ದಾವಣಗೆರೆ:
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ಕ್ರಮ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಟ್ಟಡ ಕಾರ್ಮಿಕರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ಅಶೋಕ ರಸ್ತೆಯಲ್ಲಿರುವ ಕಾಮ್ರೇಡ್ ಪಂಪಾಪತಿ ಭವನದಿಂದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟ ಕಟ್ಟಡ ಕಾರ್ಮಿಕರು, ಸೌಲಭ್ಯ ಕಲ್ಪಿಸಲು ವಿಳಂಬ ಮಾಡುತ್ತಿರುವ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಆಕ್ರೋಶ ವ್ಯಕ್ತಪಡಿಸುತ್ತಾ ಎಸಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಉಮೇಶ್, ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಸೌಲಭ್ಯ ನೀಡಲು ಮಂಡಳಿ ರಚಿಸಿ ಈ ಮೂಲಕ ಸೌಲಭ್ಯ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಆದರೆ, ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆಯಿಂದ ಸೌಲಭ್ಯಗಳು ಇದ್ದು, ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಂಡಳಿಯಲ್ಲಿ 7500 ಕೋಟಿ ರೂ.ಗೂ ಅಧಿಕ ಹಣವಿದೆ. ಆದರೆ, ಫಲಾನುಭವಿಗಳು ಸೌಲಭ್ಯಕ್ಕಾಗಿ 2 ರಿಂದ 3 ವರ್ಷ ಕಾಯಬೇಕಾಗಿದೆ. ಅಲ್ಲದೆ ಇದಕ್ಕೆ ಹತ್ತು ಹಲವು ಸಬೂಬುಗಳನ್ನು ಕಾರ್ಮಿಕ ಇಲಾಖೆಯವರು ಹೇಳುತ್ತಿದ್ದಾರೆ. ಈ ಸಮಸ್ಯೆಗೆ ಮೂಲ ಕಾರಣ ಸಿಬ್ಬಂದಿಯ ಕೊರತೆ, ನೋಂದಣಿ, ನವೀಕರಣ, ಸೌಲಭ್ಯ ನೀಡಲು, ಹೊಸ ವಿಧಾನ ಅಳವಡಿಸಿಕೊಳ್ಳಲು ಇಲಾಖೆ ಹಿಂದೆ ಬಿದ್ದಿರುವುದು, ಕೂಡಲೇ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸಿದರು.
ಹಿರಿಯ ಕಾರ್ಮಿಕ ಮುಖಂಡರಾದ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಬೇಡಿಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಮತ್ತು ಕಾರ್ಮಿಕ ಸಂಘಟನೆಯ ನಾಯಕರ ಸಭೆ ಕರೆಯಬೇಕು. ಕಲ್ಯಾಣ ಮಂಡಳಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳನ್ನು ಸದಸ್ಯರಾಗಿ ನೇಮಿಸಬೇಕು. ಓಪಿಟಿ ರದ್ದುಪಡಿಸಿ ಹಳೇ ಪದ್ಧತಿಯನ್ನು ಜಾರಿಗೆ ತರಬೇಕು. ಕಟ್ಟಡ ಕಾರ್ಮಿಕರಿಗೆ ಪಿಂಚಣಿ, ಮರಳು ಡಿಪೋ ತೆರೆಯಬೇಕು. ಮನೆ ನಿರ್ಮಾಣ ಮಾಡಿಕೊಡಬೇಕು. ಇಎಸ್ಐ ಸೌಲಭ್ಯ ಕಲ್ಪಿಸಬೇಕು. ಸಕಾಲದಲ್ಲಿ ಸಹಾಯಧನ, ಪಿಂಚಣಿ ಸಹಾಯಧನ, ಹೆರಿಗೆ ಸೌಲಭ್ಯ ಸೇರಿದಂತೆ ಮಂಡಳಿಯಿಂದ ನೀಡುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೆಚ್.ಜಿ.ಉಮೇಶ್, ಪಿ.ಕೆ.ಲಿಂಗರಾಜ್, ಐರಣಿ ಚಂದ್ರು, ಪಿ.ಷಣ್ಮುಖಸ್ವಾಮಿ, ಭಜನೆ ಹನುಮಂತಪ್ಪ, ವಿ.ಲಕ್ಷ್ಮಣ್, ಅಬ್ದುಲ್ ರೆಹಮಾನ್ ಸಾಬ್, ತಿಪ್ಪೇಸ್ವಾಮಿ, ಭೀಮಾರೆಡ್ಡಿ, ಹಾಲೇಶ್, ಸೈಯದ್ ಗೌಸ್ ಪೀರ್, ಸುರೇಶ್ ಯರಗುಂಟೆ, ನೇತ್ರವಾತಿ, ನಾಗಮ್ಮ, ಗಂಗಮ್ಮ, ರೇಣುಕಮ್ಮ, ಬಸಮ್ಮ, ಚಿಕ್ಕನಹಳ್ಳಿ ಆಂಜೆಪ್ಪ, ಹನುಮಂತಪ್ಪ ಆವರಗೆರೆ, ಗೋಶಾಲೆ ರಮೇಶ್, ಶ್ಯಾಗಲೆ ಲಕ್ಷ್ಮಣ್, ಚನ್ನಗಿರಿ ಗೌಸ್ಪೀರ್, ಹೊನ್ನಾಳಿ ಫಯಾಜ್, ಖುದ್ಧುರ್, ಅಣ್ಣಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








