ತುಮಕೂರು:
ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ ಅಂಗವಾಗಿರುವ ಪತ್ರಿಕಾ ರಂಗದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ಬದುಕಿನಲ್ಲಿ ಅಭದ್ರತೆ ಕಾಡುತ್ತಿದೆ. ಸಮಾಜಕ್ಕಾಗಿ ಸೇವೆಸಲ್ಲಿಸುತ್ತಿರುವ ಪತ್ರಕರ್ತರ ಬದುಕು ಸಹ ಉತ್ತಮವಾಗಬೇಕಾದರೆ ಸಂಘಟನೆ ಅತೀ ಮುಖ್ಯವಾಗಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯ ಕುಲಸಚಿವ ಡಾ.ಕೆ.ಜೆ.ಸುರೇಶ್ ತಿಳಿಸಿದರು.
ನಗರದ ಬಾಲಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಪತ್ರಕರ್ತರೂ ಕೂಡ ಕಾರ್ಮಿಕ ಸಂಘಟನೆಯಲ್ಲಿ ಬರುವುದರಿಂದ ಅವರಿಗೆ ಅನುಕೂಲಕರ ವಾತಾವರಣವನ್ನು ಪತ್ರಕರ್ತರ ಸಂಘ ಮಾಡಬೇಕಾಗಿದೆ ಎಂದು ನುಡಿದರು.ಇಂದು ಮಾಧ್ಯಮಗಳು ವಸ್ತುನಿಷ್ಠ ವರದಿಗೆ ಆಧ್ಯತೆ ನೀಡಬೇಕು. ಅನೇಕ ಹಿರಿಯರು ಉತ್ತಮ ಸಾಧನೆ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪತ್ರಕರ್ತರು ಮುನ್ನಡೆಯಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಪದವಿ ಪ್ರಧಾನ ಮಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಜಿಲ್ಲೆಯ ಪತ್ರಕರ್ತರು ಒಗ್ಗಟ್ಟಿನಿಂದ ಇದ್ದು ಪತ್ರಕರ್ತರ ಸಂಘವನ್ನು ಮುನ್ನಡೆಸಬೇಕು. ಅನೇಕ ಹಿರಿಯರ ಮಾರ್ಗದರ್ಶನದಲ್ಲಿ ಬೆಳೆದುಬಂದಿರುವ ಪತ್ರಕರ್ತರ ಸಂಘ ರಾಜ್ಯದ ಎಲ್ಲಾ ಕಡೆ ಸದಸ್ಯತ್ವ ಹೊಂದಿರುವ ದೊಡ್ಡ ಸಂಘಟನೆ ಎಂದರು.
ಸರ್ಕಾರ ಪತ್ರಕರ್ತರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ತಂದಿದೆ. ಗ್ರಾಮೀಣ ಪತ್ರಕರ್ತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಬೇಕು ಎಂದು ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.ಐಎಫ್‍ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ತುಮಕೂರು ಪತ್ರಕರ್ತರ ಸಂಘ ಒಂದು ಮಾದರಿ ಸಂಘವಾಗಿದೆ. ಈ ಸಂಘದಿಂದ ಎಲ್ಲ ಪತ್ರಕರ್ತರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ನೂತನ ಪದಾಧಿಕಾರಿಗಳು ನೀಡಬೇಕು.
ಏನೇ ಭಿನ್ನಮತ, ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬದಿಗಿಟ್ಟು ಸಂಘದಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆಯನ್ನು ಹೊಂದಬೇಕು. ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ ಅಧಿಕಾರದಲ್ಲಿದ್ದಾಗ ನಾಲ್ಕು ಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ಜಿಲ್ಲೆಯ ಎಲ್ಲ ಪತ್ರಕರ್ತರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಮಾಡುವುದಾಗಿ ತಿಳಿಸಿ, ಈ ಹಿಂದೆ ಜಾರಿಯಲ್ಲಿಸದ್ದ ಗ್ರಾಮೀಣ ಪತ್ರಕರ್ತರಿಗೆ ಬಸ್‍ಪಾಸ್, ಹೆಲ್ತ್‍ಕಾರ್ಡ್ ನೀಡುವುದು. ಪತ್ರಕರ್ತರು ನಿಧನ ಹೊಂದಿದರೆ ಅವರ ಕುಟುಂಬಕ್ಕೆ ಹತ್ತು ಸಾವಿರ ನೀಡುವುದು, ಮಾರಣಾಂತಿಕ ಕಾಯಿಲೆ, ಅಪಘಾತವಾದರೆ 10 ಸಾವಿರ ನೆರವು ನೀಡವುದು, ಪತ್ರಕರ್ತರ ನಿಧಿ ಸ್ಥಾಪನೆ ಸೇರಿದಂತೆ ಹಲವು ಯೋಜನೆ ಮಾಡಲು ನೂತನ ಆಡಳಿತ ಮಂಡಳಿ ಚಿಂತನೆ ಮಾಡಿದೆ ಎಂದು ಹೇಳಿದರು.
ಪತ್ರಕರ್ತರ ಭವನದಲ್ಲಿ ಕಾರ್ಯಚಟುವಟಿಕೆ ಮಾಡಲು ಒತ್ತು ನೀಡಲಾಗುವುದು. ಪತ್ರಕರ್ತರಿಗೆ ಕ್ರಿಡಾಕೂಟ, ಸಾಂಸ್ಕತಿಕ ಕಾರ್ಯಕ್ರಮಗಳು ಜೊತೆಗೆ ಆರೋಗ್ಯ ಶಿಭಿರ ಮಾಡಲು ಒತ್ತು ನೀಡುವುದರ ಜೊತೆಗೆ ಜಿಲ್ಲೆಯ ಎಲ್ಲ ತಾಲೂಕುಗಳ ಪತ್ರಕರ್ತರ ಸಂಘಗಳಿಗೆ ಚುನಾವಣೆ ನಡೆಸಿ, ಎಲ್ಲ ಸಂಘಗಳು ಜಿಲ್ಲಾ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸಲು ಹೆಚ್ಚಿನ ಒತ್ತು ನೀಡಲಾಗುವುದು. ಇಡೀ ಜಿಲ್ಲೆಯ ಪತ್ರಕರ್ತರ ಗೌರವವನ್ನು ಎತ್ತಿ ಹಿಡಿಯುವ ಕೆಲಸವನ್ನು ನಿಮ್ಮೆಲ್ಲರ ಸಹಕಾರದಿಂದ ಈ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಸೇರಿ ಮಾಡುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಪಿ.ಡಿ.ಈರಣ್ಣ, ನೂತನ ಆಡಳಿತ ಮಂಡಳಿಗೆ ಶುಭಕೋರಿ ತಮ್ಮ ಎಲ್ಲ ಕೆಲಸಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.ಈ ವೇಳೆ ರಾಜ್ಯ ಪತ್ರಕರ್ತರ ಸಂಘದ ಪ್ರಶಸ್ತಿ ಪಡೆದ ಮಧುಗಿರಿ ವರದಿಗಾರ ಗಂಗಾಧರ ರೆಡ್ಡಿಹಳ್ಳಿ, ಮಾಧ್ಯಮ ಆಕಾಡೆಮಿ ಪ್ರಶಸ್ತಿ ಪಡೆದ ಮಾಜಿ ಶಾಸಕ ಗಂಗಾಹನುಮಯ್ಯ ಮತ್ತು ಪಾವಗಡದ ಪತ್ರಕರ್ತ ಜಿ.ಎನ್.ನಾಗರಾಜ, ಚುನಾವಣಾಧಿಕಾರಿಯಾಗಿದ್ದ ಶಾಂತರಾಜು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಡಿ.ರಂಗರಾಜ್, ಉಪಾಧ್ಯಕ್ಷರಾದ ಎನ್.ಎಸ್.ಮಾರುತಿ ಪ್ರಸಾದ್, ಶ್ಯಾನ.ಪ್ರಸನ್ನ ಮೂರ್ತಿ, ಸಿದ್ಧಲಿಂಗ ಸ್ವಾಮಿ, ಕಾರ್ಯದರ್ಶಿಗಳಾದ ಸಿ.ದೇವರಾಜು, ಮಲ್ಲಿಕಾರ್ಜುನ ದುಂಡಾ, ಬರಗೂರು ವೀರೂಪಾಕ್ಷ, ಖಜಾಂಚಿ ಟಿ.ಎಚ್.ಚಂದ್ರಶೇಖರ್, ರಾಜ್ಯ ಸಮಿತಿ ಸದಸ್ಯರಾದ ಆರ್.ನಾಗರಾಜ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಾರ್ಯಕಾರಿ ಸಮಿತಿ ನೂತನ ಸದಸ್ಯರುಗಳಾದ ಕಮಲ ಗಂಗ ಹನುಮಯ್ಯ, ತಿಪಟೂರು ಕೃಷ್ಣ, ವಾಜಿದ್ ಖಾನ್, ಸಿ.ಎಸ್.ಕುಮಾರ್, ಟಿ.ಇ.ರಘುರಾಮ್, ದೇವಪ್ರಕಾಶ್, ಸಿ.ಟಿ.ಎಸ್.ಗೋವಿಂದಪ್ಪ, ಟಿ.ಆರ್.ಚೇತನ್, ಎಲ್.ಯೋಗೀಶ್, ಜಿ.ಎನ್.ಮಂಜುನಾಥ್, ಸತೀಶ್ ಆರೋಗೆರೆ, ರಂಗಧಾಮಯ್ಯ, ಎಂ.ಈಶ್ವರಯ್ಯ, ದಶರಥ, ಸಿ.ರಂಗನಾಥ್, ಮೊದಲಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/DSC_2890.gif)