ಜಿ.ಪಂ.ಅಧ್ಯಕ್ಷರಾಗಿ ವಿಶಾಲಾಕ್ಷಿ ನಟರಾಜ್ ಆಯ್ಕೆ

ಚಿತ್ರದುರ್ಗ

     ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಾಗೂರು ಕ್ಷೇತ್ರದ ಕಾಂಗ್ರೇಸ್ ಸದಸ್ಯೆ ವಿಶಾಲಾಕ್ಷಿ ನಟರಾಜ್ ಅವಿರೋಧವಾಗಿ ಆಯ್ಕೆ ಅಗಿದ್ದಾರೆ.

      ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಜಿ.ಪಂ.ಅಧ್ಯಕ್ಷ ಸ್ಥಾನಕ್ಕೆ ಮೊದಲ 23 ತಿಂಗಳ ಕಾಲ ದೊಡ್ಡಸಿದ್ದವ್ವನ ಹಳ್ಳಿ ಕ್ಷೇತ್ರದ ಕಾಂಗ್ರೇಸ್ ಸದಸ್ಯೆ ಸೌಭಾಗ್ಯಬಸವರಾಜನ್ ನೇಮಕಗೊಂಡಿದ್ದರು. ಆದರೆ ನಂತರದ ಬೆಳವಣಿಗೆಯಲ್ಲಿ ಕಾಂಗ್ರೇಸ್ ಸದಸ್ಯರುಗಳು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಜೊತೆಗೂಡಿ ಅವಿಶ್ವಾಸ ಗೊತ್ತುವಳಿ ಮಂಡಿಸಿಸೌಭಾಗ್ಯ ಅವರನ್ನು ಅಧ್ಯಕ್ಷೆ ಸ್ಥಾನದಿಂದ ಪದಚ್ಯುತಿ ಗೊಳಿಸಿದ್ದರು.

       ತೆರುವಾಗಿದ್ದ ಅಧ್ಯಕ್ಷೆ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗುತ್ತು. ಬೆಳಗ್ಗೆ 8 ಗಂಟೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಜಾಜೂರು ಕ್ಷೇತ್ರದ ಚಂದ್ರಿಕಾ, ದೊಡ್ಡಸಿದ್ದವ್ವನಹಳ್ಳಿ ಕ್ಷೇತ್ರದ ಸೌಭಾಗ್ಯ, ಐಮಂಗಲ ಕ್ಷೇತ್ರದ ಬಿಜೆಪಿ ಸದಸ್ಯೆ ರಾಜೇಶ್ವರಿ, ಬಾಗೂರು ಕ್ಷೇತ್ರದ ವಿಶಾಲಾಕ್ಷಿ ನಟರಾಜ್ ನಾಮಪತ್ರ ಸಲ್ಲಿಸಿದ್ದರು.

        ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಎಲ್ಲ 37 ಜಿ.ಪಂ. ಸದಸ್ಯರುಗಳು ಹಾಜರಿದ್ದರು. ಚುನಾವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಅವರು, ನಾಮಪತ್ರಗಳನ್ನು ಪರಿಶೀಲಿಸಿ, ಎಲ್ಲ 4 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಅಂಗೀಕರಿಸಲಾಗಿದೆ ಎಂದು ಘೋಷಿಸಿದರು. ಬಳಿಕ ನಾಮಪತ್ರ ಹಿಂಪಡೆಯಲು 10 ನಿಮಿಷಗಳ ಕಾಲಾವಧಿ ನೀಡಲಾಯಿತು.

        ನಂತರ ಚಂದ್ರಿಕಾ, ರಾಜೇಶ್ವರಿ ಹಾಗೂ ಸೌಭಾಗ್ಯ ಅವರುಗಳು ನಾಮಪತ್ರ ಹಿಂಪಡೆದು, ಕಣದಲ್ಲಿ ವಿಶಾಲಾಕ್ಷಿ ನಟರಾಜ್ ಒಬ್ಬರೇ ಅಭ್ಯರ್ಥಿ ಇದ್ದುದ್ದರಿಂದ ಚುನಾವಣಾಧಿಕಾರಿ ಶಿವಯೋಗಿ ಕಳಸದ್ ಅವರು ವಿಶಾಲಾಕ್ಷಿ ನಟರಾಜ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಅವಿರೋಧ ಅಯ್ಕೆಗೊಂಡಿದ್ದಾರೆ ಎಂದು ಘೋಷಣೆ ಮಾಡಿದರು. 

       ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ ನ 22, ಬಿಜೆಪಿಯ 10, ಜೆಡಿಎಸ್ ನ 2, ಪಕ್ಷೇತರ ಇಬ್ಬರು ಹಾಗೂ ಕಾಂಗ್ರೆಸ್ ಉಚ್ಚಾಟಿತ ಸದಸ್ಯರು 1 ಸೇರಿದಂತೆ ಒಟ್ಟು 37 ಜನ ಸದಸ್ಯರು ಹಾಜರಿದ್ದರು. ಇವರ ಅಧಿಕಾರಾವಧಿ 2019 ರ ಮಾರ್ಚ್ 23 ರಿಂದ 2021 ರ ಮೇ. 03 ರವರೆಗೆ ಇರುತ್ತದೆ ಎಂದು ಶಿವಯೋಗಿ ಕಳಸದ ಅವರು ಪ್ರಕಟಿಸಿದರು. ಬಳಿಕ, ನೂತನ ಅಧ್ಯಕ್ಷರಿಗೆ ವೇದಿಕೆಗೆ ಆಹ್ವಾನಿಸಿ, ಎಲ್ಲ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಸದಸ್ಯರು ಅಭಿನಂದನೆ ಸಲ್ಲಿಸಿದರು.

       ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಮುಖ್ಯ ಯೋಜನಾಧಿಕಾರಿ ಶಶಿಧರ್, ಉಪಕಾರ್ಯದರ್ಶಿ ಬಸವರಾಜ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಆವರಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link