ದಾವಣಗೆರೆ:
ಯಾವುದೇ ಸತ್ಯಾಸತ್ಯತೆ ಇಲ್ಲದ, ಸುಳ್ಳಿನ ಕಂತೆಯಿಂದ ಕೂಡಿರುವ ಫೋರ್ಜರಿ ಡೈರಿ ಬಿಡುಗಡೆ ಮಾಡಿ, ಜನರ ದಾರಿ ತಪ್ಪಿಸಲು ಯತ್ನಿಸಿದ ಎಐಸಿಸಿ ವಕ್ತಾರ ರಣದೀಪ್ಸಿಂಗ್ ಸುರ್ಜೇವಾಲ ಅವರನ್ನು ಬಂಧಿಸಬೇಕು ಹಾಗೂ 75 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ರಾಜ್ಯ ಬಿಜೆಪಿ ಸಹ ವಕ್ತಾರೆ ಮಾಳವಿಕ ಅವಿನಾಶ್ ಆಗ್ರಹಿಸಿದ್ದಾರೆ
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಸುಳ್ಳು ಹೇಳುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ. ಹೀಗಾಗಿ ರಫೇಲ್ ಯುದ್ಧ ವಿಮಾನ ಖರೀದಿಯ ಬಗ್ಗೆ ಸುಳ್ಳಿನ ಕಂತೆಯೇ ಸೃಷ್ಟಿಸುತ್ತಿದ್ದು, ಈ ಸುಳ್ಳಿನ ಕಂತೆಗೆ ಸುಳ್ಳಿನ ಕೊಂತೆಯಂತೆ, ಎಐಸಿಸಿ ವಕ್ತಾರ ರಣದೀಪ್ಸಿಂಗ್ ಸುರ್ಜೇವಾಲರವರು, ಯಡಿಯೂರಪ್ಪನವರ ಡೈರಿಯಿಂದ ಒಂದಿಷ್ಟು ಪಟುಗಳು ಸಿಕ್ಕಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪನವರು ಬಿಜೆಪಿ ವರಿಷ್ಠರಿಗೆ 1800 ಕೋಟಿ ರೂ. ಕಪ್ಪ ಸಲ್ಲಿಸಿದಾರೆಂದು ಸುಳ್ಳು ಆರೋಪ ಮಾಡಿದ್ದಾರೆಂದು ಆರೋಪಿಸಿದರು.
ಸುರ್ಜೇವಾಲ ಬಿಡುಗಡೆ ಮಾಡಿರುವ ಡೈರಿಯು ಫೋರ್ಜರಿಯಾಗಿದೆ ಎಂಬುದಾಗಿ ಸ್ವತಃ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಬಾಲಕೃಷ್ಣರವರು ಸ್ಪಷ್ಟಪಡಿಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಕೆಸರು ಎರೆಚಲು ಹಾಗೂ ಬಿಜೆಪಿಗೆ ಮಸಿ ಬಳಿಯಲು ಈ ನಕಲಿ ಡೈರಿ ಬಿಡುಗಡೆ ಮಾಡಿದ್ದಾರೆಂದು ದೂರಿದರು.
ಯಾವುದೇ ಸತ್ಯಾಸತ್ಯತೆ ಇಲ್ಲದ ಹಾಗೂ ಸುಳ್ಳಿನ ಕಂತೆಯಿಂದ ಕೂಡಿರುವ ನಕಲಿ ಡೈರಿ ಬಿಡುಗಡೆ ಮಾಡಿ, ಜನರ ದಾರಿ ತಪ್ಪಿಸಲು ಪ್ರಯತ್ನಿಸಿದ ಸುರ್ಜೇವಾಲ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗ ದೂರು ನೀಡಲಿದ್ದು, ತಕ್ಷಣವೇ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಂಬಂಧಿಕರ ನಿವಾಸದಲ್ಲಿ ಸುಮಾರು 75 ಕೋಟಿ ರೂ.ಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭ್ರಷ್ಟ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದರು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಎರಡು-ಮೂರು ತಿಂಗಳುಗಳಿಂದ ಹತ್ತು-ಹಲವು ಸಭೆಗಳನ್ನು ಆಯೋಜಿಸುವ ಮೂಲಕ ಚುನಾವಣೆಗೆ ಪೂರ್ವಸಿದ್ಧತೆ ನಡೆಸಲಾಗಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಭಾರೀ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದ 28 ಲೋಕಸಭಾ ಕ್ಷೆತ್ರಗಳ ಪೈಕಿ 27 ಕ್ಷೇತ್ರಗಳಲ್ಲಿ ಬಿಜೆಪಿ ನೇರವಾಗಿ ಸ್ಪರ್ಧೆ ಮಾಡುತ್ತಿದ್ದು, ಇನ್ನುಳಿದ ಒಂದು ಕ್ಷೇತ್ರವಾಗಿರುವ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲಿಸುತ್ತಿದೆ. ಈಗಾಗಲೇ ಬಹುತೇಕ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಇನ್ನೂ ಐದು ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ನಾಳೆಯಷ್ಟೊತ್ತಿಗೆ ಅಂತಿಮಗೊಳ್ಳಲಿದೆ ಎಂದರು.
ಪ್ರಸ್ತುತ ರಾಜಕೀಯ ಪಕ್ಷಗಳು ರಾಜಕಾರಣದ ಮಾತುಕತೆ ಸ್ತರ ಕುಗ್ಗಿ ಹೋಗಿದೆ ಎಂದ ಅವರು, ಬೆದರಿಕೆಯ ಸಂಸ್ಕಾರ ಇರುವವರು ಬೆದರಿಸಿ ರಾಜಕಾರಣ ಮಾಡುವುದು ಬಹಳ ದಿನ ನಡೆಯುವುದಿಲ್ಲ ಎಂದು ಇತ್ತೀಚೆಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಸಿನಿಮಾ ನಟರು ಮಂಡ್ಯದಲ್ಲಿ ಬಂದು ಬಣ್ಣ ಹಚ್ಚಿಕೊಂಡು ನಾಟಕವಾಡಬೇಡಿ ಎಂದಿದ್ದ ಹೇಳಿಕೆಗೆ ತಿರಿಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಹೆಚ್.ಎನ್.ಶಿವಕುಮಾರ್, ಬಿ.ರಮೇಶ ನಾಯ್ಕ, ಎನ್.ರಾಜಶೇಖರ್, ಮಹಿಳಾ ಘಟಕ ಅಧ್ಯಕ್ಷೆ ಜಯಮ್ಮ, ಮುಖಂಡರಾದ ಚೇತುಬಾಯಿ, ಸವಿತಾ ರವಿಕುಮಾರ್, ಗೌತಮ್ ಜೈನ್, ಧನುಷ್ರೆಡ್ಡಿ, ನರೇಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
