ಹೊನ್ನಾಳಿ:
ರಾಜ್ಯದಲ್ಲಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ನಾಡಿನ ಅಭಿವೃದ್ಧಿಯನ್ನು ಮರೆತು ಹಗಲು ದರೋಡೆಗೆ ಇಳಿದಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.
ತಾಲೂಕಿನ ಕುಂದೂರು ಗ್ರಾಮಕ್ಕೆ ವಿವಿಧ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ತಾಲೂಕು ಮುಖಂಡರು, ಕಾರ್ಯಕರ್ತರೊಡನೆ ಬುಧವಾರ ಭೇಟಿ ನೀಡಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ಧೇಶ್ವರ್ ಪರವಾಗಿ ಮತಯಾಚಿಸಿದ ಬಳಿಕ ಅವರು ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಇದು ಅಪವಿತ್ರ ಮೈತ್ರಿಯಾಗಿದೆ. ಹೆಚ್ಚು ದಿನ ಈ ಸರಕಾರ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಬಿಜೆಪಿ ಸಂಘಟನೆ ಸದೃಢವಾಗಿದ್ದು, ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಈಗಾಗಲೇ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಲಾಗಿದ್ದು, ಜನತೆ ಬಿಜೆಪಿ ಪರವಾಗಿ ಒಲವು ತೋರುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಜನತೆ ತೀರ್ಮಾನಿಸಿದ್ದು, ವಿಪಕ್ಷ ನಾಯಕ ಯಡಿಯೂರಪ್ಪ ಅವರ ಸಂಘಟನಾ ಶಕ್ತಿಯಿಂದ ರಾಜ್ಯದಲ್ಲಿ 22ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಮತಗಳಿಂದ ಗೆಲ್ಲಲಿದ್ದಾರೆ ಎಂದರು.
ಜಿಪಂ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ಮುಖಂಡರಾದ ತಿಮ್ಮೇನಹಳ್ಳಿ ಟಿ.ಆರ್. ಚಂದಪ್ಪ, ಕುಬೇರನಾಯ್ಕ ಮತ್ತಿತರರು ಉಪಸ್ಥಿತರಿದ್ದರು.ಕುಂದೂರು ಜಿಪಂ ಕ್ಷೇತ್ರ ವ್ಯಾಪ್ತಿಯ ಕೂಲಂಬಿ, ತರಗನಹಳ್ಳಿ, ಕುಂಬಳೂರು, ಯಕ್ಕನಹಳ್ಳಿ, ಮುಕ್ತೇನಹಳಿ,್ಳ ಮುಂತಾದ ಗ್ರಾಮಗಳಿಗೆ ರೇಣುಕಾಚಾರ್ಯ ಹಾಗೂ ಇತರ ಮುಖಂಡರು ಭೇಟಿ ನೀಡಿ ಮತಯಾಚಿಸಿದರು.