ದಾವಣಗೆರೆ:
ರಾಜ್ಯ ಸರ್ಕಾರವು ಆರ್ಟಿಇ ಕಾಯ್ದೆಗೆ ತಿದ್ದುಪಡಿ ತಂದಿರುವ ಕಾರಣ ಖಾಸಗಿ ಶಾಲೆಗಳಲ್ಲಿ ಆರ್ಟಿಇ ಅಡಿಯಲ್ಲಿ ಪ್ರವೇಶ ಪಡೆಯಬೇಕಿದ್ದ ಬಡ ಪೋಷಕರ 1.5 ಲಕ್ಷ ಮಕ್ಕಳು ಪ್ರವೇಶದಿಂದ ವಂಚಿತರಾಗಿದ್ದಾರೆಂದು ರಾಜ್ಯ ಖಾಸಗಿ ಕನ್ನಡ, ಆಂಗ್ಲ ಮಾಧ್ಯಮ ಆರ್ಟಿಇ ಶಾಲೆ ಮತ್ತು ಪೋಷಕರ ಸಂಘದ ಜಿಲ್ಲಾಧ್ಯಕ್ಷ ಅಣಬೇರು ಶಿವಮೂರ್ತಿ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಟಿಇ ಕಾಯ್ದೆಯನ್ವಯ ರಾಜ್ಯದ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಬಡಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಶೇ.25 ಸೀಟು ನಿಗದಿ ಮಾಡಿ, ಅದರ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತಿದ್ದವು. ಇದರಿಂದ ಸಾವಿರಾರು ಬಡಮಕ್ಕಳ ವಿಧ್ಯಾಭ್ಯಾಸಕ್ಕೆ ಅನುಕೂಲವಾಗಿತ್ತು. ಆದರೆ, ಇತ್ತೀಚೆಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಸಲಹೆ, ಒತ್ತಾಯಕ್ಕೆ ಮಣಿದು ಕಾಯ್ದೆಗೆ ತಿದ್ದುಪಡಿ ತಂದು 1 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಮಕ್ಕಳು ತಮ್ಮ ಹತ್ತಿರ ಇರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲೇ ದಾಖಲಾಗಬೇಕೆಂದು ಆದೇಶ ಹೊರಡಿಸಿರುವುದು ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ಕುತ್ತು ತಂದಿದೆ ಎಂದು ಕಿಡಿಕಾರಿದರು.
ಆರ್ಟಿಇ ಅಡಿಯಲ್ಲಿ 2012-13ರಲ್ಲಿ 46 ಸಾವಿರ ವಿದ್ಯಾರ್ಥಿಗಳು, 2013-14ರಲ್ಲಿ 70 ಸಾವಿರ, 14-15ರಲ್ಲಿ 90 ಸಾವಿರ, 15-16ರಲ್ಲಿ 1.3 ಲಕ್ಷ, 16-17ರಲ್ಲಿ 1.17 ಲಕ್ಷ, 17-18ರಲ್ಲಿ 1.52 ಲಕ್ಷ ದಾಖಲಾಗಿದ್ದರು. ಅದರಂತೆ 19-20ನೇ ವರ್ಷದಲ್ಲಿ 1.70 ಲಕ್ಷ ಮಕ್ಕಳು ದಾಖಲಾಗಬೇಕಿತ್ತು. ಆದರೆ, ಈ ತಿದ್ದುಪಡಿಯಿಂದ ಕೆಲವೇ ಮಕ್ಕಳಿಗೆ ಆರ್ಟಿಇ ಪ್ರವೇಶ ಸಿಗಲಿದ್ದು, ಸುಮಾರು 1.5 ಲಕ್ಷ ಮಕ್ಕಳು ಪ್ರವೇಶದಿಂದ ವಂಚಿತರಾಗಲಿದ್ದಾರೆಂದು ದೂರಿದರು.
ಆರ್ಟಿಇ ಕಾಯ್ದೆಯಡಿ ರಾಜ್ಯದ 14 ಸಾವಿರ ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ಬಡಮಕ್ಕಳು ಉಚಿತ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಪ್ರಸ್ತುತ ತಿದ್ದುಪಡಿಯಿಂದ ಸಮಸ್ಯೆ ಎದುರಾಗಿದೆ. ಈ ಕೂಡಲೇ ಕಾಯ್ದೆ ತಿದ್ದುಪಡಿ ಆದೇಶ ಹಿಂಪಡೆದು ಹಿಂದಿನ ಆದೇಶದಂತೆ ಯಥಾಪ್ರಕಾರ ಕಾಯ್ದೆ ಉಳಿಸಿಕೊಳ್ಳಬೇಕು. ಈ ಕುರಿತು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ತೀರ್ಪು ಬಡ ಮಕ್ಕಳ ಪರವಾಗಿ ಬೀಳುವ ನಿರೀಕ್ಷೆಯಲ್ಲಿದ್ದೇವೆಂದು ವಿಶ್ವಾಸ ವ್ಯಕ್ತಪಡಿಸಿದರುಸುದ್ದಿಗೋಷ್ಠಿಯಲ್ಲಿ ನೊಂದ ಪೋಷಕರಾದ ಶಮಖಾನಂ, ಆಶಾ, ಜೆ.ಸುಧಾ, ಧರ್ಮರಾಜ್, ಎಂ.ಜಿಯವುಲ್ಲಾ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








