ಏ.2ರಂದು ಅತಿಥಿ ಉಪನ್ಯಾಸಕರ ಸಮಾವೇಶ

ದಾವಣಗೆರೆ :

      ಸರ್ಕಾರಿ ಪದವಿ ಕಾಲೇಜುಗಳ ಉಪನ್ಯಾಸಕರ ಸಮನ್ವಯ ಸಮಿತಿಯ ವತಿಯಿಂದ ಶಿವಮೊಗ್ಗದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏ.2ರಂದು ಅತಿಥಿ ಉಪನ್ಯಾಸಕರ ವೃತ್ತಿ ಸಮಸ್ಯೆ ಮತ್ತು ಪರಿಹಾರದ ಹಕ್ಕೊತ್ತಾಯಕ್ಕಾಗಿ ರಾಜ್ಯ ಸಮಾವೇಶ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಹೆಚ್.ಕೊಟ್ರೇಶ್ ತಿಳಿಸಿದರು.

      ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 412 ಸರ್ಕಾರಿ ಪದವಿ ಕಾಲೇಜುಗಳಲ್ಲಿ 13,500 ಮಂದಿ ಅತಿಥಿ ಉಪನ್ಯಾಸಕರು ಹತ್ತಾರು ವರ್ಷಗಳಿಂದ ಯಾವುದೇ ಸೇವಾ ಭದ್ರತೆ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಹಲವು ಬಾರಿ ಸರ್ಕಾರಗಳಿಗೆ ಮನವಿ ಸಲ್ಲಿಸದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

       ಆದ್ದರಿಂದ ನಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಬೇಕೆಂಬ ಉದ್ದೇಶದಿಂದ ರಾಜ್ಯಮಟ್ಟದ ಸಮಾವೇಶ ನಡೆಸಲಾಗುತ್ತಿದ್ದು, ಅಂದು ಜಿಲ್ಲೆಯ ಎಲ್ಲಾ 516 ಜನ ಅತಿಥಿ ಉಪನ್ಯಾಸಕರು ಒಂದು ದಿನದ ತರಗತಿ ಬಹಿಷ್ಕರಿಸಿ ಸಮಾವೇಶಕ್ಕೆ ತೆರಳಬೇಕೆಂದು ಮನವಿ ಮಾಡಿದರು.

        ಮುಖ್ಯಮಂತ್ರಿ ಕುಮಾರಸ್ವಾಮಿಯವರು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಉನ್ನತ ಶಿಕ್ಷಣ ಪರಿಷತ್‍ನಲ್ಲಿ ಕೈಗೊಂಡ ನಿರ್ಣಯದಂತೆ ರೂಸಾ ನಿಯಮದಡಿ ಪ್ರತಿ 60 ಜನ ವಿದ್ಯಾರ್ಥಿಗಳಂತೆ ತರಗತಿಗಳನ್ನು ವಿಭಾಗಿಸಬೇಕೆಂದು ಆಗ್ರಹಿಸಿದರು.

        7ನೇ ವೇತನ ಆಯೋಗ ಮತ್ತು ಯುಜಿಸಿ ಶಿಫಾರಸ್ಸಿನನ್ವಯ ಪ್ರತಿ ಗಂಟೆ ಬೋಧನಾ ಅವಧಿಗೆ 1500 ರೂ.ನಂತೆ ಮಾಸಿಕ ಗರಿಷ್ಟ 50 ಸಾವಿರ ರೂ. ಗೌರವ ಧನ ಕೊಡಬೇಕು. ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸ್ಥಗಿತಗೊಳಿಸಿ, ಅತಿಥಿ ಉಪನ್ಯಾಸಕರನ್ನೇ ಖಾಯಂಗೊಳಿಸಬೇಕು. ಕೂಡಲೇ ಜಾರಿಗೆ ಬರುವಂತೆ ಇಎಸ್‍ಐ, ಪಿಎಫ್, ರಜೆ ಮತ್ತಿತರೆ ಮಾನವೀಯ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಡಾ.ಎಂ.ಪ್ರಭಾಕರ್, ಮಂಜುಳಾ, ನಾಗರಾಜ್, ಗಂಗಾಧರ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link