯಿಂದ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಕಾರ್ಯಕ್ರಮದ ಜೊತೆಗೆ ವಿವಿಧ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ತುಮಕೂರು ಹಾಗೂ ಬೆಂಗಳೂರಿನ ಪ್ರತಿ ವಾರ್ಡಿನಲ್ಲೂ ಮಧುಮೇಹ ತಪಾಸಣಾ ಶಿಬಿರ ಏರ್ಪಡಿಸಿ, ಡಾ. ರಾಜಶೇಖರ್ ಅವರು ರಚಿಸಿರುವ ಪುಸ್ತಕ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಐಎಂಎ ತುಮಕೂರು ಅಧ್ಯಕ್ಷ ಡಾ. ಎಸ್ ಜಿ ಪರಮೇಶ್ವರಪ್ಪ, ತುಮಕೂರು ರೋಟರಿ ಅಧ್ಯಕ್ಷ ಉದಯಕುಮಾರ್, ರೋಟರಿ ಪೂರ್ವ ಅಧ್ಯಕ್ಷ ಡಾ. ವಿಜಯಕುಮಾರ್, ಇನರ್ ವ್ಹೀಲ್ ಅಧ್ಯಕ್ಷೆ ನಾಗಮಣಿ ಪ್ರಭಾಕರ್ ಮೊದಲಾದವರು ಭಾಗವಹಿಸಿದ್ದರು.ಈ ವೇಳೆ ಮಧುಮೇಹಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಡಾ. ಪರಮೇಶ್ವರಪ್ಪ ಮಧುಮೇಹಿಗಳೊಂದಿಗೆ ಸಂವಾದ ನಡೆಸಿ ಅವರಿಗೆ ಸೂಕ್ತ ಸಲಹೆ ನೀಡಿದರು.