ತುರುವೇಕೆರೆ
ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕಳೆದ ಒಂದೂವರೆ ವರ್ಷದಿಂದ ಆಮೆ ನಡಿಗೆಯಲ್ಲಿ ಸಾಗಿದ್ದ ಪ್ರಧಾನಮಂತ್ರಿ ಜನೌಷಧ ಕೇಂದ್ರ ಬುಧವಾರ ಅಧಿಕೃತವಾಗಿ ಎಂ.ಎಸ್.ಐ.ಎಲ್ ವ್ಯವಸ್ಥೆಗೆ ಹಸ್ತಾಂತರಗೊಳ್ಳುವುದರೊಂದಿಗೆ ಇಲ್ಲಿನ ಸಾರ್ವಜನಿಕರ ನಿರೀಕ್ಷೆಯನ್ನು ಹೆಚ್ಚಿಸಿದೆ.
ರಾಜ್ಯದಾದ್ಯಂತ 200 ಕ್ಕೂ ಹೆಚ್ಚು ಜನೌಷಧ ಕೇಂದ್ರಗಳನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಮುಚ್ಛಯದಲ್ಲಿ ತೆರೆದು ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಜನರಿಕ್ ಔಷಧಿಗಳನ್ನು ದೊರಕಿಸುವ ನಿಟ್ಟಿನ ಪ್ರಯತ್ನದಂತೆ ತುರುವೇಕೆರೆಯಲ್ಲಿಯೂ ಕೇಂದ್ರ ತೆರೆಯಲಾಗಿತ್ತು.
ಹೆಸರಿಗೆ ಮಾತ್ರ ಜನರಿಕ್ ಬ್ಯೂರೋ ಆಫ್ ಫಾರ್ಮಾ ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್ ಆಫ್ ಇಂಡಿಯಾ (ಬಿಪಿಪಿಐ) ಹುಬ್ಬಳ್ಳಿರವರು ಇಲ್ಲಿನ ಜನರಿಕ್ ಔಷಧಿ ಕೇಂದ್ರದ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದರು. ಇಡೀ ಜಿಲ್ಲೆಯಲ್ಲಿ ಎಂ.ಎಸ್.ಐ.ಎಲ್ ಸಮೂಹ ಸಂಸ್ಥೆಯೊಂದಿಗೆ ನಡೆಯುತ್ತಿದ್ದ ಔಷಧಿ ಕೇಂದ್ರಗಳು ಜನಸಾಮಾನ್ಯರು ನಿರೀಕ್ಷಿಸುವ ಎಲ್ಲಾ ತರಹದ ಔಷಧಿ, ಮಾತ್ರೆ, ಇಂಜಕ್ಷನ್ ವಯಲ್ಗಳು ಲಭ್ಯವಾಗುತ್ತಿತ್ತು.
ಆದರೆ ಹುಬ್ಬಳಿ ಸಮೂಹ ಸಂಸ್ಥೆ ನಡೆಸುವ ತುರುವೇಕೆರೆಯೂ ಸೇರಿದಂತೆ ಹಲವೆಡೆ ಬೆರಳೆಣಿಕೆ ಕೆಲವೆ ಔಷಧಿಗಳ ಲಭ್ಯವಾಗುವುದರೊಂದಿಗೆ ಹೆಸರಿಗೆ ಮಾತ್ರ ಜನರಿಕ್ ಮೆಡಿಕಲ್ ಎಂಬಂತಾಗಿ ಜನಸಾಮಾನ್ಯರಿಂದ ದೂರಾಗಿತ್ತು. ಹತ್ತು – ಹಲವು ಹೊಸ ನಿರೀಕ್ಷೆಗಳೊಂದಿಗೆ ಔಷಧಿ ಚೀಟಿಗಳನ್ನು ಹೊಸಜನರಿಕ್ ಮೆಡಿಕಲ್ ಕೇಂದ್ರಕ್ಕೆ ತಂದ ಸಾರ್ವಜನಿಕರಿಗೆ ಇಲ್ಲವೆಂಬ ಉತ್ತರ ದೊರಕುತ್ತಿತ್ತು. ಹೀಗಾಗಿ ಆರಂಭದಿಂದಲೂ ಕೇಂದ್ರ ಎಡವುತ್ತಾ ತಾಲ್ಲೂಕು ಆಡಳಿತ ವೈದ್ಯಾಧಿಕಾರಿಗಳ ನಿರ್ವಹಣೆಯಲ್ಲಿ ಅಲ್ಲಿನ ಫಾರ್ಮಸಿಸ್ಟ್ ಕಾರ್ಯನಿರ್ವಹಿಸುತ್ತಿದ್ದರು.
ಈ ಬಗ್ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ದೂರುಗಳು ಬರುತ್ತಿದ್ದು ಎಂ.ಎಸ್.ಐ.ಎಲ್, ಸಮೂಹ ಸಂಸ್ಥೆಗೆ ತುರುವೇಕೆರೆ ಜನರಿಕ್ ಕೇಂದ್ರವನ್ನು ವಹಿಸಬೇಕೆಂಬ ಮಾತುಗಳು ಕೇಳಿ ಬರುತ್ತಿದ್ದವು.
ಸಫಲಗೊಂಡ ಪ್ರಯತ್ನ: ಈ ದಿಸೆಯಲ್ಲಿ ತಾಲ್ಲೂಕು ವೈದ್ಯಾಧಿಕಾರಿ ತಿರುಪತಯ್ಯ, ವೈದ್ಯಾಧಿಕಾರಿ ಡಾ|| ಶ್ರೀಧರ್ ಅವರು ಶಾಸಕ ಮಸಾಲ ಜಯರಾಮ್ ಅವರ ಗಮನಕ್ಕೂ ತಂದು ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನ ಸೆಳೆದು ಪತ್ರವ್ಯವಹಾರ ನಡೆಸಿದ್ದರು.
ಸತತ 6 ತಿಂಗಳ ಪ್ರಯತ್ನ ಸಫಲವಾಗಿ ಇದೀಗ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಆದೇಶದಂತೆ ತುರುವೇಕೆರೆ ಜನರಿಕ್ ಔಷಧಿ ಕೇಂದ್ರ ಎಂ.ಎಸ್.ಐ.ಎಲ್ ನ ಕೋ-ಆರ್ಡಿನೇಟರ್ರವರಿಗೆ ಹಸ್ತಾಂತರಗೊಂಡಿದೆ.ಒಟ್ಟಾರೆ ಸರ್ಕಾರದ ಸದುದ್ದೇಶದ ಜನರಿಕ್ ಔಷಧಿ ಕೇಂದ್ರ ಇನ್ನು ಮುಂದೆ ಜನಸಾಮಾನ್ಯರು ನಿರೀಕ್ಷಿಸಿದ ಔಷಧಿ, ಮಾತ್ರೆಗಳನ್ನು ಕೈಗೆಟಕುವ ದರದಲ್ಲಿ ಪೂರೈಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
