ತುಮಕೂರು
ಹಿರಿಯರು ಹಾಗೂ ಕಿರಿಯರು ಸೇರಿದಂತೆ ಮತದಾರರ ಪಟ್ಟಿಯಲ್ಲಿರುವ ಜಿಲ್ಲೆಯ ಎಲ್ಲಾ ಮತದಾರರು ಕಡ್ಡಾಯವಾಗಿ ಏಪ್ರಿಲ್ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ಪದ್ಮಶ್ರೀ ಪುರಸ್ಕøತೆ ಸಾಲುಮರದ ತಿಮ್ಮಕ್ಕ ಅವರು ಕರೆ ನೀಡಿದರು.
ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ತುಮಕೂರು ನಗರದ ಬಾಲಭವನದಲ್ಲಿ ನಡೆದ ವಿಶೇಷ ಚೇತನರಿಗೆ ತರಬೇತಿ ಮತ್ತು ಮತದಾನದ ಮಹತ್ವ ಕುರಿತ ಸಿಡಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮತದಾನ ಎಂಬುದು ಪ್ರತಿಯೊಬ್ಬರ ಹಕ್ಕು, ಈ ಹಕ್ಕನ್ನು ಚಿಕ್ಕವರು ಇರಲಿ, ದೊಡ್ಡವರು ಇರಲಿ, ಮತದಾರರ ಪಟ್ಟಿಯಲ್ಲಿ ಇರುವ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು. ಏಪ್ರಿಲ್ 18ರಂದು ನಾನು ಮತದಾನ ಮಾಡುತ್ತೇನೆ. ನೀವು ಮತದಾನ ಮಾಡಬೇಕು ಎಂದು ಅವರು ತಿಳಿಸಿದರು.
ಮತದಾನ ಮಾಡುವಂತೆ ಕಾರ್ಯಕ್ರಮದಲ್ಲಿದ್ದ ವಿಕಲಚೇತನರಿಗೆ ಪ್ರೇರೇಪಿಸಿದ ಅವರು, ಪ್ರತಿಯೊಬ್ಬರು ಸಸಿಗಳನ್ನು ನೆಡಬೇಕು. ಅವುಗಳನ್ನು ಆರೈಕೆ ಮಾಡಬೇಕು ಎಂಬುದನ್ನು ತಿಳಿಸಲು ಅವರು ಮರೆಯಲಿಲ್ಲ.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ: ರಾಕೇಶ್ಕುಮಾರ್ ಅವರು ತುಮಕೂರು ಜಿಲ್ಲೆಯಲ್ಲಿ 21ಲಕ್ಷ ಮತದಾರರಿದ್ದು, ಎಲ್ಲ ಮತದಾರರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ಜಾರಿಗೆ ಬಂದು 77 ವರ್ಷಗಳಾಗಿದ್ದು, ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಎಲ್ಲರೂ ಚಲಾಯಿಸಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಹಾಗೂ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಕರೆ ನೀಡಿದರು.
ವಿಕಲಚೇತನರಿಗೆ ವ್ಹೀಲ್ಚೇರ್, ಹಿರಿಯರಿಗೆ/ ವಿಕಲಚೇತನರಿಗೆ ಮನೆಯಿಂದ ಮತಗಟ್ಟೆಯವರೆಗೆ ಆಗಮಿಸಲು ವಾಹನದ ವ್ಯವಸ್ಥೆ, ಮತಗಟ್ಟೆಯಲ್ಲಿ ಪ್ರಥಮ ಚಿಕಿತ್ಸಾ ಕಿಟ್, ಮತ್ತಿತರ ಸೌಲಭ್ಯಗಳನ್ನು ಚುನಾವಣಾ ಆಯೋಗ ಒದಗಿಸುತ್ತಿದ್ದು, ಪ್ರತಿಯೊಬ್ಬ ಮತದಾರರು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಅವರು ತಿಳಿಸಿದರು.
ಕಳೆದ ಚುನಾವಣೆಯಲ್ಲಿ ಆದ ಮತದಾನದ ಶೇಕಡಾವಾರು ಪ್ರಮಾಣ ನೋಡಿದರೆ ತುಮಕೂರು ನಗರದಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಪದ್ಮಶ್ರೀ ಪುರಸ್ಕøತೆ ಸಾಲಮರದ ತಿಮ್ಮಕ್ಕ ಅವರನ್ನು ತುಮಕೂರು ಜಿಲ್ಲೆಯ ಚುನಾವಣಾ “ಐಕಾನ್” ಆಗಿ ಸ್ವೀಪ್ ಸಮಿತಿ ಆಯ್ಕೆ ಮಾಡಿರುವುದು ಸಂತೋಷಕರ ಸಂಗತಿ.
ಇವರು ನಿಜಕ್ಕೂ ಮತದಾರರಿಗೆ ಪ್ರೇರಣೆ ಆಗಲಿದ್ದಾರೆ ಎಂದು ಅವರು ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತಿ ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಶುಭಾ ಕಲ್ಯಾಣ್ ಅವರು, ವಿಕಲಚೇತನರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನುವಾಗುವಂತೆ ವಾಹನ ವ್ಯವಸ್ಥೆ, ವ್ಹೀಲ್ಚೇರ್ ವ್ಯವಸ್ಥೆ, ರ್ಯಾಂಪ್ ನಿರ್ಮಾಣ, ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಅನುಕೂಲಕ್ಕಾಗಿ ಮತಗಟ್ಟೆಗಳಲ್ಲಿ ಸ್ವಯಂಸೇವಕರ ನೇಮಕ, ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪ್ರತಿಯೊಬ್ಬ ವಿಕಲಚೇತನ/ ಹಿರಿಯ ನಾಗರಿಕ ಮತದಾರರು ಈ ಸೌಲಭ್ಯ ಬಳಸಿಕೊಳ್ಳಬೇಕು ಎಂದರು.
ಅಂಧ ಮತದಾರರಿಗಾಗಿ ಬ್ಯಾಲೆಟ್ ಪೇಪರ್ನಲ್ಲಿ ಬ್ರೈಲ್ ಲಿಪಿಯನ್ನು ಅಳವಡಿಸಲಾಗುವುದು. ಮತದಾನ ಅಮೂಲ್ಯವಾದದ್ದು. ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ಚಲಾಯಿಸಬೇಕು ಎಂದು ಅವರು ತಿಳಿಸಿದರು. ಪ್ರತಿಯೊಬ್ಬ ಮನುಷ್ಯನ ಉಸಿರಾಟಕ್ಕೆ ವಾರ್ಷಿಕ 740 ಕೆ.ಜಿ. ಆಕ್ಸಿಜನ್ ಅವಶ್ಯಕತೆ ಇದೆ. ಇದಕ್ಕಾಗಿ ತಲಾ 7 ರಿಂದ 8 ಸಸಿಗಳನ್ನು ನೆಡಬೇಕು. ಈ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಮಾಂಕಾಳಪ್ಪ, ಸ್ವೀಪ್ ಸಮಿತಿ ಸದಸ್ಯರಾದ ರಾಜ್ಕುಮಾರ್, ವಾಸಂತಿ ಉಪ್ಪಾರ್, ನಟರಾಜ್, ರಾಜಶೇಖರ್, ಜಿಲ್ಲಾ ವಿಕಲಚೇತನಾಧಿಕಾರಿ ರಮೇಶ್, ಮತ್ತಿತರರು ಹಾಜರಿದ್ದರು.
ಸಮಾರಂಭಕ್ಕೂ ಮುನ್ನ ಟೌನ್ಹಾಲ್ ಸರ್ಕಲ್ನಿಂದ ಬಾಲಭವನದವರೆಗೆ ವಿಕಲಚೇತನರಿಂದ ತ್ರಿಚಕ್ರ ವಾಹನಗಳ ಮೂಲಕ ಮತದಾನ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.