ತುಮಕೂರು
ಸ್ತ್ರೀಯರಿಗೆ ಪುರುಷನಷ್ಟೇ ಶಿಕ್ಷಣ ಮತ್ತು ಸ್ವಾತಂತ್ರ್ಯ ಕೊಟ್ಟರೆ ಮಾತ್ರ. ಸಮಾಜವು ಮಹಿಳೆಯರಿಗೆ ಪುರುಷರಷ್ಟೆ ಸಮಾನವಾದ ಹಕ್ಕುಗಳನ್ನು ನೀಡಿದ್ದೇ ಆದಲ್ಲಿ, ಮಹಿಳೆಯರಲ್ಲಿ ಇರುವ ಮಾತೃ ಶಕ್ತಿ ಜಾಗೃತಗೊಳ್ಳುತ್ತದೆ ,ಉಜ್ವಲವಾಗಿ ಪ್ರಕಾಶಿಸುತ್ತದೆ. ಆ ಅಭೂತಪೂರ್ವ ಬೆಳಕಿನಲ್ಲಿ ತನ್ನ ಕುಟುಂಬದ, ಸಮಾಜದ ಹಾಗು ದೇಶದ ಪ್ರಗತಿ ಮತ್ತು ಅಭಿವೃದ್ಧಿ ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗು ಮುಖ್ಯಸ್ಥರಾದ ಡಾ| ಮೀನಾಕ್ಷಿ ಕಂಡೀಮಠ್‍ರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಆರ್ಯಭಾರತಿ ಪಾಲಿಟೆಕ್ನಿಕ್‍ನಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎ. ಬಿ. ವಿ. ಪಿ), ತುಮಕೂರು ಮಹಾನಗರ ಶಾಖೆಯು ಸಂಸ್ಥೆಯ ವಿದ್ಯಾರ್ಥಿನಿಯರಿಗಾಗಿಯೇ ಹಮ್ಮಿಕೊಂಡಿದ್ದ ‘ಮನಸ್ವಿನಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗು ಉಧ್ಘಾಟಕರಾಗಿ ಉಪಸ್ಥಿತರಿದ್ದು ಮಾತನಾಡಿದರು. ಹೆಣ್ಣುಮಕ್ಕಳಿಗೆ ಪೋಷಕರು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಯವರೆಗೂ ಉತ್ತಮ ಶಿಕ್ಷಣ ನೀಡಲು ಹೆಚ್ಚಿನ ಒತ್ತು ಕೊಡಬೇಕು. ಮೂಡನಂಬಿಕೆಗಳನ್ನು ತೊರೆದು ಹೆಣ್ಣುಮಕ್ಕಳಿಗೆ ನಿರ್ಭೀತಿಯಿಂದ ಜೀವನ ಸಾಗಿಸಲು ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಮತ್ತೋರ್ವ ಅತಿಥಿಗಳಾಗಿದ್ದ ತುಮಕೂರು ಜಿಲ್ಲಾ ಸಮನ್ವಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವಾಸವಿ ಗುಪ್ತಾರವರು ಮಾತನಾಡಿ, ಸ್ತ್ರೀಯರು ಪ್ರೀತಿ, ಸಹನೆ, ತಾಳ್ಮೆ, ಸೇವೆ, ಧೈರ್ಯ, ತ್ಯಾಗ, ಪವಿತ್ರತೆ ಹಾಗು ಪರಿಶುದ್ಧತೆಯ ಸಂಕೇತ. ಇಷ್ಟೆಲ್ಲಾ ಅದಮ್ಯ ಶಕ್ತಿಗಳು ಹೊಂದಿರುವ ಸ್ತ್ರೀಗೆ ಸಮಾನತೆ ದೊರೆತಿದ್ದೇ ಆದಲ್ಲಿ ಸುಂದರ ಹಾಗು ಸಮರ್ಥ ಭಾರತವು ರೂಪುಗೊಳ್ಳುವುದರಲ್ಲಿ ಎಳ್ಳಷ್ಟು ಸಂಶಯವಿರುವುದಿಲ್ಲ.
ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದ ಪಾಲಿಟೆಕ್ನಿಕ್‍ನ ಪ್ರಾಚಾರ್ಯರಾದ ಶ್ರೀ ಕೆ. ಆರ್. ಅಶೋಕರವರು ಮಾತನಾಡಿ, ಮಹಿಳಾ ಸಬಲೀಕರಣ, ಮಹಿಳಾ ಸಮಾನತೆ, ಮಹಿಳಾ ಪ್ರಾಧ್ಯಾನ್ಯತೆ, ಸ್ರೀಶಕ್ತಿ ಮುಂತಾದ ಮುಖ್ಯವಾದ ವಿಷಯಗಳು ಕೇಳಿಬರುತ್ತಿರುವ ಪ್ರಸಕ್ತ ಸನ್ನಿವೇಷದಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನಿಂದ ವಿದ್ಯಾರ್ಥಿನಿಯರಿಗಾಗಿಯೇ ಆಯೋಜಿಸಿರುವ ‘ಮನಸ್ವಿನಿ’ಯಂತಹ ಅರ್ಥಪೂರ್ಣ ಕಾರ್ಯಕ್ರಮ ಶ್ಲಾಘನೀಯ ಹಾಗು ಅನುಕರಣೀಯ. ಈ ಸಂಗತಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ತುಮಕೂರು ವಿಭಾಗದ ಎಲ್ಲಾ ಸದಸ್ಯರುಗಳು ಅಭಿನಂದಗೆ ಅರ್ಹರು ಎಂದರು.
ತುಮಕೂರು ಮಹಾನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಅಧ್ಯಕ್ಷರಾದ ಶ್ರೀ ಎ. ಪಿ. ಪ್ರಶಾಂತ್ ಕುಮಾರ್‍ರವರು ಪ್ರಾಸ್ತಾವಿಕವಾಗಿ ಮಾತಾನಾಡಿ, ಎಬಿವಿಪಿ ಸಂಘಟನೆಯ ಇತಿಹಾಸ ಹಾಗು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಆಗಿಂದ್ದಾಗೆ ಅಯೋಜಿಸುತ್ತಿರುವ ಕ್ರಾರ್ಯಕ್ರಮಗಳ ಸಮಗ್ರ ವರದಿ ನೀಡಿ, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಾಲಿಟೆಕ್ನಿಕ್‍ನ ಆಡಳಿತಮಂಡಳಿ ಆರ್ಯನ್ ಹೈಸ್ಕೂಲ್ ಅಸೋಸಿಯೇಷನ್‍ನ ಗೌ. ನಿರ್ದೇಶಕರಾದಂತಹ ಶ್ರೀ ರಾಮಶೇಷರವರು ಮಾತನಾಡಿ, ಪ್ರಸ್ತುತ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ತರವಾದುದಾಗಿದೆ. ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ, ಆರ್ಥಿಕ ಕ್ಷೇತ್ರಗಳು ವೇಗವಾಗಿ ಅಭಿವೃದ್ಧಿ ಹೊಂದಿ ಪ್ರಗತಿಯ ಪಥದಲ್ಲಿ ಗುರಿ ಮುಟ್ಟಲು ಮೇಲಿನ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸ್ತ್ರೀಯರಿಗೆ ಪುರುಷನಷ್ಟೇ ಸಮಾನವಾದ ಅವಕಾಶ ಹಾಗು ಪ್ರೋತ್ಸಾಹವನ್ನು ನೀಡಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತುಮಕೂರು ಮಹಾನಗರ ಎಬಿವಿಪಿ ಕಾರ್ಯದರ್ಶಿ ಕು. ನಂದಿನಿ, ವಿಭಾಗ ಸಂಚಾಲಕರುಗಳಾದ ಅಪ್ಪು ಪಾಟೀಲ್, ತ್ರಿನೇತ್ರ, ಕಾರ್ಯಕರ್ತರುಗಳಾದ ಜಗದೀಶ್ ಇನ್ನಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಪ್ರಾರ್ಥಿಸಿ, ಉಪನ್ಯಾಸಕಿ ರಶ್ಮಿ ಸ್ವಾಗತಿಸಿ, ತ್ರಿನೇತ್ರ ವಂದಿಸಿ, ವಿದ್ಯಾರ್ಥಿನಿ ಮೋನಿಶಾರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








