ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಕ್ರಿಯಾಶೀಲ ಕಾರ್ಯಕ್ಕೆ ಮತದಾರರ ಮೆಚ್ಚುಗೆ

ಚಳ್ಳಕೆರೆ

      ಕಳೆದ ಐದು ವರ್ಷಗಳ ಬಿಜೆಪಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಎನ್‍ಡಿಎ ಸರ್ಕಾರ ತನ್ನದೇಯಾದ ಉತ್ತಮ ಆಡಳಿತದ ಮೂಲಕ ದೇಶದ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಧಾನ ಮಂತ್ರಿ ನರೇಂದ್ರಮೋದಿ ಕೇವಲ ಅಧಿಕಾರದಾಸೆಗಾಗಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಉದ್ದೇಶವಿಲ್ಲ.

      ಆದರೆ, ಈ ರಾಷ್ಟ್ರದ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಇಂತಹ ಸಮರ್ಥ ಪ್ರಧಾನಿ ನಮಗೆ ಬೇಕು ಎಂಬ ಸಾರ್ವಜನಿಕರ ಅಭಿಪ್ರಾಯ ಹಿನ್ನೆಲೆಯಲ್ಲಿ ಮೋದಿ ಮತ್ತೊಮ್ಮೆ ಅಭಿಯಾನವನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ ಎಂದು ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಹಾಗೂ ರಾಜ್ಯ ಬಿಜೆಪಿ ಮಹಿಳಾ ಘಟಕದ ಸಂಚಾಲಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.

      ಅವರು, ಶನಿವಾರ ತಾಲ್ಲೂಕಿನ ಗೋಪನಹಳ್ಳಿ, ಹೊಟ್ಟೆಪ್ಪನಹಳ್ಳಿ, ಸಿದ್ದಾಪುರ ಹಾಗೂ ದೊಡ್ಡೇರಿ ಗ್ರಾಮಗಳಿಗೆ ಭೇಟಿ ನೀಡಿ ಏ.18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಸಮರ್ಥ ಆಡಳಿತಗಾರ ಎ.ನಾರಾಯಣಸ್ವಾಮಿ ಅವರಿಗೆ ಮತ ನೀಡಬೇಕೆಂದು ಅವರು ಮನವಿ ಮಾಡಿದರು.

      ರಾಜ್ಯದಲ್ಲಿ ಈಗಾಗಲೇ ಲೋಕಸಭಾ ಚುನಾವಣೆಯ ಮತಯಾಚನೆ ಕಾರ್ಯ ಪ್ರಾರಂಭವಾಗಿದ್ದು, ಭಾರತೀಯ ಜನತಾ ಪಕ್ಷಕ್ಕೆ ಸೋಲಿನ ರುಚಿತೋರಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮೈತ್ರಿ ಅಭ್ಯರ್ಥಿಗಳ ಮೂಲಕ ಚುನಾವಣೆ ಎದುರಿಸುತ್ತಿದ್ದಾರೆ. ಆದರೆ, ಮತದಾರರಲ್ಲಿ ಮಾತ್ರ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡುವ ನಿರ್ಧಾರ ಅಚಲವಾಗಿದೆ.

        ಮತದಾರರು ಯಾವುದೇ ರೀತಿಯ ಅಪಪ್ರಚಾರಗಳಿಗೆ ಕಿವಿಗೊಡದೆ ದೇಶದ ಹಿತದೃಷ್ಠಿಯಿಂದ ದೇಶದ ಭವಿಷ್ಯವನ್ನು ರಕ್ಷಿಸಲು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

       ಬಿಜೆಪಿ ಯುವ ಮುಖಂಡ, ನಿವೃತ್ತ ಅಧಿಕಾರಿ ಎಂ.ಎಸ್.ಜಯರಾಮ್ ಮಾತನಾಡಿ, ಕಳೆದ ಐದು ವರ್ಷಗಳ ಪ್ರಧಾನ ಮಂತ್ರಿಗಳ ನರೇಂದ್ರಮೋದಿಯವರ ಆಡಳಿತದ ಬಗ್ಗೆ ಜನತೆ ಹೆಚ್ಚು ಅರಿತಿದ್ದು, ಈ ದೇಶವನ್ನು ಎಲ್ಲಾ ರೀತಿಯ ಸಂಕಷ್ಟಗಳಿಂದ ಪಾರು ಮಾಡಲು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ. ವಿಶೇಷವಾಗಿ ದೇಶವನ್ನು ಉತ್ತಮ ಸ್ಥಿತಿಯಲ್ಲಿ ತೆಗೆದುಕೊಂಡು ಹೋಗುವಂತಹ ಎಲ್ಲಾ ರೀತಿಯ ಕ್ರಿಯಾಶೀಲತೆಗಳು ಮೋದಿಯವರಲ್ಲಿ ಮಾತ್ರ ನಾವು ಕಾಣಬಹುದಾಗಿದೆ.

       ಈ ಹಿಂದೆ ದಿವಂಗತ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸಹ ತಮ್ಮ ಆಡಳಿತ ಕಾಲದಲ್ಲಿ ವಿಶ್ವವೇ ಮೆಚ್ಚುವ ನಾಯಕನಾಗಿ ಹೊರಹೊಮ್ಮಿದ್ದರು. ಅದೇ ರೀತಿ ಮೋದಿಯವರು ಸಹ ಅದೇ ಹಾದಿಯಲ್ಲಿದ್ದಾರೆಂದರು. ಬಿಜೆಪಿ ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಮಾತನಾಡಿ, ಭಾರತೀಯ ಜನತಾ ಪಕ್ಷದ ಎಲ್ಲಾ ಮುಖಂಡರು ದಕ್ಷ ಆಡಳಿತಗಾರರಾಗಿದ್ದು, ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಹೊಂದಿದವರಾಗಿದ್ದಾರೆ.

        ವಿಶೇಷವಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಮ್ಮ ಎಂಟು ತಿಂಗಳ ಅವಧಿಯಲ್ಲೇ ಹಿರಿಯೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ.

        ದಯಮಾಡಿ ಎಲ್ಲಾ ಮತದಾರರು ಪಕ್ಷದ ಅಭ್ಯರ್ಥಿ ಎ.ನಾರಾಯಣಸ್ವಾಮಿಯವರನ್ನು ಬೆಂಬಲಿಸಬೇಕೆಂದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ನವೀನ್, ಮಾಜಿ ಸದಸ್ಯ ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ, ಸಂಚಾಲಕ ಟಿ.ಬೋರನಾಯಕ, ತಾಲ್ಲೂಕು ಉಪಾಧ್ಯಕ್ಷ ಹೊಟೆಪ್ಪನಹಳ್ಳಿ ಮಂಜುನಾಥ, ಜೆ.ಕೆ.ವೀರಣ್ಣ, ಎಸ್.ಯಲ್ಲಪ್ಪ, ಎ.ವಿಜಯೇಂದ್ರ, ಎ.ಮಂಜುನಾಥ, ಕೇಶವರೆಡ್ಡಿ, ಮಂಜುನಾಥರೆಡ್ಡಿ, ಒಬಿಸಿ ಕಾರ್ಯದರ್ಶಿ ವೀರೇಶ್, ಹೊಟ್ಟೆಪ್ಪನಹಳ್ಳಿ ಕಾಂತರಾಜು, ಹಟ್ಟಿರುದ್ರಪ್ಪ, ಬಡಕ್ಕ, ಸಂತೋಷ್, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link