ತುಮಕೂರು
ಹಸಿವು. ಅವಮಾನ, ಅಸ್ಪೃಶ್ಯತೆ ಮುಕ್ತ ಭಾರತ ನಿರ್ಮಾಣಕ್ಕಾಗಿ ಕರ್ನಾಟಕ ರಿಪಬ್ಲಿಕ್ ಸೇನೆ ವತಿಯಿಂದ 2019ರ ಲೋಕಸಭಾ ಚುನಾವಣೆಗೆ ರಾಜ್ಯದ 10 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತಿದೆ ಎಂದು ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ತಿಳಿಸಿದರು.
ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಮೊಮ್ಮಗ ಆನಂದ ರಾಜ್ ಅಂಬೇಡ್ಕರ್ ಸ್ಥಾಪಿತ ಈ ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ದೇಶದ ಅಭಿವೃದ್ದಿ, ಸಾಮರಸ್ಯ, ಗಡಿ, ಭಾಷೆ ಮುಂತಾದ ವಿಚಾರಗಳ ಬಗ್ಗೆ ಇಂದು ಚರ್ಚೆಯಾಗಬೇಕಿತ್ತು. ಆದರೆ ಪ್ರಮುಖ ಪಕ್ಷಗಳ ನಾಯಕರು ಪ್ರಸ್ತುತ ಚರ್ಚಿಸುತ್ತಿರುವ ವಿಷಯ ನೋಡಿದರೆ ಖೇದಕರ ಸಂಗತಿ ಎಂದು ವಿಷಾಧ ವ್ಯಕ್ತಪಡಿಸಿದರು.
ಅಸ್ಪೃಶ್ಯತೆಯಂತಹ ಕ್ರೂರ ವ್ಯವಸ್ಥೆ ಜಗತ್ತಿನ ಯಾವುದೇ ದೇಶದಲ್ಲಿಲ್ಲ. ಆದರೆ ಭಾರತದಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ಇಂತಹ ಅಸ್ಪೃಶ್ಯತೆಯನ್ನು ತೊಡೆದು ಹಾಕುವುದಕ್ಕೆ ಶ್ರಮಿಸಿದ ನಮ್ಮ ಹಿರಿಯರ ಚರಿತ್ರೆಯನ್ನು ನಾವು ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದರು.
ರಾಜ್ಯದ 10 ಲೋಕಸಭಾ ಕ್ಷೇತ್ರಗಳಲ್ಲಿ ಕರ್ನಾಟಕ ರಿಪಬ್ಲಿಕ್ ಸೇನೆ ವತಿಯಿಂದ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದು, ಪ್ರಸ್ತುತ ತುಮಕೂರಿನಿಂದ ಸುಲ್ತಾನ್ ಶರೀಫ್, ಬೆಂಗಳೂರು ದಕ್ಷಿಣದಿಂದ ತ್ಯಾಗರಾಜ್, ಕೋಲಾರದಿಂದ ಚಿಕ್ಕನಾರಾಯಣ, ಚಿಕ್ಕಬಳ್ಳಾಪುರದಿಂದ ಡಿ.ಮುನಿರಾಜು ಅವರು ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ 28 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಬಹುದಿತ್ತು. ಆದರೆ ಸಧ್ಯಕ್ಕೆ 10 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ. ಈ 10 ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಮುಸಲ್ಮಾನ ಅಭ್ಯರ್ಥಿಗಳು, ಇತರೆ ಕ್ಷೇತ್ರಗಳಲ್ಲಿ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂದು ನುಡಿದರು.
ರಾಜ್ಯದಲ್ಲಿರುವ ಜೆಡಿಎಸ್ ಪಕ್ಷ ಸೆಕ್ಯುಲರ್ ಪಾರ್ಟಿ ಎಂದು ಹೇಳಿಕೊಳ್ಳುತ್ತಿದೆ. ಆದರೆ ಈ ಚುನಾವಣೆಯಲ್ಲಿ ಯಾವ ಮುಸಲ್ಮಾನರಿಗೂ ಟಿಕೇಟ್ ನೀಡಿಲ್ಲ, ಪ್ರಮುಖ ಪಕ್ಷಗಳು ಹಣಬಲ, ಜಾತಿಬಲ ಇರುವಂತಹವರನ್ನೇ ಆಯ್ಕೆ ಮಾಡಿ ಕಣಕ್ಕಿಳಿಸುತ್ತಿದ್ದಾರೆ. ಹಣಬಲ, ಜಾತಿ ಬಲ ಇಲ್ಲದವರ ಗತಿಏನು ಎಂದು ಪ್ರಶ್ನಿಸಿದರು.ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತದಾರರು ಸಕ್ರಿಯವಾಗಿ ಪಾಲ್ಗೊಂಡು ಅರ್ಹ ಅಭ್ಯರ್ಥಿಗಳಿಗೆ ಮತ ಹಾಕಿ ಅರ್ಹರನ್ನು ಲೋಕಸಭೆಗೆ ಕಳುಹಿಸಿ ಎಂದು ಕರೆ ನೀಡಿದರು.
ಮಂಡ್ಯ ಲೋಕಸಭಾ ಚುನಾವಣೆ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಗಣಿ ಶಂಕರ್, ಅಂಬರೀಶ್ ಅವರು ಆರಿಸಿ ಬರುವ ಕೇತ್ರವದು, ಅವರ ಕುಟುಂಬದವರು ಚುನಾವಣೆಗೆ ಆಯ್ಕೆ ಬಯಸುವುದು ತಪ್ಪಲ್ಲ, ಆದರೆ ಸುಮಲತಾ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ಅವರ ಬೆಂಬಲಿಗರಿಗೆ ಬೆದರಿಕೆ ಹಾಕುವಂತಹ ಕೆಲಸ ಮಾಡಬಾರದು ಪ್ರಜಾ ಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ. ಆ ಹಕ್ಕನ್ನು ದಮನ ಮಾಡಲು ಯತ್ನಿಸಬಾರದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತುಮಕೂರು, ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಬಿ.ಫಾರಂನ್ನು ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ವಿತರಿಸಿದರು.ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಿಪಬ್ಲಿಕ್ ಸೇನೆ ಜಿಲ್ಲಾಧ್ಯಕ್ಷ ಅಯೂಬ್ ಶರೀಫ್, ವಿವಿಧ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಚಿಕ್ಕನಾರಾಯಣ್, ಸುಲ್ತಾನ್ ಶರೀಫ್, ತ್ಯಾಗರಾಜ್, ಡಿ.ಮುನಿರಾಜು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
