ದಾವಣಗೆರೆ:
ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವ ನೀರು, ಗಾಳಿ ಹಾಗೂ ಮಣ್ಣು ವಿಷಕಾರಿಯಾಗದಂತೆ ತಡೆಗಟ್ಟಬೇಕಾದ ಅವಶ್ಯಕತೆ ಇದೆ ಎಂದು ಅರಣ್ಯ, ಪರಿಸರ ಹಾಗೂ ವಿಜ್ಞಾನ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಗೋಗಿ ತಿಳಿಸಿದರು.
ನಗರದ ಬಿಐಇಟಿ ಕಾಲೇಜಿನ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದಿಂದ ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೀರು, ಗಾಳಿ, ಮಣ್ಣು ಮನುಷ್ಯನ ಬದುಕಿಗೆ ಅತ್ಯಗತ್ಯವಾಗಿ ಬೇಕಾಗಿವೆ. ಹೀಗಾಗಿ ಇವುಗಳು ವಿಷಕಾರಿಯಾಗದಂತೆ ತಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂಶೋಧನೆ, ಅನ್ವೇಷಣೆಗೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.ಅತೀಯಾದ ರಾಸಾಯನಿಕ ಬಳಕೆಯಿಂದ ನೀರು, ಗಾಳಿ, ಮಣ್ಣು ವಿಷಕಾರಕವಾಗಿ ಪರಿವರ್ತನೆಯಾಗುತ್ತಿವೆ. ಅಲ್ಲದೇ, ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿವೆ. ಹೀಗಾಗಿ ರಾಸಾಯನಿಕಗಳಿಂದ ಮುಕ್ತ ಪರಿಸರ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕೆಂದು ಸಲಹೆ ನೀಡಿದರು.
ನಿಸರ್ಗದಲ್ಲಿ ನಮಗೆ ನೀರು ಬೇರೆ, ಬೇರೆ ರೂಪದಲ್ಲಿ ಸಿಗುತ್ತದೆ. ಈ ಜಲ ಸಂಪನ್ಮೂಲವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದ ಅವರು, ಬೆಂಗಳೂರಿನ ವೃಷಭಾವತಿ ನದಿಯ ನೀರು ಕಲುಷಿತವಾಗಿ, ಸುತ್ತಮುತ್ತಲಿನ ಪ್ರದೇಶಗಳು ಸಹ ಮಾಲೀನ್ಯಕ್ಕೆ ಕಾರಣವಾಗಿವೆ. ಪ್ರಜ್ಞಾವಂತರು ಇರುವ ಬೆಂಗಳೂರಿನಲ್ಲೇ ಈ ರೀತಿಯ ವಾತಾವರಣ ಇರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ ಎಂದರು.
ಸಿಂಗಪೂರ್ ದೇಶದಲ್ಲಿ ನೀರಿನ ಕೊರತೆ ಇರುವ ಕಾರಣಗಳಿಂದ ಆ ದೇಶವು ವಿದೇಶಗಳಿಂದ ಕೊಳಚೆ ನೀರು ಆಮದು ಮಾಡಿಕೊಂಡು, ಆ ನೀರನ್ನೇ ಸಂಷ್ಕರಿಸಿ, ಶುದ್ಧೀಕರಿಸಿ ಉಪಯೋಗಿಸುತ್ತಾರೆ. ಆದರೆ, ನಮ್ಮಲ್ಲಿ ಇರುವ ನೀರನ್ನು ಮನುಷ್ಯರು ಮಲೀನ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕಾದ ಅಶವ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಡಾ.ಹೆಚ್.ಬಿ.ಅರವಿಂದ್ ಮಾತನಾಡಿ, ಭೂಮಿಯಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿ, ಸಾವಿರ ಅಡಿಯ ವರೆಗೂ ಹೋದರೂ ಸಹ ಅಂತರ್ಜಲ ಸಿಗುತ್ತಿಲ್ಲ. ಹೀಗಾಗಿ ಎಲ್ಲರೂ ನೀರನ್ನು ಮಿತವಾಗಿ ಬಳಸುವ ಮೂಲಕ ಜಲ ಸಂರಕ್ಷಣೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಎಂ.ಸಿ.ನಟರಾಜ್ ಮಾತನಾಡಿ, ಹಿಂದೆ ಜ್ಞಾನ ಆಧಾರಿತ ಶಿಕ್ಷಣ ಸಿಗುತಿತ್ತು. ಆದರೆ, ಇಂದು ಕೌಶಲಾಧಾರಿತ ಶಿಕ್ಷಣ ಸಿಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಬಿಐಇಟಿ ನಿರ್ದೇಶಕ ಪ್ರೊ.ವೈ.ವೃಷಬೇಂದ್ರಪ್ಪ, ರಾಕೇಶ್ ಖನ್ನಾ, ಪ್ರವೀಣ್‍ಕುಮಾರ್, ಯಶವಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ