ಹರಿಹರ:
ನೀರು ಮನುಕುಲಕ್ಕೆ ಅತ್ಯಗತ್ಯವಾದ ಹಾಗೂ ಅಪರೂಪದ ಸಂಪನ್ಮೂಲವಾಗಿದೆ ಎಂದು ಇಲ್ಲಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅವಿನಾಶ್ ಚಿಂದು ಹೆಚ್. ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಬಾಯಾರಿಕೆ ಮತ್ತು ಆರೋಗ್ಯ ರಕ್ಷಿಸುವುದಕ್ಕಿಂತಲೂ ನೀರಿಗೆ ಹೆಚ್ಚಿನ ಮಹತ್ವವಿದೆ, ನೀರಿದ್ದರೆ ಮಾತ್ರ ಜೀವಸಂಕುಲ ಉಳಿಯಲು ಸಾಧ್ಯ ಎಂದರು.
ಪರಿಸರ ನಾಶದಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಭೂಮಿಯ ಮೇಲಿನ ಹಿಮ ಕರಗುತ್ತಿದೆ, ಕಾಂಕ್ರೀಟ್ ಕಾಡಿನಿಂದ ಮಳೆ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ನದಿ ಸರೋವರಗಳನ್ನು ಮನಸೋ ಇಚ್ಚೆ ಕಲುಷಿತಗೊಳಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಶುದ್ದ ನೀರಿನ ತೀವ್ರ ಕೊರತೆ ಎದುರಾಗುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ಜಲಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವಕೀಲರಾದ ಜಿ.ಹೆಚ್.ಭಾಗೀರಥಿ, ಭೂಖಂಡದ ಶೇ.98ರಷ್ಟು ನೀರು ಸಮುದ್ರದಲ್ಲಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ನೀರಿನ ಅಸಮರ್ಪಕ ನಿರ್ವಹಣೆ, ಅಪವ್ಯಯ, ಜಲಮಾಲಿನ್ಯ ಹಾಗೂ ಜನಸಂಖ್ಯೆ ಹೆಚ್ಚಳದಿಂದ ಜಾಗತಿಕವಾಗಿ ನೀರಿನ ಕೊರತೆ ಹೆಚ್ಚುತ್ತಿದೆ. ಜಲ ಮೂಲಗಳಾದ ನದಿ, ಸರೋವರ, ಅಂತರ್ಜಲ, ಕರೆ-ಕಟ್ಟೆ, ಹಳ್ಳ-ಕೊಳ್ಳ, ಬಾವಿ-ತೊರೆ ಮುಂತಾದವುಗಳನ್ನು ಸಂರಕ್ಷಣೆ ಮಾಡಬೇಕಿದೆ ಎಂದರು.
ಎಪಿಪಿ ಶಂಶೀರ್ ಅಲೀಖಾನ್ ಮಾತನಾಡಿ, ನೀರು ಉಳಿಸುವ ಬಗ್ಗೆ ಈಗಲೆ ಜಾಗೃತರಾಗದಿದ್ದರೆ, ಭವಿಷ್ಯದಲ್ಲಿ ಪರಿಸ್ತಿತಿ ಇನ್ನಷ್ಟು ಬಿಗಡಾಯಿಸುತ್ತದೆ. ನೀರನ್ನು ಮನಸೋ ಇಚ್ಚೆ ಬಳಸಿ ಪೋಲು ಮಾಡಬಾರದು ಎಂದರು. ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಹಲವಾಗಲು ಮಾತನಾಡಿ, ನಮ್ಮ ಇಡೀ ಭೂಮಿ ನೀರಿನಿಂದ ಆವೃತವಾಗಿದ್ದರೂ ಸುಮಾರು 800 ದಶಲಕ್ಷದಷ್ಟು ಜನರಿಗೆ ಶುದ್ದ ಕುಡಿಯುವ ನೀರು ಸಿಗುತ್ತಿಲ್ಲ. ಕೃಷಿ ಕ್ಷೇತ್ರವೂ ನೀರಿಲ್ಲದೆ ಸಮಸ್ಯೆ ಎದುರಿಸುತ್ತಿದೆ. ಎಲ್ಲಾ ಜನರಿಗೆ ಶುದ್ದ ಕುಡಿಯುವ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಬಸವರಾಜ್ ಸಿ. ತಹಶೀಲ್ದಾರ್ ಮಾತನಾಡಿ, ಪ್ರಾಕೃತಿಕ ಅಸಮತೋಲನ ಕಾಪಾಡುವ ದೃಷ್ಟಿಯಿಂದ ಹಾಗೂ ಮಳೆ ಬರುವಂತೆ ಮಾಡಲು ಸಾಧ್ಯವಾದಷ್ಟು ಗಿಡಮರಗಳನ್ನು ಬೆಳೆಸಬೇಕು. ಕಾಡನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ನಿರ್ವಹಿಸಬೇಕು ಎಂದರು.
ವಕೀಲರಾದ ನಾಗರಾಜ್ ಬಿ ಮಾತನಾಡಿ, ವಿದ್ಯಾರ್ಥಿಗಳು ನೀರಿನ ಮಿತ ಬಳಕೆ ಹಾಗೂ ಅಂತರ್ಜಲ ಹೆಚ್ಚಿಸುವ ಬಗ್ಗೆ ನೆರೆಹೊರೆಯವರಲ್ಲಿ ಅರಿವು, ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.ಪ್ರಾಧ್ಯಾಪಕರಾದ ಹನುಮಂತಪ್ಪ, ಬಿ.ಕೆ.ಮಂಜುನಾಥ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು