ತುಮಕೂರು:
ವಕೀಲರು ಸಂವಿಧಾನವನ್ನು ಅರಿತು ಅದಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಧೀಶರಾದ ಎಚ್.ಎಸ್.ಮಲ್ಲಿಕಾರ್ಜುನಸ್ವಾಮಿ ಕರೆ ನೀಡಿದರು.
ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ಶೈಕ್ಷಣಿಕ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಥಮ ಅಣಕು ನ್ಯಾಯಾಲಯದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇಶದ ರಕ್ಷಣೆಗೆ ಯೋಧರಂತೆ ಸಂವಿಧಾನ ರಕ್ಷಣೆಗೆ ವಕೀಲರೇ ಸೈನಿಕರು. ಅದನ್ನು ಅರಿತುಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳು ಕಾನೂನಿನ ಸಂಪೂರ್ಣ ಜ್ಞಾನವನ್ನು ಪಡೆದುಕೊಂಡು ಉತ್ತಮ ವಕೀಲರಾಗಬೇಕು ಎಂದು ಹೇಳಿದರು.
ಅಣಕು ನ್ಯಾಯಾಲಯ ಎಂಬುದು ಕಾನೂನು ವಿದ್ಯಾರ್ಥಿಗಳಿಗೆ ಒಂದು ಮೈಲುಗಲ್ಲು ಇದ್ದಂತೆ. ಹಾಗಾಗಿ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಇದರಿಂದ ಮುಂದಿನ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಕರೆ ನೀಡಿದರು.
ಮತ್ತೊಬ್ಬ ನ್ಯಾಯಾಧೀಶರಾದ ಬಿ.ಗಣೇಶ್ ಮಾತನಾಡಿ ವಕೀಲರಾಗುವವರು ಪ್ರತಿಯೊಂದು ವಿಷಯದಲ್ಲೂ ಸಹ ಕನಿಷ್ಠ ಜ್ಞಾನವನ್ನು ಹೊಂದಿರಬೇಕು. ಮುಖ್ಯವಾಗಿ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಸಂಪೂರ್ಣ ಅರಿವಿರಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸತತ ಪ್ರಯತ್ನ ಮಾಡಿದ್ದಲ್ಲಿ ಉತ್ತಮ ವಕೀಲರಾಗಲು ಸಾಧ್ಯ? ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯೋದಯ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಎಚ್.ಎಸ್.ಶೇಷಾದ್ರಿ ಅವರು, ವಿದ್ಯಾರ್ಥಿಗಳು ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕಠಿಣ ಶ್ರಮ, ಅಭ್ಯಾಸ, ಅಧ್ಯಯನದಿಂದ ಮಾತ್ರ ಉತ್ತಮ ವಕೀಲರಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಓದಿನ ಕಡೆ ಹೆಚ್ಚು ಒಲವು ತೋರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲ ಕೆ.ವೆಂಕಟಾಚಲಪತಿ ಸ್ವಾಮಿ, ವಿದ್ಯೋದಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಚಂದ್ರಣ್ಣ, ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಜಿ.ರವಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ