ಹುಳಿಯಾರು
ಪಟ್ಟಣಗಳಿಗೆ ಗುಳೆ ಹೋಗುವುದ ಬಿಟ್ಟು ಹಳ್ಳಿಗಳಲ್ಲಿ ಲಭ್ಯವಿರುವ ಕೃಷಿ ಉತ್ಪನ್ನಗಳ ಮೌಲ್ಯವರ್ಧಿತ ಘಟಕಗಳನ್ನು ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಿ ಎಂದು ಮೈಸೂರಿನ ಸಿರಿಧಾನ್ಯ ತಜ್ಞ ಡಾ.ಖಾದರ್ ಸಲಹೆ ನೀಡಿದರು.
ಹುಳಿಯಾರಿನ ಬನಶಂಕರಿ ಸಮುದಾಯ ಭವನದಲ್ಲಿ ಸೋಮವಾರ ಸೃಜನ ಮಹಿಳಾ ಸಂಘದಿಂದ ಏರ್ಪಡಿಸಿದ್ದ ಸಿರಿಧ್ಯಾನ್ಯಗಳ ಮೌಲ್ಯವರ್ಧನೆಯ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಅವಶ್ಯಕವಾದ ಅಷ್ಟೂ ಆಹಾರವನ್ನು ಹಳ್ಳಿಗಳಲ್ಲಿ ರೈತರು ಬೆಳೆಯುತ್ತಾರೆ. ಆದರೆ ಬೆಳೆದಿದ್ದನ್ನು ಬೆಳೆದಂಗೆ ಕೊಡುವುದರಿಂದ ಆತ ಆರ್ಥಿಕ ಸಬಲತೆ ಸಾಧಿಸುತ್ತಿಲ್ಲ. ಬದಲಾಗಿ ಉತ್ತಿ, ಬಿತ್ತಿ, ಬೆಳೆಯದ ಮದ್ಯವರ್ತಿಗಳು ಕೃಷಿ ಲಾಭ ಪಡೆಯುತ್ತಿದ್ದಾರೆ, ಈ ಮದ್ಯವರ್ತಿಗಳ ಹಾವಳಿ ತೊಲಗಿ ರೈತರು ಲಾಭ ಮಾಡಿಕೊಳ್ಳಬೇಕೆಂದರೆ ಮೊದಲು ತಮ್ಮ ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧಿತವಾಗಿ ಪರಿವರ್ತಿಸಿ ಮಾರಾಟ ಮಾಡಬೇಕಿದೆ. ಗಾಂಧೀಜಿ ಕೂಡ ಇದೇ ಕನಸು ಕಂಡಿದ್ದರು. ಆದರೆ ಯಾವ ರಾಜಕಾರಣಿಗಳೂ, ವಿಜ್ಞಾನಿಗಳು, ಬುದ್ದಿಜೀವಿಗಳು ಇದರ ಬಗ್ಗೆ ಮಾತನಾಡಲೇ ಇಲ್ಲ ಎಂದರು.
ತುಮಕೂರು ಜಿಲ್ಲೆಯಲ್ಲಿ ಹೆಚ್ಚಾಗಿ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳಲ್ಲಿರುವ ಔಷಧಿ ಗುಣಗಳ ಮಹತ್ವ ಅರಿತು ಸಿರಿಧಾನ್ಯ ಬಳಕೆಗೆ ಜನ ಮುಂದಾಗುತ್ತಿದ್ದಾರೆ. ಹಾಗಾಗಿ ಸಿರಿಧಾನ್ಯಗಳ ಮೌಲ್ಯವರ್ಧಿತ ಘಟಕಗಳನ್ನು ಹಳ್ಳಿಹಳ್ಳಿಗಳಲ್ಲಿ ತೆರೆದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಠಿಯಾಗಿ ಗಾರ್ಮಂಟ್ಸ್ ಹೋಗೋದು ತಪ್ಪುತ್ತದೆ. ಧಾನ್ಯಗಳಾಗಿ ಮಾರುವುದನ್ನು ಬಿಟ್ಟು ಅಕ್ಕಿಯಾಗಿ ಪರಿವರ್ತಿಸಿ ಮಾರಿದರೆ ಲಾಭವೂ ಹೆಚ್ಚುತ್ತದೆ. ಅಲ್ಲದೆ ಹಳ್ಳಗರೂ ಸಹ ಸಿರಿಧಾನ್ಯ ಬಳಕೆ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳುವ ಜೊತೆಗೆ ದನಕರುಗಳಿಗೆ ಗುಣಮಟ್ಟದ ಆಹಾರ ಕೊಡಬಹುದಾಗಿದೆ ಎಂದರು.
ಸೃಜನಾ ಮಹಿಳಾ ಮಂಡಳಿಯ ಎನ್.ಇಮದಿರಮ್ಮ, ಪೂರ್ಣಮ್ಮ, ಜಯಲಕ್ಷ್ಮಮ್ಮ, ಮೌಲ್ಯವರ್ಥಿತ ಉತ್ಪನ್ನಗಳ ತರಬೇತಿದಾರ ಬಾಲನ್, ಸುವರ್ಣ ವಿದ್ಯಾ ಕೇಂದ್ರದ ರಾಮಕೃಷ್ಣಪ್ಪ, ಸಂಜೀವಿನಿ ಸಂಸ್ಥೆಯ ಸರಸ್ವತಿ ಮತ್ತಿತರರು ಇದ್ದರು.