ಮಾದಕ ಷಡ್ಯಂತ್ರದಿಂದ ದೇಶ ಕುಗ್ಗಿಸುವ ಯತ್ನ

ದಾವಣಗೆರೆ

      ಯುದ್ಧದ ಮೂಲಕ ಭಾರತವನ್ನು ಸೋಲಿಸಲಾಗದ ಪಾಶ್ಚಿಮಾತ್ಯ ರಾಷ್ಟ್ರಗಳು, ಮಾದಕ ವಸ್ತು ಎಂಬ ಷಡ್ಯಂತ್ರದ ಮೂಲಕ ದೇಶವನ್ನು ಕುಗ್ಗಿಸುವ ಹುನ್ನಾರ ನಡೆಸಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕುಲಕರ್ಣಿ ಜಿ. ಅಂಬಾದಾಸ್ ಆತಂಕ ವ್ಯಕ್ತಪಡಿಸಿದರು.

       ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇವುಗಳ ಸಹಯೋಗದಲ್ಲಿ ಎನ್‍ಡಿಪಿಎಸ್ ಮತ್ತು ಎಂಎಂಆರ್‍ಡಿ, ಕೆಎಂಎಂಸಿಆರ್ ಕಾಯ್ದೆಗಳ ಕುರಿತು ಏರ್ಪಡಿಸಿದ್ದ ಒಂದು ದಿನದ ವಲಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ವಿಸ್ತರಣೆಯಲ್ಲಿ ಮೊದಲ ಹಾಗೂ ಜನಸಂಖ್ಯೆಯಲ್ಲಿ ಎರಡನೇ ದೇಶವಾಗಿರುವ ಭಾರತವನ್ನು ಹೇಗಾದರೂ ಮಾಡಿ ಕುಗ್ಗಿಸಬೇಕೆಂಬ ತಂತ್ರಗಾರಿಕೆ ನಡೆಯುತ್ತಿದೆ. ಆದರೆ, ಭಾರತವನ್ನು ಯುದ್ಧದ ಮೂಲಕ ಸೋಲಿಸಲಾಗದ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತಕ್ಕೆ ಹೆರಾಯಿನ್, ಕೋಕ್ ಸೇರಿದಂತೆ ಇತರೆ ಮಾದಕ ವಸ್ತುಗಳನ್ನು ಕಳ್ಳ ಸಾಗಾಣೆ ಮಾಡುವ ಮೂಲಕ ಕುಗ್ಗಿಸುವ ಹುನ್ನಾರ ನಡೆಸಿವೆ ಎಂದು ಆರೋಪಿಸಿದರು.

      1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡುವಾಗ ಬ್ರಿಟೀಷರು ಅಖಂಡ ಭಾರತವನ್ನು ಪಾಕಿಸ್ತಾನ ಹಾಗೂ ಭಾರತವನ್ನಾಗಿ ವಿಭಜಿಸುವ ಮೂಲಕ ದೇಶವನ್ನು ಹಾಳು ಮಾಡಿದ್ದರು. ಅಕಸ್ಮಾತ್ ಭಾರತ ವಿಭಜನೆ ಆಗದೇ ಹಾಗೆಯೇ ಉಳಿದಿದ್ದರೆ, ಇಂದು ನಮ್ಮನ್ನು ಮೀರಿಸಲು ಯಾರ ಕೈಯಿಂದಲೂ ಆಗುತ್ತಿರಲಿಲ್ಲ. ಬ್ರಿಟೀಷರ ಈ ನೀತಿಯನ್ನೇ ಮುಂದು ವರೆಸಿರುವ ಕೆಲ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದ ಯುವಕರನ್ನು ಮಾದಕ ವಸ್ತುಗಳ ದಾಸರನ್ನಾಗಿ ಮಾಡುವ ಮೂಲಕ ಭಾರತವನ್ನು ಬಗ್ಗು ಬಡಿಯಲು ಯತ್ನಿಸುತ್ತಿವೆ. ಹೀಗಾಗಿ ದೇಶದ ವಿದ್ಯಾರ್ಥಿ-ಯುವಜನರು ಜಾಗೃತರಾಗಿರಬೇಕೆಂದು ಕರೆ ನೀಡಿದರು.

       ಮಾದಕ ವಸ್ತುಗಳು ಸಮಾಜಕ್ಕೆ ಒಂದು ರೀತಿಯ ಕ್ಯಾನ್ಸರ್ ಹಾಗೂ ಟಿ.ಬಿ. ಇದ್ದಂತೆ. ಹಣದ ಆಸೆಗಾಗಿ ಸುಶಿಕ್ಷಿತರೇ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮಾಡುವ ಜಾಲಕ್ಕೆ ಬೆಂಬಲವಾಗಿ ನಿಂತಿರುವುದಕ್ಕೆ ಇತ್ತೀಚೆಗೆ ದಾವಣಗೆರೆಯಲ್ಲಿ ವೈದ್ಯ ವಿದ್ಯಾರ್ಥಿಳು ಗಾಂಜಾ ಸಮೇತ ಸಿಕ್ಕಿ ಬಿದ್ದಿರುವುದೇ ಸಾಕ್ಷಿಯಾಗಿದೆ. ಇನ್ನೂ ಗಾಂಜಾ ಬೆಳೆಯುವುದರಿಂದ ಸಮಾಜದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಗಾಂಜಾವನ್ನು ವಾಣಿಜ್ಯ ಬೆಳೆಯನ್ನಾಗಿ ಬೆಳೆಯುವ ರೈತರಿಗೆ ಮನವರಿಕೆ ಮಾಡಿಕೊಟ್ಟರೇ, ಗಾಂಜಾ ಬೆಳೆಗೆ ಕಡಿವಾಣ ಹಾಕಬಹುದಾಗಿದೆ ಎಂದರು.

       ಮರಳಿಗೆ ಚಿನ್ನಕ್ಕಿಂತಲೂ ಹೆಚ್ಚು ಬೆಲೆ ಬರಲು, ಮರಳು ಮಾಫಿಯಾವೇ ಕಾರಣವಾಗಿದೆ. ಹೀಗಾಗಿ ಮನೆ ಕಟ್ಟುವವರಿಗೂ ಪ್ರಸ್ತುತ ಸುಸೂತ್ರವಾಗಿ ಮರಳು ದೊರೆಯದಂತಾಗಿದೆ. ಹೀಗಾಗಿ ಈ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಬೇಕಾದ ಅವಶ್ಯಕತೆ ಇದೆ ಎಂದರು.
ರಾಜಕೀಯ ಸೇರಿದಂತೆ ಹಲವಾರು ಒತ್ತಡಗಳು ಪೊಲೀಸ್ – ಪ್ರಾಸಿಕ್ಯೂಷನ್ ಮೇಲೆ ಇರುತ್ತವೆ. ಹೀಗಾಗಿ ಈ ಒತ್ತಡಗಳ ಮಧ್ಯೆಯೂ ಪ್ರಾಮಾಣಿಕವಾಗಿ ಕೆಲಸ ಮಾಡುವ ಜವಾಬ್ದಾರಿ ಈ ಎರಡೂ ಇಲಾಖೆಗಳ ಮೇಲಿದೆ.

        ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರು ಹಾಗೂ ತನಿಖೆ ನಡೆಸಬೇಕಾದರೆ, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರನ್ನು ಸಾಕ್ಷಿದಾರರನ್ನಾಗಿ ಪರಿಗಣಿಸಿದರೇ, ಪ್ರಕರಣಗಳು ನ್ಯಾಯಾಲಯಗಳಲ್ಲಿ ಗಟ್ಟಿಯಾಗಿ ನಿಲ್ಲಲಿವೆ. ಹೀಗಾಗಿ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಹೇಳಿದರು. 

       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಮಾತನಾಡಿ, ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆ ಪರಸ್ಪರ ಕೈ ಜೋಡಿಸಿದಾಗ ಮಾತ್ರ ಅಪರಾಧಿಗಳಿಗೆ ಶಿಕ್ಷೆ ಆಗಲು ಸಾಧ್ಯವಾಗಲಿದೆ. ತನಿಖೆಯ ಜೊತೆಗೆ ಸರಿಯಾದ ವಾದ ಮಂಡನೆಯ ಅಗತ್ಯವೂ ಸಹ ಇದೆ ಎಂದರು.

      ಕಳೆದ 10-15 ವರ್ಷಗಳಿಂದ ಶಿಕ್ಷೆಯಾಗುವ ಪ್ರಮಾಣ ಶೇ.3ರಿಂದ 5ರಷ್ಟು ಮಾತ್ರ ಇದೆ. ಇದಕ್ಕೆ ದೂರು ನೀಡಿದವರು ಹಾಗೂ ಸಾಕ್ಷಿಗಳು ತಿರುಗಿ ಬೀಳುವುದು ಪ್ರಮುಖ ಕಾರಣವಾಗಿದೆ ಎಂದ ಅವರು, ಮಾದಕ ವಸ್ತುಗಳು ಕೇವಲ ಸೇವಿಸುವವರ ಮೇಲಷ್ಟೇ ಅಲ್ಲದೇ, ಸಮಾಜದ ಮೇಲೂ ಪರಿಣಾಮ ಬೀರಲಿವೆ. ಈ ವರ್ಷದ ಮೊದಲ ಎರಡು ತಿಂಗಳಲ್ಲೇ ದಾವಣಗೆರೆಯಲ್ಲೇ 7ರಿಂದ 8 ಪ್ರಕರಣಗಳು ಪತ್ತೆಯಾಗಿದ್ದು, ಇದರ ಹಿಂದಿನ ಜಾಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಾದಕ ದಂಧೆಯಲ್ಲಿ ತೊಡಗಿರುವವರು ಸಿಕ್ಕಿಬಿದ್ದಾಗ ಅವರ ಬಗ್ಗೆ ಯಾವುದೇ ಅನುಕಂಪ ತೋರಬಾರದು ಎಂದು ಹೇಳಿದರು.

       ಅಧ್ಯಕ್ಷೀಯ ನುಡಿಗಳನ್ನಾಡಿದ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯ ಇಲಾಖೆಗಳ ನಿರ್ದೇಶಕ ಜಿ.ಹೆಚ್.ಅಮೃತ್ ಕುಮಾರ್, ಅಭಿಯೋಜಕರಿಗೆ ಎಲ್ಲಾ ಇಲಾಖೆಯವರು ಬರುತ್ತಾರೆ. ಸ್ವಸ್ಥ ನಾಗರಿಕ ಸಮಾಜಕ್ಕೆ ಪ್ರಾಸಿಕ್ಯೂಷನ್ ಅತ್ಯಗತ್ಯವಾಗಿದೆ. ಶಿಕ್ಷಣದ ನಂತರ ಪ್ರಾಸಿಕ್ಯೂಷನ್ ಅತ್ಯಂತ ಪವಿತ್ರವಾದ ವೃತ್ತಿ. ಈ ವೃತ್ತಿಯಲ್ಲಿ ಇರುವುದಕ್ಕೆ ಧನ್ಯತಾ ಭಾವ ಇರಬೇಕು. ನ್ಯಾಯಮೂರ್ತಿಗಳ ಚಿಂತನಾಶೈಲಿಯನ್ನು ಪ್ರಾಸಿಕ್ಯೂಟರ್‍ಗಳು ಅರ್ಥ ಮಾಡಿಕೊಂಡು, ಅದೇರೀತಿಯಲ್ಲಿ ವಾದ ಮಂಡಿಸಿದರೆ, ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಸಾಧ್ಯವಾಗಲಿದೆ ಎಂದರು.

       ಅಪರಾಧ ತಡೆಗೆ ಪೊಲೀಸರ ಅಗತ್ಯ ಹೆಚ್ಚಾಗಿದೆ ಎಂದರೆ, ಸಮಾಜದಲ್ಲಿ ನೈತಿಕತೆ ಕುಸಿದಿದೆ ಎಂದೇ ಅರ್ಥ. ಕುಟುಂಬ ಹಾಗೂ ಸಮಾಜದಿಂದ ನಿರ್ಲಕ್ಷ್ಯಕ್ಕೆ ಗುರಿಯಾದವರು ಅಪರಾಧಿಗಳಾಗುತ್ತಾರೆ. ಭವಿಷ್ಯದ ನಾಗರಿಕರನ್ನು ರೂಪಿಸಲು ನೈತಿಕ ಶಿಕ್ಷಣದ ಅಗತ್ಯವಿದೆ. ಪ್ರಾಸಿಕ್ಯೂಷನ್ ಹಾಗೂ ಪೊಲೀಸರು ಸಮನ್ವಯತೆಯಿಂದ ಕೆಲಸ ಮಾಡದೇ ಹೋದರೆ ಅದರ ಲಾಭವನ್ನು ಅಪರಾಧಿಗಳು ಪಡೆಯುತ್ತಾರೆ. ಹೀಗಾಗಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.

        ಪ್ರಾಸ್ತಾವಿಕ ಮಾತನಾಡಿದ ಸರ್ಕಾರಿ ಅಭಿಯೋಕಜ ಎಸ್.ವಿ.ಪಾಟೀಲ್, ಗಿಡಕ್ಕೆ ನೀರು ಎರೆದು, ಗೊಬ್ಬರ ಹಾಕಿ ಬೆಳೆಸಿದರೆ, ಅದು ಮುಂದೆ ಫಲ ನೀಡುತ್ತದೆ. ಅದೇರೀತಿ ಕಾನೂನು ಜ್ಞಾನವನ್ನು ಪೊಲೀಸರು ಹಾಗೂ ಪ್ರಾಸಿಕ್ಯೂಷನ್ ಇಂತಹ ಕಾರ್ಯಾಗಾರಗಳ ಮೂಲಕ ಪಡೆಯುತ್ತಾ ಹೋದರೆ, ಮುಂದೊಂದು ದಿನ ಇವರಿಂದ ಸಮಾಜಕ್ಕೆ ಉತ್ತಮ ಕೊಡುಗಡೆ ದೊರೆಯಲಿದೆ ಎಂದರು.

        ಪ್ರಾಸಿಕ್ಯೂಷನ್ ಹಾಗೂ ನ್ಯಾಯಮೂರ್ತಿಗಳ ಮೇಲೆ ಒತ್ತಡ ಹೆಚ್ಚಾಗಿರುತ್ತದೆ. ಹೀಗಾಗಿ ಒತ್ತಡವನ್ನು ನಿರ್ವಹಿಸುವ ಕಲೆಯನ್ನು ಮೈಗೂಡಿಸಿಕೊಳ್ಳುವ ಅನಿವಾರ್ಯತೆ ಇದೆ. ವಕೀಲರು ಕಕ್ಷಿದಾರರ ಪರವಾಗಿ ಕೆಲಸ ಮಾಡಬೇಕಾಗುತ್ತದೆ. ಆದರೆ, ಪಬ್ಲಿಕ್ ಪ್ರಾಸಿಕ್ಯೂಷನ್ ನ್ಯಾಯದ ಪರ ಕೆಲಸ ಮಾಡುವ ಇಲಾಖೆ. ಹೀಗಾಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದು ಪುಣ್ಯದ ಕೆಲಸವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆ ಆಯುಕ್ತ ನಾಗರಾಜಪ್ಪ, ಹಿರಿಯ ಭೂವಿಜ್ಞಾನಿ ಕೋದಂಡರಾಮ, 2ನೇ ಹೆಚ್ಚುವರಿ ಸತ್ರ ನ್ಯಾಯಾಧೀಶರಾದ ಶ್ರೀಮತಿ ನಾಗಶ್ರೀ, ಹಿರಿಯ ಸಿವಿಲ್ ನ್ಯಾಯಾಧೀಶ ಸಾಬಪ್ಪ ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಕಾನೂನು ಅಧಿಕಾರಿ ಕೆ.ಜಿ.ಕಲ್ಪನಾ ಸ್ವಾಗತಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link