ಕೆರೆಗಳ ಅಭಿವೃದ್ಧಿಗೆ ಮಠಾಧೀಶರ ಸಂಕಲ್ಪ

ಸಾಣೇಹಳ್ಳಿ:

        ಇಲ್ಲಿನ ಶ್ರೀಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸಭೆ ಸೇರಿದ್ದ ಹೊಸದುರ್ಗ ತಾಲ್ಲೂಕಿನ ಮಠಾಧೀಶರಾದ ಭಗೀರಥ ಪೀಠದ ಶ್ರೀಪುರುಷೋತ್ತಮಾನಂದಪುರಿ ಸ್ವಾಮೀಜಿ, ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಮತ್ತು ಕುಂಚಿಟಿಗ ಮಠದ ಶ್ರೀಬಸವ ಶಾಂತವೀರ ಸ್ವಾಮೀಜಿ ಅವರುಗಳು ಹೊಸದುರ್ಗ ತಾಲೂಕಿನ ಕೆರೆಗಳ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದಾರೆ.

        ಇಡೀ ನಾಡು ಕಳೆದ ನಾಲ್ಕೈದು ವರ್ಷಗಳಿಂದ ಬರದಿಂದ ತತ್ತರಿಸಿದೆ. ಅದರಲ್ಲೂ ಹೊಸದುರ್ಗ ತಾಲ್ಲೂಕಿನ ತೋಟ-ತುಡಿಕೆಗಳು ಒಣಗಿ ನಿಂತಿವೆ. ರೈತರು ಕಂಗಾಲಾಗಿದ್ದಾರೆ. ಜನ-ಜಾನುವಾರುಗಳ ಕುಡಿಯುವ ನೀರಿಗೂ ತತ್ವಾರ ಪಡುವಂತಾಗಿದೆ. ಇನ್ನು ಪ್ರಾಣಿ-ಪಕ್ಷಿಗಳ ಸ್ಥಿತಿಯಂತೂ ದಯನೀಯವಾಗಿದೆ. ಇಂಥ ಸಂದರ್ಭದಲ್ಲಿ ತಾಲ್ಲೂಕಿನ ಮಠಾಧೀಶರಾದ ನಮ್ಮ ಮೇಲೆ ನೈತಿಕ ಜವಾಬ್ದಾರಿ ಹೆಚ್ಚಾಗಿದೆ. ಜನರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಪರಿಹಾರದ ಕ್ರಿಯಾಯೋಜನೆ ತಯಾರಿಸಲು ತೀಮಾರ್ನಿಸಿದ್ದಾರೆ.

        ಕೇವಲ ಸರಕಾರದ ಭರವಸೆಗಳನ್ನು, ಯೋಜನೆಗಳನ್ನು ನಂಬಿ ಕುಳಿತರೆ ಸಾಲುವುದಿಲ್ಲ. ಅವು ಎಷ್ಟರಮಟ್ಟಿಗೆ ಫಲಪ್ರದವಾಗುತ್ತವೆ ಎನ್ನುವುದು ಎಲ್ಲರಿಗೂ ತಿಳಿದ ವಾಸ್ತವ ಸಂಗತಿ. ಅದರಲ್ಲೂ ಇದು ಲೋಕಸಭಾ ಚುನಾವಣಾ ಸಮಯ. ಶಾಸಕಾಂಗ ಮತ್ತು ಕಾರ್ಯಾಂಗ ಚುನಾವಣೆಯಲ್ಲಿ ಮುಳುಗಿದೆ. ಇಂಥ ಸಂದರ್ಭದಲ್ಲಿ ಅವರಿವರನ್ನು ದೂರುತ್ತ ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ಮೊದಲಿಗೆ ಸಕಲ ಜೀವಜಂತುಗಳ ಮೂಲ ದ್ರವ್ಯ ನೀರಿನ ಕಡೆಗೆ ತುರ್ತಾಗಿ ಗಮನ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮಠಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲು ಮುಂದಾಗಿದ್ದಾರೆ.

        ಮೊದಲು ನಾಲ್ಕೂ ಮಠಗಳಿಂದಲೂ ತಲಾ ಒಂದು ಲಕ್ಷ ರೂಪಾಯಿಯಂತೆ ನಾಲ್ಕು ಲಕ್ಷ ರೂಪಾಯಿಗಳನ್ನು ಮೂಲನಿಧಿಯಾಗಿ ತೊಡಗಿಸುವುದು. ಸರಕಾರದ ಯೋಜನೆಗಳ, ದಾನಿಗಳ, ತಂತ್ರಜ್ಞರ ನೆರವಿನಿಂದ ನಾಲ್ಕು ಹೋಬಳಿಗಳ ನಾಲ್ಕು ಕೆರೆಗಳನ್ನು ಗುರುತಿಸಿ ಕೂಡಲೇ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳುವುದು. ಇವುಗಳ ಕಾರ್ಯ ಮುಗಿಯುತ್ತಲೇ ಮತ್ತೆ ನಾಲ್ಕು ಕೆರೆಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುವುದು. ಜನರಲ್ಲಿ ನೀರಿನ ಮಿತವ್ಯಯದ ಬಗ್ಗೆ ಜಾಗೃತಿ ಮೂಡಿಸುವುದು. ಮಳೆಗಾಲ ಆರಂಭವಾಗುತ್ತಲೇ ಕೆರೆಗಳ ಸುತ್ತಮುತ್ತ, ಸರಕಾರಿ ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಲು ಸಹ ಯೋಚನೆ ನಡೆಸಿದ್ದಾರೆ.

         ಈ ನಿಟ್ಟಿನಲ್ಲಿ ಯೋಚಿಸಿ-ಯೋಜಿಸಲು ಇದೇ ಏಪ್ರಿಲ್ ಒಂದರಂದು ಸಂಜೆ ನಾಲ್ಕು ಗಂಟೆಗೆ ಹೊಸದುರ್ಗದ ಶ್ರೀ ಕುಂಚಿಟಗ ಮಠದಲ್ಲಿ ಮತ್ತೊಂದು ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಹಾಲಿ, ಮಾಜಿ ಶಾಸಕರೂ ಸೇರಿದಂತೆ ಜನಪ್ರತಿನಿಧಿಗಳು, ಸ್ವಯಂ ಸೇವಕರು ಮತ್ತು ತಂತ್ರಜ್ಞರು ಸೇರಿ ಕಾರ್ಯ-ಯೋಜನೆಯ ಸಾಧಕ-ಬಾಧಕಗಳನ್ನು ಚರ್ಚಿಸಿ ಮೊದಲ ನಾಲ್ಕು ಕೆರೆಗಳನ್ನು ಆಯ್ಕೆ ಮಾಡಿ ಕೂಡಲೇ ಕಾರ್ಯರೂಪಕ್ಕೆ ತರಲು ಮಠಾಧೀಶರು ಮುಂದಾಗಿದ್ದಾರೆ. ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಿ ಎಂ ವಿಶಾಲಾಕ್ಷಿ ನಟರಾಜ್, ಶಿವನಕೆರೆ ಬಸವಲಿಂಗಪ್ಪ, ಎಸ್ ಕೆ ಪರಮೇಶ್ವರಯ್ಯ, ಹೆಚ್ ಎಸ್ ದ್ಯಾಮೇಶ್ ಮತ್ತಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link