ದಾವಣಗೆರೆ:
ಬಾಕಿ ವೇತನದ ಬಿಡುಗಡೆಗಾಗಿ ಒತ್ತಾಯಿಸಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರದ ಜಿಲ್ಲಾಸ್ಪತ್ರೆಯ ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರ ಹೋರಾಟಕ್ಕೆ ಕರ್ನಾಟಕ ಏಕತಾ ವೇದಿಕೆ ಬೆಂಬಲ ಸೂಚಿಸಿ, ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಎನ್.ಎಚ್.ಹಾಲೇಶ್, ಜಿಲ್ಲಾಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರು, ಪ್ರಯೋಗ ಶಾಲಾ ತಂತ್ರಜ್ಞರು ಕಳೆದ ಐದಾರು ತಿಂಗಳಿಂಬ ಬರಬೇಕಾಗಿರುವ ಬಾಕಿ ವೇತನಕ್ಕೆ ಒತ್ತಾಯಿಸಿ ಹೋರಾಟ ನಡೆಸಿದರೂ ಆಸ್ಪತ್ರೆಯ ಅಧೀೀಕ್ಷಕರು ಸ್ಪಂದಿಸದಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಪ ಸಂಭಾವನೆಯಲ್ಲಿಯೇ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರು, ಪ್ರಯೋಗ ಶಾಲಾ ತಂತ್ರಜ್ಞರು ಪ್ರಾಮಾಣಿಕವಾಗಿ ರೋಗಿಗಳ ಸೇವೆ, ಆರೈಕೆ ಮಾಡುತ್ತಿದ್ದು, ಇವರಿಗೆ ಕಳೆದ ಐದಾರು ತಿಂಗಳಿಂದ ಬಾಕಿ ವೇತನ ಬಂದಿಲ್ಲ. ಹೀಗಾದರೆ, ಇವರು ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಶುಶ್ರೂಷಕರು, ಪ್ರಯೋಗ ಶಾಲಾ ತಂತ್ರಜ್ಞರು ಪ್ರತಿಭಟನೆ ನಡೆಸುತ್ತಿರುವುದರಿಂದ ರೋಗಿಗಳ ಸಂಕಷ್ಟ ಹೆಚ್ಚಾಗುತ್ತಿದೆ. ಒಳ ರೋಗಿಗಳಂತೂ ಶುಶ್ರೂಷಕರ ಮುಷ್ಕರದಿಂದಾಗಿ ತೊಂದರೆಗೀಡಾಗಿದ್ದಾರೆ. ಆಕಸ್ಮಾತ್ ಯಾವುದೇ ರೋಗಿಗಳ ಪ್ರಾಣ ಹಾನಿಯಾದಲ್ಲಿ ಬಾಕಿ ವೇತನ ನೀಡದ ಏಜೆನ್ಸಿ ಹಾಗೂ ಆಸ್ಪತ್ರೆ ಅಧೀಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಬಾಕಿ ಉಳಿದಿರುವ 7 ತಿಂಗಳ ವೇತನ ನೀಡುವ ಜೊತೆಗೆ ಹೊರ ಗುತ್ತಿಗೆ ನೌಕರರಾದ ಶುಶ್ರೂಷಕರು, ಪ್ರಯೋಗ ಶಾಲಾ ತಂತ್ರಜ್ಞರನ್ನು ಸೇವೆಯಲ್ಲಿ ಮುಂದುವರಿಸಬೇಕು. ಸುಮಾರು ವರ್ಷಗಳಿಂದಲೂ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ಗುತ್ತಿಗೆ ನೌಕರರ ಸೇವೆಯನ್ನು ಕಾಯಂಗೊಳಿಸಿ, ಜೀವನ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಪ್ರಾಮಾಣಿಕವಾಗಿ ತಮ್ಮ ಕೆಲಸ ಮಾಡಿಕೊಂಡಿರುವ ಹೊರ ಗುತ್ತಿಗೆ ಆದಾರಿತ ಶುಶ್ರೂಷಕರು, ಪ್ರಯೋಗ ಶಾಲಾ ತಂತ್ರಜ್ಞರಿಗೆ ಆಯಾ ತಿಂಗಳಲ್ಲೇ ವೇತನವನ್ನು ಪಾವತಿ ಮಾಡಬೇಕು. ಸರ್ಕಾರ ಮತ್ತು ಹೊರ ಗುತ್ತಿಗೆ ನೌಕರರ ಮಧ್ಯೆ ಇರುವ ಗುತ್ತಿಗೆ ಏಜೆನ್ಸಿ ಹಿತ ಕಾಯುವುದನ್ನು ಬಿಟ್ಟು, ಅಧಿಕಾರಿಗಳು ಗುತ್ತಿಗೆ ನೌಕರರ ವೇತನ ಕೊಡಿಸಬೇಕು. ಗುತ್ತಿಗೆ ಪಡೆದ ಏಜೆನ್ಸಿ ವಿರುದ್ಧ ತನಿಖೆ ನಡೆಸಿ, ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.ಧರಣಿಯಲ್ಲಿ ವೇದಿಕೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಮಂಜುನಾಯ್ಕ, ಜಿಲ್ಲಾ ಗೌರವಾಧ್ಯಕ್ಷ ಚನ್ನಬಸಪ್ಪ, ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ, ಅನಿಲಕುಮಾರ, ಶಿವು, ಬೇತೂರು ಸುನಿಲ್. ಬೇತೂರು ಅಣ್ಣಪ್ಪ, ಪರಶುರಾಮ ಬೇತೂರು ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
