ಬೆಂಗಳೂರು :
ಕೆಆರ್ ಪೇಟೆಯ ಜೆಡಿಎಸ್ ಶಾಸಕ ನಾರಾಯಣಗೌಡ ಆಸ್ತಿ ಒಂದೇ ವರ್ಷದಲ್ಲಿ ಬರೋಬ್ಬರಿ 5 ಕೋಟಿ ರೂ. ಏರಿಕೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆಗೆ ಆಗ್ರಹಿಸಲಾಗಿದೆ.
2016-17ರಲ್ಲಿ ನಾರಾಯಣ ಗೌಡ ಆಸ್ತಿ 24 ಲಕ್ಷ ರೂ. ಇತ್ತು. 2018ಕ್ಕೆ ಅವರ ಆಸ್ತಿ ಮೌಲ್ಯ ಬರೋಬ್ಬರಿ 5.89 ಕೋಟಿ ರೂ.ಗೆ ಏರಿಕೆ ಆಗಿದೆ! ಒಂದೇ ವರ್ಷದಲ್ಲಿ ಇಷ್ಟೊಂದು ಆದಾಯ ಹೆಚ್ಚಾಗಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡಿದೆ.
ಕೇವಲ ಶಾಸಕ ನಾರಾಯಣಗೌಡ ಆಸ್ತಿ ಮಾತ್ರವಲ್ಲ ಪತ್ನಿ, ಮಗಳ ಆಸ್ತಿಯೂ ಹೆಚ್ಚಳವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಪತ್ನಿ ದೇವಿಕಾ ನಾರಾಯಣ ಗೌಡ ಆಸ್ತಿ 2017ರಲ್ಲಿ 5 ಲಕ್ಷ ರೂ. ಇತ್ತು. 2018ರಲ್ಲಿ ಅವರ ಆಸ್ತಿ 2.95 ಕೋಟಿ ರೂ.ಗೆ ಏರಿಕೆ ಆಗಿದೆ. ಮಗಳು ಲೀಲಾ ಹಾಗೂ ನೇಹಾ ಆಸ್ತಿ ಮೌಲ್ಯ ಕೂಡ ಹತ್ತುಪಟ್ಟು ಹೆಚ್ಚಳವಾಗಿದೆ.
ಈ ವಿಚಾರವಾಗಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಆಬ್ರಹಾಂ ಎಸಿಬಿಗೆ ದೂರು ನೀಡಿದ್ದು, ಅಕ್ರಮವಾಗಿ ಆಸ್ತಿ ಸಂಪಾದನೆ ಹಾಗೂ ಆಸ್ತಿ ಮುಚ್ಚಿಟ್ಟ ಆರೋಪದ ಅಡಿ ತನಿಖೆಗೆ ಆಗ್ರಹಿಸಿದ್ದಾರೆ. ಅಬ್ರಹಾಂ ದೂರು ಆಧರಿಸಿ ಎಸಿಬಿ ಅಧಿಕಾರಿಗಳು ತನಿಖೆ ಆರಂಭಿಸಲಿದ್ದಾರೆ.
ಇದು ಅಕ್ರಮವಾಗಿ ಸಂಪಾದಿಸಿದ ಆಸ್ತಿಯೋ ಅಥವಾ ನಿಜವಾದ ಆಸ್ತಿಮೌಲ್ಯವನ್ನು ಮುಚ್ಚಿಟ್ಟು ಸುಳ್ಳು ಆಸ್ತಿ ತೋರಿಸಿದ್ದಾರೋ ಎನ್ನುವ ಪ್ರಶ್ನೆಗೆ ತನಿಖೆಯಿಂದಷ್ಟೇ ತಿಳಿಯಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
