ಬೆಂಗಳೂರು
arr
ಗ್ಯಾಂಗ್ ಕಟ್ಟಿಕೊಂಡು ಪಾರ್ಟಿ ಮಾಡಿ ಮದ್ಯದ ಅಮಲಿನಲ್ಲಿ ಒಂಟಿಯಾಗಿ ಓಡಾಡುವವರು ಬೈಕ್ನಲ್ಲಿ ನಿರ್ಜನ ಪ್ರದೇಶಗಳಲ್ಲಿ ಸುತ್ತಾಡುವ ಪ್ರೇಮಿಗಳು ಕಾಲೇಜು ವಿದ್ಯಾರ್ಥಿಗಳನ್ನು ಬೆದರಿಸಿ ಹಲ್ಲೆ ನಡೆಸಿ ನಗದು, ಮೊಬೈಲ್, ಚಿನ್ನಾಭರಣಗಳನ್ನು ದೋಚುತ್ತಿದ್ದ ಗ್ಯಾಂಗ್ನ ಇಬ್ಬರು ಸುಲಿಗೆಕೋರರ ಕಾಲಿಗೆ ಸೋಲದೇವನಹಳ್ಳಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಮಂಗಳವಾರ ಬಂಧಿಸಿದ ನಂತರ ಇಬ್ಬರು ಸುಲಿಗೆಕೋರರನ್ನು ಕೃತ್ಯ ನಡೆದ ಸ್ಥಳದ ಮಹಜರು ನಡೆಸಲು ತೆರಳಿದ್ದ ವೇಳೆ ತರಬೇತಿ ನಿರತ ಸಬ್ಇನ್ಸ್ಪೆಕ್ಟರ್ ವಸಂತ್ ಹಾಗೂ ಸೋಲದೇವನಹಳ್ಳಿ ಪೊಲೀಸ್ ಮುಖ್ಯ ಪೇದೆ ಶಿವಾಜಿರಾವ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸುವಾಗ ಗುಂಡೇಟು ತಿಂದು ಸಿಕ್ಕಿಬಿದ್ದಿದ್ದಾರೆ
ಗುಂಡೇಟು ತಿಂದಿರುವ ಲಗ್ಗೆರೆಯ ಶೆಟ್ಟಿಹಳ್ಳಿಯ ಚಂದ್ರಶೇಖರ್ ಅಲಿಯಾಸ್ ಚಿನ್ನು (24) ಹಾಗೂ ಲಕ್ಷ್ಮಿದೇವಿನಗರ ಸ್ಲಂನ ದೇವರಾಜು ಅಲಿಯಾಸ್ ದೇವರು (25),ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿರುವ ತರಬೇತಿ ನಿರತ ಸಬ್ಇನ್ಸ್ಪೆಕ್ಟರ್ ವಸಂತ್ ಹಾಗೂ ಸೋಲದೇವನಹಳ್ಳಿ ಪೊಲೀಸ್ ಮುಖ್ಯ ಪೇದೆ ಶಿವಾಜಿರಾವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಗ್ಯಾಂಗ್ ಕಟ್ಟಿಕೊಂಡು ಆಚಾರ್ಯ ಕಾಲೇಜು ಸುತ್ತಮುತ್ತ ಬೈಕ್ನಲ್ಲಿ ಓಡಾಡುವ ವಿದ್ಯಾರ್ಥಿಗಳು, ನಿರ್ಜನ ಪ್ರದೇಶಗಳಲ್ಲಿರುವ ಪ್ರೇಮಿಗಳನ್ನು ಬೆದರಿಸಿ ಮೊಬೈಲ್, ನಗದು, ಚಿನ್ನಾಭರಣಗಳನ್ನು ಆರೋಪಿಗಳು ಸುಲಿಗೆ ಮಾಡುತ್ತಿದ್ದರು.ನಗದು, ಚಿನ್ನಾಭರಣ ದೋಚಲು ಪ್ರತಿರೋಧ ವ್ಯಕ್ತಪಡಿಸುವ ವಿದ್ಯಾರ್ಥಿಗಳು ಹಾಗೂ ಪ್ರೇಮಿಗಳ ಮೇಲೆ ಹಲ್ಲೆ ನಡೆಸುತ್ತಿದ್ದ ಗ್ಯಾಂಗ್ನ ಕೃತ್ಯದ ಬಗ್ಗೆ ಬಂದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಸೋಲದೇವನಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ವೆಂಕಟೇಗೌಡ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗ್ಯಾಂಗ್ನಲ್ಲಿದ್ದ ಚಿನ್ನು ಹಾಗೂ ದೇವರನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಆರೋಪಿಗಳು ಕೃತ್ಯ ನಡೆಸಿದ ಆಚಾರ್ಯ ಕಾಲೇಜಿನ ಸಾಸಿವೆ ಬೆಟ್ಟದ ಬಳಿಗೆ ಬುಧವಾರ ಬೆಳಿಗ್ಗೆ 7.305ರ ವೇಳೆ ಕರೆದೊಯ್ದು ಕೃತ್ಯ ನಡೆಸಲು ಬಳಸಿ ಬಚ್ಚಿಟ್ಟಿದ್ದ ಸ್ಥಳ ಮಹಜರು ಮಾಡುತ್ತಿದ್ದಾಗ ಚಂದ್ರಶೇಖರ್ ಹಾಗೂ ದೇವರು ಪೊಲೀಸರಿಂದ ತಪ್ಪಿಸಿಕೊಳ್ಳಲು ತರಬೇತಿ ನಿರತ ಸಬ್ಇನ್ಸ್ಪೆಕ್ಟರ್ ವಸಂತ್ ಹಾಗೂ ಮುಖ್ಯಪೇದೆ ಶಿವಾಜಿರಾವ್ ಮೇಲೆ ಹಲ್ಲೆ ನಡೆಸಿ, ಓಡ ತೊಡಗಿದ್ದಾರೆ.
ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಇನ್ಸ್ಪೆಕ್ಟರ್ ವೆಂಕಟೇಗೌಡ ಅವರು ಶರಣಾಗುವಂತೆ ಎಚ್ಚರಿಕೆ ನೀಡಿದರೂ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಮತ್ತೆರೆಡು ಸುತ್ತು ಗುಂಡು ಹಾರಿಸಿದ್ದು, ಅವೆರೆಡು ಗುಂಡುಗಳು ಕಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಇಬ್ಬರನ್ನು ಬಂಧಿಸಿ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ಗ್ಯಾಂಗ್ನಲ್ಲಿದ್ದ ಇನ್ನು ಮೂರ್ನಾಲ್ಕು ಮಂದಿಯ ಬಂಧನಕ್ಕೆ ಶೋಧ ನಡೆಸಲಾಗಿದೆ. ಇಲ್ಲಿಯವರೆಗೆ ಆರೋಪಿಗಳು 8 ಸುಲಿಗೆ, ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








