ವಸ್ತು ತೃಪ್ತಿ ನೀಡದಲ್ಲಿ ವೇದಿಕೆ ಮೊರೆ ಹೋಗಿ

ದಾವಣಗೆರೆ:

      ಹಣ ನೀಡಿ ಖರೀದಿಸಿದ ವಸ್ತು ಮತ್ತು ಪಡೆದ ಸೇವೆಯಿಂದ ತೃಪ್ತಿಯಾಗದಿದ್ದರೆ, ಗ್ರಾಹಕರು ನ್ಯಾಯಕ್ಕಾಗಿ ಗ್ರಾಹಕರ ವೇದಿಕೆಯ ಮೊರೆ ಹೋಗಬೇಕೆಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಸಲಹೆ ನೀಡಿದರು.

     ಇಲ್ಲಿನ ಆರ್.ಎಲ್.ಕಾನೂನು ಕಾಲೇಜಿನಲ್ಲಿ ಶನಿವಾರ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ರೋಟರಿ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

     1986ರಲ್ಲಿ ದೇಶದಲ್ಲಿ ಡಿಸೆಂಬರ್ 24 ರಂದು ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿಗೆ ಬಂತು. ಈ ಕಾಯ್ದೆಯ ಅನ್ವಯ ವ್ಯಕ್ತಿಯು ಹಣ ನೀಡಿ ಖರೀದಿಸಿದ ವಸ್ತುಗಳು ಹಾಗೂ ಪಡೆಯುವ ಸೇವೆಯು ಆ ವ್ಯಕ್ತಿಗೆ ತೃಪ್ತಿಯನ್ನುಂಟು ಮಾಡದಿದ್ದರೆ, ಗ್ರಾಹಕರ ವೇದಿಕೆಯ ಮೊರೆ ಹೋಗಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ 25ಸಾವಿರದಿಂದ 20ಲಕ್ಷದವರೆಗೆ, ರಾಜ್ಯ ಮಟ್ಟದಲ್ಲಿ 20 ಲಕ್ಷ ರೂ. ಮೇಲ್ಪಟ್ಟು, ರಾಷ್ಟ್ರಮಟ್ಟದ ವೇದಿಕೆಯಲ್ಲಿ 1ಕೋಟಿ ರೂ. ಮೇಲ್ಪಟ್ಟು ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದರು.

      ಗ್ರಾಹಕರು ಸರಕು, ಸೇವೆಗಳ ಆಯ್ಕೆ, ಮಾಹಿತಿ, ಪರಿಹಾರ, ಆರೋಗ್ಯ ಪೂರ್ಣ ಪರಿಸರ ಪಡೆಯುವ ಹಕ್ಕು ಹೊಂದಿರುತ್ತಾರೆ. ಸರಕು, ಸೇವೆಗಳಿಂದ ಅತೃಪ್ತಿ, ತೊಂದರೆ ಉಂಟಾದಾಗ ಗ್ರಾಹಕರ ವೇದಿಕೆಯಲ್ಲಿ ಪರಿಹಾರ ಪಡೆಯಬಹುದು. ಆದ್ದರಿಂದ ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

      ಗ್ರಾಹಕರ ವೇದಿಕೆಯಲ್ಲಿ ವ್ಯಾಜ್ಯ ನಡೆಸಲು ಯಾವುದೇ ವಕೀಲರ ಅವಶ್ಯಕತೆ ಇರುವುದಿಲ್ಲ, ಗ್ರಾಹಕರು ಯಾವುದೇ ಸೇವೆ ಅಥವಾ ವಸ್ತುಗಳನ್ನು ಪಡೆದಂತ ಸಂದರ್ಭದಲ್ಲಿ ರಶೀದಿಯನ್ನು ಕಡ್ಡಾಯವಾಗಿ ಪಡೆಯುವುದರ ಜೊತೆಗೆ, ಸೂಚನೆ ಹಾಗೂ ಷರತ್ತುಗಳ ಬಗ್ಗೆ ಗಮನಹರಿಸುವ ಮೂಲಕ ಗ್ರಾಹಕರು ಮೋಸಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕೆಂದು ಸಲಹೆ ನೀಡಿದರು.

     ಸುಪ್ರೀಂ ಕೋರ್ಟ್ ಆಹಾರ ನಷ್ಟ ಮಾಡಬಾರದು ಎಂದು ಹೇಳಿದೆ. ಇದು ನಮ್ಮ ಮನೆಗಳಿಂದಲೇ ಜಾರಿಯಾಗಬೇಕು. ಅನ್ನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷ ಪಿ.ಅಂಜಿನಪ್ಪ ಮಾತನಾಡಿ, ಸಾರ್ವಜನಿಕರು ಅನಗತ್ಯ ವಸ್ತುಗಳ ಖರೀದಿಯಲ್ಲಿ ಆಕರ್ಷಿತರಾಗುತ್ತಿರುವ ಕಾರಣಕ್ಕೆ ಕೊಳ್ಳುಬಾಕ ಸಂಸ್ಕøತಿ ಹೆಚ್ಚಾಗುತ್ತಿದೆ. ಉತ್ತಮ ಗ್ರಾಹಕ ಆಗಬೇಕಾದರೆ ಅಗತ್ಯಕ್ಕೆ ತಕ್ಕಷ್ಟು ಸಾಮಗ್ರಿಗಳ ಖರೀದಿ ಮಾಡಬೇಕು. ಅನಗತ್ಯ ವಸ್ತುಗಳ ಕೊಳ್ಳುವಿಕೆಯನ್ನು ತಡೆಯಬೇಕು. ಇದು ಪರಿಸರ ಸಂರಕ್ಷಣೆಗೂ ಸಹ ಸಹಕಾರಿಯಾಗಲಿದೆ ಎಂದು ಹೇಳಿದರು.

       ಉತ್ತಮ ಪರಿಸರ ಹೊಂದುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಆಗಿದೆ. ಆದರೆ, ಪ್ರಸ್ತುತ ಸಾಕಷ್ಟು ಪ್ರಮಾಣದಲ್ಲಿ ಪರಿಸರ ಹಾಳಾಗಿದೆ. ಮರ, ಗಿಡ ಕಡಿಯಲಾಗುತ್ತಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಡಿಸೇಲ್, ಪೆಟ್ರೋಲ್ ಬಳಕೆಯಿಂದ ಕಾರ್ಬನ್‍ಡೈ ಆಕ್ಸೈಡ್ ಉತ್ಪತ್ತಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

      ಯಾವುದೇ ಒಂದು ದೇಶ ಸುಭೀಕ್ಷವಾಗಿರಬೇಕಾದರೆ, ಆ ದೇಶವು ಶೇ.70 ರಷ್ಟು ಪ್ರಮಾಣದಲ್ಲಿ ಕಾಡು ಹೊಂದಿರಬೇಕಾಗಿದೆ. ಆದ್ದರಿಂದ ಪ್ರತಿಯೊಬ್ಬರು ಒಂದು ಸಸಿ ನೆಡಬೇಕು. ಮದುವೆ, ಶುಭ ಸಮಾರಂಭಗಳಲ್ಲಿ ಸಸಿಗಳನ್ನು ವಿತರಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.

      ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆಹಾರ ಇಲಾಖೆ ಸಹಾಯಕ ನಿರ್ದೇಶಕ ಆರ್.ರವಿ, ರೋಟರಿ ಕ್ಲಬ್ ಅಧ್ಯಕ್ಷ ಬೇತೂರು ಜಗದೀಶ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link