ಹುಳಿಯಾರು
ತುಮಕೂರು ಜಿಲ್ಲೆಯಲ್ಲಿ ಅಹಿಂದ ಮತಗಳು ಹೆಚ್ಚಿರುವ ಕಾರಣ ದೇವೇಗೌಡರಿಗೆ ಇಲ್ಲಿ ಗೆಲ್ಲುವ ವಾತಾವರಣ ಇಲ್ಲ ಎಂದು ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಮುಖಂಡ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಸಾಸಲು ಸತೀಶ್ ಹೇಳಿದರು.
ಹುಳಿಯಾರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಹಾಸನ, ಮಂಡ್ಯದ ರೀತಿಯಲ್ಲಿ ತುಮಕೂರಿಲ್ಲ. ತುಮಕೂರಿನಲ್ಲಿ ಜಾತಿ ಕೆಮಿಸ್ಟ್ರಿ ಬೇರೆಯೇ ಇದೆ. ಜಿಲ್ಲೆಯಲ್ಲಿ ಹಿಂದುಳಿದಿರುವವರ ಸಂಖ್ಯೆ ಸಾಕಷ್ಟಿದ್ದು ತಳ ಸಮುದಾಯಗಳು ಅಭಿವೃದ್ಧಿ ಕಾಣದೆ ಬಹಳ ನೋವಿನಲ್ಲಿದೆ. ಅವರ್ಯಾರು ಜೆಡಿಎಸ್ ಬೆಂಬಲಿಸುವ ವಾತಾವರಣ ಇಲ್ಲ. ಹಾಗಾಗಿ ಚುನಾವಣಾ ಸಂದರ್ಭದಲ್ಲಿ ದೇವೇಗೌಡರ ಪರವಾಗಿ ಮತ ಹಾಕುವುದು ಕಷ್ಟದ ಪರಿಸ್ಥಿತಿ ಇದೇ ಎಂದರು.
ಹಿಂದುಳಿದ ವರ್ಗದವರೇ ಹೆಚ್ಚಿರುವ ತುಮಕೂರು ಜಿಲ್ಲೆಯು ಜೆಡಿಎಸ್ ಪಕ್ಷಕ್ಕೆ ಒಲಿಯುವ ಸಂಭಾವ್ಯತೆ ಲಕ್ಷಣಗಳು ಕಾಣ ಬರುತ್ತಿಲ್ಲವಾದ್ದರಿಂದ ತಾವು ಇಲ್ಲಿಂದ ಸ್ಪರ್ಧಿಸುವ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸುವ ಅಗತ್ಯವಿದ್ದು ಇನ್ನೂ ಕಾಲ ಮೀರಿಲ್ಲವಾದ್ದರಿಂದ ತಾವು ತಮಗೆ ಅನುಕೂಲವಾದ ಸ್ಥಳ ನೋಡಿಕೊಂಡು ತುಮಕೂರನ್ನು ಜನ ಬಯಸುತ್ತಿರುವ ಹಾಲಿ ಸಂಸದ ಎಸ್.ಪಿ.ಮುದ್ದ ಹನುಮೇಗೌಡರಿಗೆ ಬಿಟ್ಟು ಕೊಡುವಂತೆ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಹೊಸಳ್ಳಿ ಅಶೋಕ್, ಪಪಂ ಸದಸ್ಯ ವೆಂಕಟೇಶ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಇಮ್ರಾಜ್, ಪ್ರಸನ್ನ ಕುಮಾರ್, ಉಮೇಶ್, ತೊರೆಸೂರಗೊಂಡನಹಳ್ಳಿ ಮಂಜುನಾಥ್, ತಿಮ್ಲಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋಹನ್ ಕುಮಾರ್ ಮೊದಲಾದವರಿದ್ದರು.