ಬಿಜೆಪಿ ಮತ್ತೆ ಗೆದ್ದರೆ ಸಂವಿಧಾನ ಬದಲಾವಣೆ

ಚಿತ್ರದುರ್ಗ:

       ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿರುವ ಡೋಂಗಿ ಹಿಂದುತ್ವವಾದಿಗಳ ವಿರುದ್ದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಚ್ಚರಿಕೆಯಿಂದ ಮತಚಲಾಯಿಸುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ರಾಜ್ಯಾಧ್ಯಕ್ಷ ಶಾಂತವೀರನಾಯ್ಕ ಅಸಂಘಟಿತ ಕಾರ್ಮಿಕರಿಗೆ ಕರೆ ನೀಡಿದರು.

        ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕರ ವಿಭಾಗದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

        ಅಸಂಘಟಿತ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಸರ್ಕಾರ ಹಾಗೂ ಶ್ರೀಮಂತ ವರ್ಗದವರು ಅಸಂಘಟಿತ ಕಾರ್ಮಿಕರನ್ನು ನಿರ್ಲಕ್ಷಿಸಿರುವುದರಿಂದ ಕಾರ್ಮಿಕರ ಬದುಕು ಅತಂತ್ರವಾಗಿದೆ. ಕಾಂಗ್ರೆಸ್‍ನಿಂದ ಮಾತ್ರ ಅಸಂಘಟಿತ ಕಾರ್ಮಿಕರಿಗೆ ರಕ್ಷಣೆ ದೊರಕಿದೆ. ಬಿಜೆಪಿ., ಆರ್.ಎಸ್.ಎಸ್.ನವರು ಈಗಾಗಲೆ ಸಂವಿಧಾನ ಕರಡು ಸಿದ್ದಪಡಿಸಿಟ್ಟುಕೊಂಡಿದ್ದಾರೆ.

         ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ.ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುವುದರಲ್ಲಿ ಅನುಮಾನವಿಲ್ಲ. ಯಾವುದೇ ಕಾರಣಕ್ಕೂ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ಅವಕಾಶ ಕೊಡಬೇಡಿ. ಚುನಾವಣೆಗೆ ಇನ್ನು ಕೇವಲ ಹದಿನೇಳು ದಿನಗಳ ಕಾಲಾವಕಾಶವಿರುವುದರಿಂದ ಅಸಂಟಿತ ಕಾರ್ಮಿಕರು ಪ್ರತಿ ಮನೆ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಬಿಜೆಪಿ.ದುರಾಡಳಿತವನ್ನು ತಿಳಿಸಿ ಎಂದು ಹೇಳಿದರು.

          ದೇಶದಲ್ಲಿರುವ ಜನಸಂಖ್ಯೆಯಲ್ಲಿ ಶೇ.20 ರಷ್ಟು ಬಡವರಿಗೆ ಪ್ರತಿ ತಿಂಗಳ ಆರು ಸಾವಿರ ರೂ.ಗಳ ನೆರವು ನೀಡುವುದಾಗಿ ರಾಹುಲ್‍ಗಾಂಧಿ ಘೋಷಿಸಿದ್ದಾರೆ. ಕೋಮುವಾದಿ ಬಿಜೆಪಿ.ಯನ್ನು ಪಾರ್ಲಿಮೆಂಟ್‍ನಿಂದ ಓಡಿಸಬೇಕಾಗಿರುವುದರಿಂದ ಲೋಕಸಭೆ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಿ. ಪ್ರತಿಯೊಬ್ಬ ಕಾಂಗ್ರೆಸ್ಸಿಗರು ಸೈನಿಕರಂತೆ ಕೆಲಸ ಮಾಡಿ ಪಕ್ಷವನ್ನು ಬಹುಮತಗಳಿಂದ ಗೆಲ್ಲಿಸುವ ಮೂಲಕ ರಾಹುಲ್‍ಗಾಂಧಿಯನ್ನು ದೇಶದ ಪ್ರಧಾನಿಯನ್ನಾಗಿ ಮಾಡಿ ಎಂದು ಅಸಂಘಟಿತ ಕಾರ್ಮಿಕರಲ್ಲಿ ಮನವಿ ಮಾಡಿದರು.

         ವಿಧಾನಸಭೆ ಚುನಾವಣೆಯಲ್ಲಾದ ನಿರ್ಲಕ್ಷೆ, ಬೇಜವಾಬ್ದಾರಿತನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಆಗುವುದು ಬೇಡ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಜನಪರ ಯೋಜನೆಗಳನ್ನು ಮತದಾರರಿಗೆ ಮುಟ್ಟಿಸಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ನವರನ್ನು ಪಾರ್ಲಿಮೆಂಟ್‍ಗೆ ಕಳಿಸಿಕೊಡುವಲ್ಲಿ ನಿಮ್ಮ ಪಾತ್ರ ಹಿರಿದು ಎಂದು ಹೇಳಿದರು.

        ಕೆ.ಪಿ.ಸಿ.ಸಿ.ಕಾರ್ಯದರ್ಶಿ ಎಂ.ಜಯಣ್ಣ ಮಾತನಾಡಿ ಕಳೆದ ನಾಲ್ಕುವರೆ ವರ್ಷಗಳ ಕಾಲ ದೇಶವನ್ನಾಳಿದ ಪ್ರಧಾನಿ ನರೇಂದ್ರಮೋದಿ ಜಾತಿ ಜಾತಿಗಳ ನಡುವೆ ಗಲಭೆ ಸೃಷ್ಟಿಸುವುದನ್ನು ಬಿಟ್ಟು ಬೇರೆ ಯಾವ ಸಾಧನೆಯನ್ನು ಮಾಡಿಲ್ಲ.

       ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸರ್ವಶ್ರೇಷ್ಟವಾದ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿದ್ದಾರೆ. ಇದರಿಂದ ದಲಿತರು, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರ ಬದುಕು ಅಲ್ಲೋಲ ಕಲ್ಲೋಲವಾಗಲಿದೆ. ಯಾವುದೆ ಕಾರಣಕ್ಕೂ ಬಿಜೆಪಿ.ಅಧಿಕಾರಕ್ಕೆ ಬರಲು ಅವಕಾಶ ಕೊಡಬೇಡಿ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿ ರಾಹುಲ್‍ಗಾಂಧಿ ಕೈಬಲಪಡಿಸಿ ಎಂದು ಅಸಂಘಟಿತ ಕಾರ್ಮಿಕರನ್ನು ಕೋರಿದರು.

        ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಉಪಾಧ್ಯಕ್ಷ ಎ.ಜಾಕೀರ್‍ಹುಸೇನ್, ಜಿಲ್ಲಾಧ್ಯಕ್ಷ ಮೋಹನ್‍ಪೂಜಾರಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್‍ಕುಮಾರ್, ನಾಗರಾಜ್ ಜಾನ್ಹವಿ, ದುರುಗೇಶ್, ನ್ಯಾಯವಾದಿ ಸಾಧಿಕ್‍ವುಲ್ಲಾ, ಜಿ.ಪಂ.ಮಾಜಿ ಉಪಾಧ್ಯಕ್ಷ ಕೆ.ಪಾಪಯ್ಯ, ಎನ್.ಎಸ್.ಯು.ಐ.ಕಾರ್ಯದರ್ಶಿ ಮಮತ ನೇರ್ಲಗಿ, ರೆಹಮಾನ್ ಸೇರಿದಂತೆ ಅಸಂಘಟಿತ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link