ಚುನಾವಣಾ ಅಕ್ರಮಗಳ ತಡೆಗೆ ಸಿವಿಜಿಲ್ ಆ್ಯಪ್ : ವಿನೊತ್ ಪ್ರಿಯಾ  

ಚಿತ್ರದುರ್ಗ:

       ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಅತ್ಯಂತ ಮುಕ್ತ, ಪಾರದರ್ಶಕವಾಗಿ ನಡೆಸಲು ಈ ಬಾರಿ, ನೀತಿ ಸಂಹಿತೆ ಉಲ್ಲಂಘನೆಯ ದೃಶ್ಯಾವಳಿ, ಛಾಯಾಚಿತ್ರಗಳನ್ನು ನೇರವಾಗಿ ಅಪ್ಲೋಡ್ ಮಾಡಬಹುದಾದ ಮೊಬೈಲ್ ಅಫ್ಲಿಕೇಷನ್ ಸಿ-ವಿಜಿಲ್ ಎಂಬ ಆ್ಯಪ್ ಮೂಲಕ ಸಲ್ಲಿಸಬಹುದಾಗಿದ್ದು, ಸಾರ್ವಜನಿಕರು ಈ ಆ್ಯಪ್‍ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.

      ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಅಕ್ರಮಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಅವಶ್ಯಕವಾಗಿದೆ. ಅದಕ್ಕಾಗಿ ಈ ಬಾರಿ ಚುನಾವಣಾ ಆಯೋಗವು ಸಿ-ವಿಜಿಲ್ ಎಂಬ ಆ್ಯಪ್ ಅನ್ನು ಸಿದ್ದಪಡಿಸಿ, ಉಪಯೋಗಿಸಲು ಅವಕಾಶ ಕಲ್ಪಿಸಿದೆ ಎಂದರು

       ಸಿ-ವಿಜಿಲ್ ಅಪ್ಲಿಕೇಷನ್ ಆಂಡ್ರಾಯಿಡ್ ಮೊಬೈಲ್‍ಗಳಲ್ಲಿ ಪ್ಲೇಸ್ಟೋರ್‍ನಲ್ಲಿ ಲಭ್ಯವಿರುತ್ತದೆ. ಈ ಆಪ್ ಮೂಲಕ ನೀತಿ ಸಂಹಿತೆ ಉಲ್ಲಂಘನೆ ವೀಡಿಯೋ, ಫೋಟೋಗಳನ್ನು ನೇರವಾಗಿ ಅಪ್‍ಲೋಡ್ ಮಾಡಿದಲ್ಲಿ ಆಯಾ ಜಿಲ್ಲಾ ನಿಯಂತ್ರಣಾ ಕೇಂದ್ರಕ್ಕೆ ಬರುತ್ತದೆ. ಇದರಲ್ಲಿ ಐದು ನಿಮಿಷವುಳ್ಳ ವಿಡಿಯೋ, ಫೋಟೋ ಕಳುಹಿಸಲು ಅವಕಾಶ ಇದೆ.

         ಜಿಲ್ಲೆಯಲ್ಲಿ ಇದುವರೆಗೂ ಈ ಆ್ಯಪ್ ಮೂಲಕ ಕೇವಲ 9 ದೂರುಗಳು ಸಲ್ಲಿಕೆಯಾಗಿದ್ದು, ಆ್ಯಪ್‍ನ ಕಾರ್ಯವೈಖರಿ ಪ್ರಯೋಗ ಮಾಡುವ ಸಲುವಾಗಿ ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡು ಸಲ್ಲಿಕೆಯಾದ ದೂರುಗಳಾಗಿವೆ. ಯಾರೂ ಇಂತಹ ಅನಗತ್ಯ ಪ್ರಯೋಗಕ್ಕೆ ಮುಂದಾಗಬಾರದು. ಈ ಆ್ಯಪ್‍ನ ಸದ್ಬಳಕೆ ಮಾಡಿಕೊಳ್ಳಬೇಕು. ಇದಲ್ಲದೆ ಈಗಾಗಲೆ ಸಹಾಯವಾಣಿ 1950 ಕಾರ್ಯನಿರತವಾಗಿದ್ದು, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ. ಮತದಾರರು ಯಾವುದೇ ಮಾಹಿತಿ ಮತ್ತು ದೂರುಗಳಿಗೆ ಸಂಪರ್ಕಿಸಬಹುದಾಗಿದೆ. ಈ ಕುರಿತು ಮಾಧ್ಯಮಗಳು ವ್ಯಾಪಕ ಪ್ರಚಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಮತದಾರರ ವಿವರ

        ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೆ ಮುಕ್ತಾಯಗೊಂಡಿದೆ. ಅಂತಿಮ ಅಂಕಿ ಅಂಶಗಳನ್ವಯ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡು ಒಟ್ಟಾರೆ ಪುರುಷ-889274, ಮಹಿಳೆ-871009, ಇತರೆ-104, ಒಟ್ಟು- 1760387 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು
ಚಿತ್ರದುರ್ಗ ಜಿಲ್ಲೆಯಲ್ಲಿ ಪುರುಷ-678597, ಮಹಿಳೆ-670810, ಇತರೆ-89, ಒಟ್ಟು- 1349496 ಮತದಾರರಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಪುರುಷ- 117691, ಮಹಿಳೆ-114923, ಇತರೆ-07, ಒಟ್ಟು-232621 ಮತದಾರರು. ಚಳ್ಳಕೆರೆ: ಪುರುಷ- 105968, ಮಹಿಳೆ-105520, ಇತರೆ-04, ಒಟ್ಟು-211492 ಮತದಾರರು. ಚಿತ್ರದುರ್ಗ: ಪುರುಷ- 126137, ಮಹಿಳೆ-127451, ಇತರೆ-35, ಒಟ್ಟು-253623 ಮತದಾರರು. ಹಿರಿಯೂರು : ಪುರುಷ- 117471, ಮಹಿಳೆ-118155, ಇತರೆ-39, ಒಟ್ಟು-235665 ಮತದಾರರು. ಹೊಸದುರ್ಗ : ಪುರುಷ- 96074, ಮಹಿಳೆ-92499, ಒಟ್ಟು-188573 ಮತದಾರರು. ಹಾಗೂ ಹೊಳಲ್ಕೆರೆ ಕ್ಷೇತ್ರದಲ್ಲಿ ಪುರುಷ- 115256, ಮಹಿಳೆ-112262, ಇತರೆ-04, ಒಟ್ಟು-227522 ಮತದಾರರಿದ್ದಾರೆ. ತುಮಕೂರು ಜಿಲ್ಲೆ ಸಿರಾ ಕ್ಷೇತ್ರದಲ್ಲಿ ಪುರುಷ-109283, ಮಹಿಳೆ- 103877, ಇತರೆ-10, ಒಟ್ಟು- 213170. ಪಾವಗಡ ಕ್ಷೇತ್ರದಲ್ಲಿ ಪುರುಷ-101394, ಮಹಿಳೆ- 96322, ಇತರೆ- 05, ಒಟ್ಟು 197721 ಮತದಾರರಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 386 ಸೇವಾ ಮತದಾರರಿದ್ದರೆ, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟಾರೆ 522 ಸೇವಾ ಮತದಾರರಿದ್ದಾರೆ.

ಏ. 9 ರಂದು ತರಬೇತಿ

         ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳು ಚುನಾವಣಾ ಅಂತಿಮ ಕಣದಲ್ಲಿದ್ದು, ಈಗಾಗಲೆ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ಕಳೆದ ಮಾ. 31 ರಂದು ಮೊದಲನೆ ಹಂತದ ತರಬೇತಿ ನೀಡಲಾಗಿದೆ. ಎರಡನೆ ಹಂತದ ತರಬೇತಿಯನ್ನು ಏ. 09 ರಂದು ನೀಡಲಾಗುವುದು. ಏ. 18 ರಂದು ಮತದಾನ ನಡೆಯಲಿದ್ದು, ಮತದಾನ ದಿನದಂದು ಸುಮಾರು 8400 ಅಧಿಕಾರಿ, ಸಿಬ್ಬಂದಿಗಳು ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

           ಈ ಬಾರಿ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿರುವುದರಿಂದ, ಪ್ರತಿ ಮತಗಟ್ಟೆಯಲ್ಲಿ ಒಂದು ಹೆಚ್ಚುವರಿ ಬ್ಯಾಲೆಟ್ ಯುನಿಟ್ ಅಳವಡಿಸಬೇಕಿದೆ. ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ಹೆಚ್ಚುವರಿ ಬ್ಯಾಲೆಟ್ ಯುನಿಟ್ ಅಳವಡಿಕೆ ಮತ್ತು ಬಳಕೆ ಕುರಿತು ಸೂಕ್ತ ತರಬೇತಿ ನೀಡಲಾಗುವುದು. ಜಿಲ್ಲೆಯಲ್ಲಿ ಸದ್ಯ 1648 ಮತಗಟ್ಟೆಗಳಿದ್ದು, ಶೇ. 20 ರಷ್ಟು ಯಂತ್ರಗಳು ದಾಸ್ತಾನು ಇರುತ್ತವೆ. ಜಿಲ್ಲೆಗೆ ಇದೀಗ ಪ್ರತಿ ಮತಗಟ್ಟೆಗೆ ಹೆಚ್ಚುವರಿಯಾಗಿ ಒಂದು ಬ್ಯಾಲೆಟ್ ಯುನಿಟ್ ಯಂತ್ರಗಳು ಬೇಕಾಗಿದ್ದು, ಅಗತ್ಯವಿರುವ ಯಂತ್ರಗಳನ್ನು ಶಿವಮೊಗ್ಗ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಶೀಘ್ರ ಪಡೆದು, ರ್ಯಾಂಡಮೈಸೇಶನ್ ಮೂಲಕ ಕ್ಷೇತ್ರವಾರು ಹಂಚಿಕೆ ಮಾಡಲಾಗುವುದು.

         ಮತಯಂತ್ರಗಳ ಬಳಕೆ ಕುರಿತು ಈಗಾಗಲೆ ಮತಗಟ್ಟೆವಾರು ಜಾಗೃತಿ ಮೂಡಿಸಲಾಗುತ್ತಿದೆ. ಆಯೋಗದ ನಿರ್ದೇಶನದಂತೆ ಇವಿಎಂ ಮತಯಂತ್ರಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡಲಾಗುವುದು ಎಂದರು.

 1.21 ಕೋಟಿ ಹಣ ವಶ :

       ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ಹಣ, ಸಾಮಗ್ರಿ ಇತ್ಯಾದಿಗಳ ಸಾಗಣೆ ಕುರಿತು ನಿಗಾ ವಹಿಸಲು ಜಿಲ್ಲೆಯಲ್ಲಿ 40 ಕಡೆಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಿ, ದಿನದ 24 ಗಂಟೆಯೂ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು

       ಕಳೆದ ಮಾ. 15 ರಂದು ಹೊಸದುರ್ಗ ಅಹಮದ್ ನಗರ ಚೆಕ್‍ಪೋಸ್ಟ್‍ನಲ್ಲಿ 50 ಲಕ್ಷ, ಮಾ. 22 ರಂದು ಬೊಗಳೇರಹಟ್ಟಿಯಲ್ಲಿ 1 ಲಕ್ಷ ಹಾಗೂ ಮಾ. 29 ರಂದು ಕೆಳಗಳಹಟ್ಟಿಯಲ್ಲಿ 70 ಲಕ್ಷ ರೂ. ವಶ ಪಡಿಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ 1. 21 ಕೋಟಿ ರೂ. ಗಳ ನಗದು ವಶಪಡಿಸಿಕೊಂಡಿದ್ದು, ಆದಾಯ ತೆರಿಗೆ ಇಲಾಖೆಗೆ ಪರಿಶೀಲನೆಗಾಗಿ ಶಿಫಾರಸು ಮಾಡಲಾಗಿದೆ. ಅಲ್ಲದೆ ಅಕ್ರಮ ಮದ್ಯ ಸಾಗಣೆ ಕುರಿತು ಅಬಕಾರಿ ಇಲಾಖೆ ಎಲ್ಲೆಡೆ ನಿಗಾ ವಹಿಸುತ್ತಿದ್ದು, ದಾಳಿ ಪ್ರಕರಣಗಳನ್ನು ಹೆಚ್ಚಿಸಲಾಗಿದೆ.

       ಈವರೆಗೆ ಸುಮಾರು 59 ಲಕ್ಷ ಮೌಲ್ಯದ 10143 ಲೀ. ಅಕ್ರಮ ಮದ್ಯ ವಶಕ್ಕೆ ಪಡೆದಿದ್ದು, ಅಬಕಾರಿ ಇಲಾಖೆ 318 ಪ್ರಕರಣ ದಾಖಲಿಸಿದ್ದರೆ, ಪೊಲೀಸ್ ಇಲಾಖೆ 49 ಪ್ರಕರಣಗಳನ್ನು ದಾಖಲಿಸಿದೆ. ಸುಮಾರು 1 ಲಕ್ಷ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್, ಅಪರ ಜಿಲ್ಲಾಧಿಕಾರಿ ಸಂಗಪ್ಪ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link