ಚಳ್ಳಕೆರೆ
ಈ ಬಾರಿಯ ಲೋಕಸಭಾ ಚುನಾವಣೆ ಬಾರಿ ಪೈಪೋಟಿಯಿಂದ ಕೂಡಿದ್ದು ಏ.18ರಂದು ನಡೆಯುವ ಮತದಾನದಲ್ಲಿ ನಗರದ ಎಲ್ಲಾ ಘಟಕಗಳ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಹಾಗೂ ನಗರಸಭಾ ಸದಸ್ಯ ತಮ್ಮ ವಾರ್ಡ್ ವ್ಯಾಪ್ತಿಯ ಎಲ್ಲಾ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರಿಗೆ ಮತ ಚಲಾಯಿಸುವಂತೆ ಮನವಿ ಮಾಡಿಕೊಳ್ಳಬೇಕೆಂದು ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದರು.
ಅವರು, ಶನಿವಾರ ಸಂಜೆ ಶಾಸಕರ ನಿವಾಸದಲ್ಲಿ ನಗರದ ವಿವಿಧ ವಾರ್ಡ್ಗಳ ನಗರಸಭಾ ಸದಸ್ಯರು, ಪಕ್ಷದ ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಲೋಕಸಭಾ ಚುನಾವಣೆಗೆ ಇನ್ನೂ ಕೇವಲ 18 ದಿನಗಳು ಮಾತ್ರ ಬಾಕಿ ಇದ್ದು, ಯಾವ ಸದಸ್ಯರೂ ಸಹ ಉದಾಸೀನತೆ ತೋರದೆ ನಾಳೆಯಿಂದಲೇ ತಮ್ಮ ತಮ್ಮ ವಾರ್ಡ್ಗಳ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಬೇಕೆಂದರು.
ಶೀಘ್ರದಲ್ಲೇ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಸೇರಿದಂತೆ ಪಕ್ಷದ ಅನೇಕ ದುರೀಣರು ಪ್ರಚಾರ ಕಾರ್ಯದಲ್ಲಿ ಭಾಗವಹಿಸುವರು. ಈ ಸಂದರ್ಭದಲ್ಲಿ ಮೈತ್ರಿ ಕೂಟದ ಪಾಲುದಾರ ಪಕ್ಷವಾದ ಜೆಡಿಎಸ್ ಪಕ್ಷದ ಅಧ್ಯಕ್ಷರೂ ಸೇರಿದಂತೆ ಎಲ್ಲಾ ಮುಖಂಡರನ್ನು ಪ್ರಚಾರ ಕಾರ್ಯದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುವುದು. ಈಗಾಗಲೇ ಈ ಬಗ್ಗೆ ಇಲ್ಲಿನ ಜೆಡಿಎಸ್ ಮುಖಂಡರೊಂದಿಗೆ ಸೌಹಾರ್ಧಿತ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ನಗರಸಭಾ ಸದಸ್ಯ ಆರ್.ರುದ್ರನಾಯಕ ಮಾತನಾಡಿ, ಚಳ್ಳಕೆರೆ ನಗರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಲಭಿಸಿದ್ದು, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲೂ ಸಹ ಪಕ್ಷಕ್ಕೆ ಹೆಚ್ಚು ಮತಗಳು ಲಭ್ಯವಾಗಲಿವೆ. ಈಗಾಗಲೇ ನಗರದ ಹಲವಾರು ವಾರ್ಡ್ಗಳಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಿದ್ದು, ಪಕ್ಷದ ಗೆಲುವಿನ ಪರವಾಗಿ ನಗರದ ಮತದಾರರ ಒಲವು ಇದೆ ಎಂದರು.
ಪ್ರಧಾನ ಕಾರ್ಯದರ್ಶಿ ಪಿ.ತಿಪ್ಪೇಸ್ವಾಮಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಂತೆ ಈಬಾರಿಯೂ ನಗರದ ಎಲ್ಲಾ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕಿದೆ. ಈಗಾಗಲೇ ಕೆಲವು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಪ್ರಚಾರ ಕಾರ್ಯದಲ್ಲಿ ತೊಡಗಿದ್ಧಾರೆ ಎಂದರು.
ಸಭೆಯಲ್ಲಿ ನಗರಸಭಾ ಸದಸ್ಯರಾದ ಕೆ.ವೀರಭದ್ರಪ್ಪ, ಟಿ.ಮಲ್ಲಿಕಾರ್ಜುನ, ಬಿ.ಟಿ.ರಮೇಶ್ಗೌಡ, ಎಂ.ಜೆ.ರಾಘವೇಂದ್ರ, ಎಂ.ಸಾವಿತ್ರಿ, ಮಾಜಿ ಪುರಸಭಾ ಸದಸ್ಯರಾದ ದಳವಾಯಿಮೂರ್ತಿ, ಟಿ.ಜೆ.ವೆಂಕಟೇಶ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಸಿ.ಟಿ.ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಭರಮಣ್ಣ, ಬೋರಯ್ಯ ಮುಂತಾದವರು ಉಪಸ್ಥಿತರಿದ್ದರು.