ಮತ ಮಾರಿಕೊಳ್ಳಬೇಡಿ, ದಾನ ಮಾಡಿ: ಬಸವಪ್ರಭುಶ್ರೀ

ದಾವಣಗೆರೆ :

       ನಮಗೆ ಸಂವಿಧಾನದತ್ತವಾಗಿ ದೊರೆತಿರುವ ಮತವನ್ನು ಯಾರು ಮಾರಾಟ ಮಾಡಿಕೊಳ್ಳಬಾರದು, ಬದಲಿಗೆ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಕರೆ ನೀಡಿದರು.

      ನಗರದ ಜಯದೇವ ವೃತ್ತದಲ್ಲಿ ಭಾನುವಾರ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಯಕ್ಷರಂಗ ಯಕ್ಷಗಾನ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತ ಮಾರಾಟ ಮಾಡಿಕೊಳ್ಳುವುದು ಮಹಾಪಾಪದ ಕೆಲಸವಾಗಿದೆ. ಆದ್ದರಿಂದ ಯಾರೂ ವೋಟು ಮಾರಿಕೊಳ್ಳಬಾರದು, ಬದಲಿಗೆ ಮತದಾನ ಮಾಡಬೇಕೆಂದು ಕಿವಿಮಾತು ಹೇಳಿದರು.

      ಮತದಾನ ಮಾಡುವುದು ನಿಜವಾದ ದೇಶಪ್ರೇಮವಾಗಿದೆ. ಮತದಾನದ ಮೂಲಕ ಸುಭದ್ರ ಮತ್ತು ಬಲಿಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡಲು ಸಾಧ್ಯ. ಮತ ಹಾಕುವರರು ಜಾತಿ, ಧರ್ಮ, ಭೇದ ಭಾವ, ಪಕ್ಷಗಳನ್ನು ನೋಡದೇ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು. ಮತ ಮಾರಿಕೊಂಡರೆ ಅದು ನಮ್ಮನ್ನು ನಾವು ಮಾರಾಟ ಮಾಡಿಕೊಂಡಂತಾಗಲಿದೆ ಎಂದು ಸೂಚ್ಯವಾಗಿ ನುಡಿದರು.

      ವಿದ್ಯಾವಂತರು, ನೌಕರರು, ಅಧಿಕಾರಿಗಳು ಮತದಾನದಂದು ರಜಾದಿನವನ್ನಾಗಿ ಮಾಡಿಕೊಳ್ಳಬಾರದು. ಕಡ್ಡಾಯವಾಗಿ ಮತ ಚಲಾಯಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಭಾವನೆ ಸಲ್ಲದು ಎಂದು ಶ್ರೀಗಳು ಕಿವಿಮಾತು ಹೇಳಿದರು.

       ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಮಾತನಾಡಿ, ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಮತದಾನ ಮಾಡದೇ ಇದ್ದಂತವರಿಗೆ ಡಿಎಲ್, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮಾಸಾಶನ, ವೃದ್ದಾಪ್ಯ ವೇತನ ಇವುಗಳನ್ನು ರದ್ದುಪಡಿಸಬೇಕೆಂದು ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

       ಈ ಸಂದರ್ಭದಲ್ಲಿ ಶಾಂತಭಟ್, ಪ್ರಭಾಕರ ಶೆಟ್ಟಿ, ಮಂಜುನಾಥ, ಹೇಮಾಶಾಂತ ಪೂಜಾರಿ, ಜ್ಯೋತಿ, ಶೈಲಾ ವಿಜಯಕುಮಾರ್, ಸಂತೋಷ್ ಕುಮಾರ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಜಿ.ಎಂ.ಲೋಕೇಶ್, ಕುಸುಮಾ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link