ತುಮಕೂರು
ಈ ದೇಶದ ಬಡವರ ಅಭಿವೃದ್ಧಿಗಾಗಿ ಹಾಗೂ ಬಡತನ ನಿರ್ಮೂಲನೆಗಾಗಿ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಎಐಸಿಸಿ ಅಧ್ಯಕ್ಷ ಹಾಗೂ ಪ್ರಧಾನಿ ಅಭ್ಯರ್ಥಿ ರಾಹುಲ್‍ಗಾಂಧಿಯವರು ಘೋಷಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶದ ಮುಂದಿನ ಪ್ರಧಾನಿಯಾಗಲಿರುವ ರಾಹುಲ್‍ಗಾಂಧಿಯವರು, ದೇಶದಲ್ಲಿ ಹೆಚ್ಚುತ್ತಿರುವ ಬಡವ ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡಲು ಕನಿಷ್ಠ ಆದಾಯ ಖಾತ್ರಿ ಯೋಜನೆಯಡಿಯಲ್ಲಿ ಭಾರತದ ಶೇ.20ರಷ್ಟು ಅತಿ ಕಡಿಮೆ ಬಡಕುಟುಂಬದ ಫಲಾನುಭವಿಗಳಿಗೆ ವಾರ್ಷಿಕ 72,000 ರೂ ಪ್ರತಿ ತಿಂಗಳು 6000 ರೂ.ಗಳಂತೆ ಬಡವರ ಖಾತೆಗೆ ಜಮೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಇದು ಕಳೆದ 6 ತಿಂಗಳಿಂದ ದೇಶದ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮ್ಮದ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 10 ದಿನಗಳೊಳಗೆ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಲಾಗಿತ್ತು. ಹೇಳಿದಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸ್‍ಘಡ ರಾಜ್ಯಗಳಲ್ಲಿ 10 ದಿನಗಳೊಳಗೆ ರೈತರ ಸಾಲ ಮನ್ನಾ ಮಾಡಿ ನುಡಿದಂತ ನಡೆಯುವ ಸರ್ಕಾರ ಎಂದು ಸಾಬೀತು ಪಡಿಸಿದೆ ಎಂದು ತಿಳಿಸಿದರು.
2013ರ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನೀಡಲಾದ ಪ್ರಣಾಳಿಕೆಯಂತೆ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದ ಸರ್ಕಾರವಾಗಿದೆ. ಈ ನಿಟ್ಟಿನಲ್ಲಿ ಕಳೆದ ಬಾರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ಅನ್ನಭಾಗ್ಯ ಯೋಜನೆ ತಂದು ಬಡವರ ಪರವಾದ ಸರ್ಕಾರ ಎಂಬುದನ್ನು ರುಜುವಾತು ಮಾಡಿದೆ.
ಈಗ ಕುಮಾರಸ್ವಾಮಿ ಹಾಗೂ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ನಡೆಯುತ್ತಿರುವ ಮೈತ್ರಿ ಸರ್ಕಾರವು ಜನಪರ ಯೋಜನೆಗಳನ್ನು ಮುಂದುವರೆಸಿಕೊಂಡು ಬರುತ್ತದೆ. ಈ ನಿಟ್ಟಿನಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಒಲವು ತೋರುತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಮುಂದಿನ ಪ್ರಧಾನಿಯನ್ನಾಗಿ ರಾಹುಲ್‍ಗಾಂಧಿಯವರನ್ನು ಆರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ಎಸ್.ಪಿ.ಮುದ್ದಹನುಮೆಗೌಡರ ವಿಚಾರ ಮಾತನಾಡಿ, ಎರಡು ದಿನದ ಕಾಲಾವಕಾಶದೊಳಗೆ ಅವರನ್ನು ಮನವೊಲಿಸುವ ಕಾರ್ಯ ಹೈಕಮಾಂಡ್ ಮಾಡುತ್ತಿದ್ದಾರೆ. ಈ ಮುಂಚೆ ತುಮಕೂರು ಕ್ಷೇತ್ರ ಕಾಂಗ್ರೆಸ್‍ಗೆ ಬಿಟ್ಟುಕೊಡಬೇಕು. ಹಾಲಿ ಸಂಸದರಾದ ಎಸ್.ಪಿ.ಮುದ್ದಹನುಮೆಗೌಡರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದ್ದೆವು. ಆದರೆ ಮೈತ್ರಿ ಸರ್ಕಾರದಲ್ಲಿ ವರಿಷ್ಠರ ತೀರ್ಮಾನದಂತೆ ತುಮಕೂರು ಲೋಕಸಭಾ ಕ್ಷೇತ್ರವು ಜೆಡಿಎಸ್‍ಗೆ ಒಲಿದಿದೆ. ಹಾಗಾಗಿ ಪಕ್ಷದ ತೀರ್ಮಾನಕ್ಕೆ ತಲೆ ಬಾಗಿ ಜೆಡಿಎಸ್‍ಗೆ ಬೆಂಬಲ ನೀಡುತ್ತಿದ್ದೇವೆ ಎಂದು ರಫೀಕ್ ಅಹಮ್ಮದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ವಕ್ಫ್ ಬೋರ್ಡ್ ಅಧ್ಯಕ್ಷ ಮುಷ್ತಾಕ್ ಅಹಮ್ಮದ್, ಕಾಂಗ್ರೆಸ್ ಮುಖಂಡರಾದ ಸುಜಾತ ಇನ್ನಿತರರು ಉಪಸ್ಥಿತರಿದ್ದರು.
ಎಸ್‍ಪಿಎಂ ವಿಚಾರಕ್ಕೆ ಸಿಡಿಮಿಡಿಗೊಂಡ ಹಾಲಪ್ಪ:
ಎಸ್‍ಪಿ ಮುದ್ದಹನುಮೆಗೌಡರಿಗೆ ಟಿಕೆಟ್ ನೀಡುವ ವಿಚಾರವಾಗಿ ಎಲ್ಲಿಯೂ ಚಕಾರವೆತ್ತಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುರಳೀಧರ ಹಾಲಪ್ಪ, ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ, ನನಗೇನು ಶಕ್ತಿ ಇರಲಿಲ್ಲವಾ, ಅಥವಾ ನಮ್ಮಲ್ಲಿ ಷಫೀ ಅಹಮ್ಮದ್ ರವರು ಇದ್ದಾರೆ. ಮಾಜಿ ಸಚಿವ ಟಿ.ಬಿ.ಜಯಚಂದ್ರರವರು ಇದ್ದಾರೆ. ಅವರಿಗೇನು ಚುನಾವಣೆ ಎದುರಿಸುವ ಶಕ್ತಿ ಇಲ್ಲವಾ ಎಂದು ಸಿಡಿಮಿಡಿಗೊಂಡರು.